ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಗಣೇಶೋತ್ಸವದ ಮೇಲೆ ಜಿಲ್ಲಾಡಳಿತದ ಕಣ್ಣು

ಸಾರ್ವಜನಿಕ ಉತ್ಸವಕ್ಕೆ ಸಮಿತಿಗಳಿಂದ ಸಿದ್ಧತೆ; ಅನುಮತಿ ಪಡೆಯವುದು ಕಡ್ಡಾಯ
Last Updated 20 ಆಗಸ್ಟ್ 2020, 13:35 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್‌ ಭೀತಿಯ ನಡುವೆ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭ ಆಗಿದೆ. ಸಾರ್ವಜನಿಕವಾಗಿ ಹಬ್ಬ ಆಚರಣೆ ಸಂಬಂಧ ಜಿಲ್ಲಾಡಳಿತ ಪರಿಷ್ಕೃತ ಹೊರಡಿಸಿದ್ದು, ಅದರ ಅನ್ವಯವೇ ಗಣೇಶೋತ್ಸವ ಆಚರಣೆ ಸಮಿತಿಗಳು ಉತ್ಸವ ನಡೆಸಬೇಕಿದೆ.

ವಾರ್ಡಿಗೊಂದೇ ಗಣಪ: ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಟಾಪನೆ ಸಂಬಂಧ ಸರ್ಕಾರ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ. ಅದರಂತೆ ಹಳ್ಳಿಗಳಲ್ಲಿ ಗ್ರಾಮಕ್ಕೆ ಒಂದು ಹಾಗೂ ನಗರದ ವ್ಯಾಪ್ತಿಯಲ್ಲಿ ವಾರ್ಡಿಗೆ ಒಂದು ಗಣಪತಿ ಮಾತ್ರ ಕೂರಿಸಲು ಅವಕಾಶ ಇದೆ. ಅದುವೇ ರಸ್ತೆಗಳಲ್ಲಿ ಪ್ರತಿಷ್ಟಾಪನೆ ಮಾಡುವಂತೆ ಇಲ್ಲ. ಮೈದಾನ, ದೇವಾಲಯಗಳಲ್ಲಿ ಆಚರಣೆಗೆ ಅವಕಾಶ ಇದೆ. ಅದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಮನೆಗಳಲ್ಲಿ ಹಬ್ಬ ಆಚರಣೆಗೆ ಯಾವುದೇ ವಿಘ್ನ ಇಲ್ಲ. ಆದರೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಂದ ಅನುಮತಿ ಕಡ್ಡಾಯವಾಗಿದೆ. ಸ್ಥಳೀಯ ಸಂಸ್ಥೆ, ಹತ್ತಿರದ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಜೊತೆಗೆ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದರೆ, ಮೈದಾನದ ಉಸ್ತುವಾರಿ ಹೊತ್ತವರ ಬಳಿಯೂ ಅನುಮತಿ ಪಡೆಯಬೇಕಿದೆ. ಗ್ರಾಮಗಳಲ್ಲಿ ಸ್ಥಳೀಯ ಗ್ರಾಪಂನಿಂದ ಅನುಮತಿ ಪಡೆಯಬೇಕಿದೆ. ಈ ಮೂರು ಕಡೆ ಯಾರು ಮೊದಲು ಅನುಮತಿ ಪಡೆಯುತ್ತಾರೆಯೋ ಅವರು ಮಾತ್ರ ಗಣಪನನ್ನು ಕೂರಿಸಬಹುದಾಗಿದೆ. ಇಂತಹ ಸ್ಥಳಗಳಲ್ಲಿ ಕೇವಲ 20 ಮಂದಿಯಷ್ಟೇ ಭಾಗವಹಿಸಲು ಅವಕಾಶ ಇದೆ.

ವಿಸರ್ಜನೆಗೂ ನಿರ್ಬಂಧ: ಕೋವಿಡ್ ಭೀತಿಯಿಂದಾಗಿ ಸಾರ್ವಜನಿಕವಾಗಿ ಗಣಪತಿ ಮೂರ್ತಿ ವಿಸರ್ಜನೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪಸಿದ ಸ್ಥಳದಲ್ಲಿಯೇ ಮೂರ್ತಿ ವಿಸರ್ಜನೆ ನಡೆಯಬೇಕಿದೆ. ಅದು ಸಾಧ್ಯವಾಗದೇ ಹೋದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಲಿವೆ. ಉತ್ಸವ ಆಚರಣೆಗೆ ಜಿಲ್ಲಾಡಳಿತವು ಇದೇ 31ರವರೆಗೆ ಮಾತ್ರ ಅವಕಾಶ ನೀಡಿದೆ. ಗರಿಷ್ಠ 10 ದಿನಗಳವರೆಗೆ ಮೂರ್ತಿಗಳನ್ನು ಇಡಬಹುದು. ಅದರೊಳಗೇ ಹಬ್ಬ ಮುಗಿಸಬೇಕಿದೆ.

4 ಅಡಿ ಎತ್ತರ: ಸಾರ್ವಜನಿಕವಾಗಿ ಪ್ರತಿಷ್ಟಾಪಿಸಲಾಗುವ ಮೂರ್ತಿಗಳ ಎತ್ತರ 4 ಅಡಿ ಮೀರುವಂತೆ ಇಲ್ಲ. ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯವಾಗಿದೆ. ಇನ್ನೂ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಈ ಬಾರಿ ಬ್ರೇಕ್ ಬಿದ್ದಿದ್ದು, ಕಲಾವಿದರಿಗೂ ನಿರಾಸೆ ಆಗಿದೆ.

***
ಗಣಪತಿ ಪ್ರತಿಷ್ಟಾಪನೆಗೆ ಮೂರು ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಸಾರ್ವಜನಿಕರು ತಪ್ಪದೇ ನಿಯಮಗಳನ್ನು ಪಾಲಿಸಬೇಕು

-ಎಂ.ಎಸ್‌. ಅರ್ಚನಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT