ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೃಹಲಕ್ಷ್ಮಿ’ಯರಿಗೆ ₹2 ಸಾವಿರ; ಹರಿದು ಬಂದ ಜನಸಾಗರ

ಯೋಜನೆಗೆ ಜಿಲ್ಲೆಯಾದ್ಯಂತ 146 ಕಡೆ ಏಕಕಾಲಕ್ಕೆ ಚಾಲನೆ; ಮೊದಲ ದಿನ 1.10 ಲಕ್ಷ ಫಲಾನುಭವಿಗಳ ಖಾತೆಗೆ ಹಣ
Published 30 ಆಗಸ್ಟ್ 2023, 13:20 IST
Last Updated 30 ಆಗಸ್ಟ್ 2023, 13:20 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಜಿಲ್ಲೆಯಾದ್ಯಂತ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿತ್ತು. ಗ್ರಾಮ ಪಂಚಾಯಿತಿಗಳಿಂದಿಡಿದು, ಪುರಸಭೆ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಕೇಂದ್ರ ಸೇರಿದಂತೆ ಒಟ್ಟು 146 ಕಡೆ ಏಕಕಾಲಕ್ಕೆ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಮಹಿಳೆಯರು ಸಾಕ್ಷಿಯಾದರು.

ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಾಂಗ್ರೆಸ್ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವೆಡೆ ಕುಳಿತುಕೊಳ್ಳಲು ಕುರ್ಚಿಗಳು ಇರಲಿಲ್ಲ. ಕೆಲವರು ನಿಂತುಕೊಂಡರೆ, ಉಳಿದವರು ನೆಲದಲ್ಲೇ ಕುಳಿತುಕೊಂಡು ಕಾರ್ಯಕ್ರಮ ಕಣ್ತುಂಬಿಕೊಂಡರು.

ಪಂಚಾಯಿತಿಗಳಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು (ಕನಕಪುರ ಮತ್ತು ಚನ್ನಪಟ್ಟಣ ಹೊರತುಪಡಿಸಿ), ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ರಾಮನಗರದಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಹಿಂದೆ ನಮ್ಮದೇ ಕಾಂಗ್ರೆಸ್ ನೇತೃತ್ವದ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದ ಮೋಟಮ್ಮ ಅವರು ಸ್ವಸಹಾಯ ಸಂಘಗಳನ್ನು ರಚಿಸಿ, ಮಹಿಳೆಯರ ಸ್ವಾವಲಂಬನೆಗೆ ಅಡಿಪಾಯ ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಈಗಿನ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ, ಸ್ವಾವಲಂಬನೆಗೆ ಮತ್ತಷ್ಟು ಬಲ ತುಂಬಿದೆ’ ಎಂದರು.

‘ಹೂ ಸಿಗಲಿಲ್ಲ’: ‘ಇದು ಮಹಿಳೆಯರ ಕಾರ್ಯಕ್ರಮ. ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ₹2 ಸಾವಿರ ನೇರವಾಗಿ ಪಾವತಿಯಾಗಲಿದೆ. ಈಗ ವಿಧಾನಸೌಧದಿಂದ ಹೊರಟಿದ್ದು ಇನ್ನೇನು ಖಾತೆಗೆ ಬರಲಿದೆ. ನೀವೆಲ್ಲರೂ ಖುಷಿಯಾಗಿರಬೇಕು. ಹಣದ ಜೊತೆಗೆ, ನನ್ನ ಕಡೆಯಿಂದ ಬಾಗೀನ ಕೊಡುತ್ತಿದ್ದೇನೆ. ಅದರೊಂದಿಗೆ ಹೂ ಕೂಡ ಕೊಡಬೇಕು ಅಂದುಕೊಂಡಿದ್ದೆ. ಆದರೆ, ನಮ್ಮ ಟೈಮಿಗೆ ಹೂ ಸಿಗಲಿಲ್ಲ’ ಎಂದಾಗ ಮಹಿಳೆಯರು ಜೋರಾಗಿ ಚಪ್ಪಳೆ ತಟ್ಟಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕಿ ಗಾಯತ್ರಿ ಸ್ವಾಗತಿಸಿದರು.

ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸಿ. ಸೋಮಶೇಖರ್ ಮಣಿ, ಸದಸ್ಯ ಕೆ. ಶೇಷಾದ್ರಿ ಶಶಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ನಗರಸಭೆ ಪೌರಾಯುಕ್ತ ಎಲ್. ನಾಗೇಶ್, ಮಾಜಿ ಅಧ್ಯಕ್ಷೆ ಜಯಲಕ್ಮ್ಮಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ ಹಾಗೂ ಇತರರು ಇದ್ದರು.

ಅಂಕಿ ಅಂಶ...

146
ಕಡೆ ಜಿಲ್ಲೆಯಾದ್ಯಂತ ಯೋಜನೆಗೆ ಚಾಲನೆ
126
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ
22
ಸ್ಥಳೀಯ ಸಂಸ್ಥೆಗಳಲ್ಲಿ ಚಾಲನೆ
1.10 ಲಕ್ಷ
ಮೊದಲ ದಿನ ₹2 ಸಾವಿರ ಪಡೆದ ಫಲಾನುಭವಿಗಳು

ಪಟ್ಟಿ..1

ಜಿಲ್ಲೆಯ ಗೃಹಲಕ್ಷ್ಮಿ ಫಲಾನುಭವಿಗಳು

ತಾಲ್ಲೂಕು; ಗುರಿ;ನೋಂದಣಿ; ಶೇಕಡವಾರು
ರಾಮನಗರ;70,934;58,683;84.14
ಚನ್ನಪಟ್ಟಣ;70,929;60,570;85.40
ಕನಕಪುರ;75,775;68,313;90.15
ಮಾಗಡಿ;57,450;48,580;84.56
ಹಾರೋಹಳ್ಳಿ;23,782;19,224;80.83
ಒಟ್ಟು;2,98,870;2,56,370;85.78

ಪಟ್ಟಿ...2

ಗೃಹಲಕ್ಷ್ಮಿ: ಯಾವ ಮೂಲದಿಂದ, ಎಷ್ಟು ನೋಂದಣಿ?

ಮೂಲ;ರಾಮನಗರ; ಚನ್ನಪಟ್ಟಣ; ಕನಕಪುರ;ಮಾಗಡಿ;ಹಾರೋಹಳ್ಳಿ;ಒಟ್ಟು
ಚಾಟ್‌ಬೊಟ್;4,816;3,636;8,184;2,441;2832;21,909
ಮೊಬೈಲ್ ಒನ್;26,655;21,748;22,124;17,221;3,588;91,336
ಸೇವಾಸಿಂಧು;10,661;12,451;12,794;11,306;4,531;51,733
ಎಸ್.ಎನ್.ಎಸ್;17,551;22,735;25,211;17,612;8,283;91,392
ಒಟ್ಟು;59,683;60,570;68,313;48,580;19,224;2,56,370

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಪಾವತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು 
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಪಾವತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು 

ಕಾರ್ಯಕ್ರಮದ ವಿಶೇಷತೆ

ಮೈಸೂರಿನಲ್ಲಿ ನಡೆದ ಮುಖ್ಯ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾರ್ಯಕ್ರಮ ನಡೆದ ಎಲ್ಲಾ ಕಡೆಯೂ ಎಲ್‌ಸಿಡಿ ಸ್ಕ್ರೀನಿಂಗ ವ್ಯವಸ್ಥೆ ಮಾಡಲಾಗಿತ್ತು. ರಾಮನಗರ ಜಿ. ಪಂ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಜಿ.ಪಂ. ಸಭಾಂಗಣ ತುಂಬಿ ತುಳುಕುತ್ತಿತ್ತು. ಬಾಲ್ಕನಿಯೂ ಭರ್ತಿಯಾಗಿತ್ತು. ಕುರ್ಚಿಗಳಿಲ್ಲದೆ ಹಲವರು ನೆಲದ ಮೇಲೆ ಕುಳಿತಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಅಂಗನವಾಡಿ ಆಶಾ ಕಾರ್ಯಕರ್ತೆಯರು ಕಾಂಗ್ರೆಸ್ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ.

‘ಅಭಿವೃದ್ಧಿಗಾಗಿ ₹550 ಕೋಟಿ ಬಿಡುಗಡೆ’

‘ಕ್ಷೇತ್ರದಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಸರ್ಕಾರದಿಂದ ₹550 ಕೋಟಿ ಬಿಡುಗಡೆಯಾಗಿದೆ. ನಗರಕ್ಕೆ 24x7 ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು ವರ್ಷಾಂತ್ಯಕ್ಕೆ ನೀರು ಸಿಗಲಿದೆ. ಕ್ಷೇತ್ರಕ್ಕೆ 5 ಸಾವಿರ ಮನೆಗಳು ಮಂಜೂರಾಗಿದ್ದು ನಿರ್ಮಾಕ್ಕಾಗಿ 75 ಎಕರೆ ಗುರುತಿಸಲಾಗಿದೆ. ನಿವೇಶನ ಇಲ್ಲದವರಿಗೆ ನಿವೇಶನ ಸಹ ಹಂಚಲಾಗುವುದು. ರಾಮನಗರದಲ್ಲಿ 8 ಉದ್ಯಾನಗಳ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಶಾಸಕ ಇಕ್ಭಾಲ್ ಹುಸೇನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT