ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ವಿವಾದ ಸರ್ಕಾರದ ಅಂಗಳಕ್ಕೆ

ರಾಮನಗರ ಜಿಲ್ಲಾಡಳಿತದಿಂದ ವರದಿ ಸಲ್ಲಿಕೆ: ಯೇಸು ಪ್ರತಿಮೆ ನಿರ್ಮಾಣಕ್ಕೆ ಮತ್ತೆ ಚಾಲನೆ?
Last Updated 26 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಾಮನಗರ: ಕನಕಪುರ ತಾಲ್ಲೂಕಿನ ವಿವಾದಿತ ಕಪಾಲ ಬೆಟ್ಟದಲ್ಲಿನ (ಮುನೇಶ್ವರ ಬೆಟ್ಟ) ಯೇಸು ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕಳೆದ ಡಿಸೆಂಬರ್‌ 25ರಂದು ಇಲ್ಲಿ ಯೇಸುವಿನ 114 ಅಡಿ ಎತ್ತರದ ಶಿಲಾ ಪ್ರತಿಮೆಗೆ ಶಾಸಕ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದರು. ಬಳಿಕ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು. ಅದರಂತೆ ಕನಕಪುರ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಈ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ತಲುಪಿಸಿದೆ.

ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರವು ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಜಮೀನು ಮಂಜೂರು ಮಾಡಿದೆ. ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ತೀರ್ಮಾನ ಆಗಿದೆ. ಸದ್ಯ ಆ ಜಾಗ ಖಾಸಗಿ ಟ್ರಸ್ಟ್‌ ಸ್ವತ್ತಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಅಲ್ಲಿ ಪ್ರತಿಮೆ ಮಾದರಿ ಹಾಗೂ ಒಂದಿಷ್ಟು ಕಲ್ಲುಗಳು ಇದ್ದವು. ಆದರೆ ಯಾವುದೇ ಕಾಮಗಾರಿ ನಡೆದಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

‘ಮಾಧ್ಯಮಗಳ ವರದಿ ಆಧರಿಸಿ ಅಲ್ಲಿನ ವಸ್ತುಸ್ಥಿತಿ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಕಪಾಲ ಬೆಟ್ಟದಲ್ಲಿನ ಚಟುವಟಿಕೆಗಳ ಬಗ್ಗೆ ವರದಿ ನೀಡಿದ್ದೇವೆ. ಜಮೀನು ವಾಪಸ್‌ ಪಡೆಯುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಕೆಲಸ ನಿಲ್ಲಿಸುವಂತೆ ನಾವು ಯಾರಿಗೂ ಸೂಚನೆ ನೀಡಿಲ್ಲ’ ಎಂದು ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾಹಿತಿ ನೀಡಿದರು.

ಆತುರದ ನಿರ್ಧಾರವಿಲ್ಲ: ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ ಈಗಾಗಲೇ ನಾಲ್ಕು ದಿನ ಕಳೆದಿದೆ. ಆದಾಗ್ಯೂ ಸರ್ಕಾರ ವರದಿ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಥವಾ ಸ್ಪಷ್ಟನೆ ಕೇಳಿಲ್ಲ. ಸದ್ಯ ಬಜೆಟ್‌ ಅಧಿವೇಶನ ನಡೆದಿದ್ದು, ಈ ಹೊತ್ತಿನಲ್ಲಿ ವರದಿ ಬಹಿರಂಗ ಆದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ. ಇದರಿಂದಾಗಿ ಬಜೆಟ್‌ ಸಿದ್ಧತೆ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಹೀಗಾಗಿ ಅಧಿವೇಶನದ ಬಳಿಕವಷ್ಟೇ ವರದಿ ಬಗ್ಗೆ ಚರ್ಚಿಸುವ ಇಲ್ಲವೇ ಅನುಷ್ಠಾನಕ್ಕೆ ತರುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಪ್ರತಿಭಟನೆ ನಿರಂತರ: ಯೇಸು ಪ್ರತಿಮೆ ವಿವಾದವನ್ನು ಆರ್‌ಎಸ್‌ಎಸ್‌ ಸೇರಿದಂತೆ ಬಲಪಂಥೀಯ ಸಂಘಟನೆಗಳು ಹೆಚ್ಚು ಕಾಲ ಜೀವಂತವಾಗಿ ಇರಿಸುವ ಪ್ರಯತ್ನ ನಡೆಸಿವೆ. ಮಂಗಳವಾರ ಸಹ ರಾಮನಗರದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರ್ಕಾರದ ನಿರ್ದೇಶನದಂತೆ ವಸ್ತುಸ್ಥಿತಿ ಅವಲೋಕಿಸಿ, ಅದರ ಅನ್ವಯ ವರದಿ ಸಲ್ಲಿಸಿದ್ದೇವೆ. ಸರ್ಕಾರವೇ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಎಂ.ಎಸ್‌. ಅರ್ಚನಾ, ಜಿಲ್ಲಾಧಿಕಾರಿ

ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ವರದಿ ನೋಡಿ ಪ್ರತಿಮೆ ಕಾಮಗಾರಿ ಪುನರಾರಂಭಿಸುವ ಬಗ್ಗೆ ನಿರ್ಧರಿಸುತ್ತೇವೆ

ಚಿನ್ನುರಾಜ್‌, ಕ್ರೈಸ್ತ ಮುಖಂಡ ಹಾರೋಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT