ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ತೆರಿಗೆ ಪಾಲು ಕೊಟ್ಟರೆ ಗೃಹಲಕ್ಷ್ಮಿ ದುಪ್ಪಟ್ಟು: ಸಂಸದ ಸುರೇಶ್

ಗ್ಯಾರಂಟಿ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಸಂಸದ ಸುರೇಶ್
Published 1 ಮಾರ್ಚ್ 2024, 7:41 IST
Last Updated 1 ಮಾರ್ಚ್ 2024, 7:41 IST
ಅಕ್ಷರ ಗಾತ್ರ

ಮಾಗಡಿ (ರಾಮನಗರ): ‘ಕೇಂದ್ರ ಸರ್ಕಾರಕ್ಕೆ ನಮ್ಮ ಕರ್ನಾಟಕದಿಂದ ಕೊಡುತ್ತಿರುವ ₹ 4.30 ಲಕ್ಷ ಕೋಟಿ ತೆರಿಗೆಯಲ್ಲಿ, ನಮಗೆ ಶೇ 60–70ರಷ್ಟು ಪಾಲು ಕೊಟ್ಟರೆ, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಕೊಡುತ್ತಿರುವ ₹ 2 ಸಾವಿರಕ್ಕೆ ಇನ್ನೂ ₹ 2 ಸಾವಿರ ಸೇರಿಸಿ ಕೊಡುತ್ತೇವೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪಟ್ಟಣದ ಕೋಟೆ ಮೈದಾನದಲ್ಲಿ ತಾಲ್ಲೂಕು ಆಡಳಿತವು ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಪಾಲಿನ ಹಣ ಬಂದರೆ ರಾಜ್ಯದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ, ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿಕೊಳ್ಳುತ್ತೇವೆ’ ಎಂದರು.

‘ಗ್ಯಾರಂಟಿಗಳು ಚುನಾವಣೆ ಬಳಿಕ ಇರುವುದಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರೇ ಬಂದರೂ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಅವುಗಳಿಂದಾಗಿ ತಿಂಗಳಿಗೆ‌ ಪ್ರತಿ ಕುಟುಂಬಕ್ಕೆ ಕನಿಷ್ಠ ₹ 5 ಸಾವಿರ ಉಳಿತಾಯವಾಗುತ್ತಿದೆ. ಸರ್ಕಾರ ಜನರ ತೆರಿಗೆ ಹಣವನ್ನು ಅವರ ಅಭಿವೃದ್ಧಿಗೆ ಬಳಸಿ, ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ’ ಎಂದು ಹೇಳಿದರು.

‘ಮಾಗಡಿಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ತಾಲ್ಲೂಕಿನಲ್ಲಿ 217 ಉಪ ಕಂದಾಯ ಗ್ರಾಮಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. 11 ಸಾವಿರ ಜನರಿಗೆ ಇ-ಸ್ವತ್ತು ವಿತರಣೆಗೆ ತಯಾರಿ ನಡೆದಿದೆ. ಜಿಲ್ಲೆಯಲ್ಲಿ ತಲಾ ₹10 ಕೋಟಿ ವೆಚ್ಚದಲ್ಲಿ 25 ಶಾಲೆಗಳನ್ನು ನಿರ್ಮಾಣವಾಗಲಿದ್ದು, ಮಾಗಡಿಯಲ್ಲಿ 5 ಶಾಲೆ ತಲೆ ಎತ್ತಲಿವೆ. ಮಂಚನಬೆಲೆಯನ್ನು ಪ್ರವಾಸಿ ತಾಣ ಮಾಡಲಾಗುವುದು. ಬಡವರಿಗೆ 10 ಸಾವಿರ ನಿವೇಶನ ಹಂಚಲು ನಿರ್ಧರಿಸಿದ್ದು, ಈಗಾಗಲೇ 162 ಎಕರೆ ಗುರುತಿಸಲಾಗಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ‘ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ತಯಾರಿಸುವಾಗ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ₹1 ಸಾವಿರ ಕೊಡುವ ಬಗ್ಗೆ ಚರ್ಚೆ ನಡೆಯುವಾಗ, ಸಂಸದ ಡಿ.ಕೆ. ಸುರೇಶ್ ಅವರು ಒಂದು ಸಾವಿರ ಯಾವುದಕ್ಕೂ ಸಾಲದು, ₹ 2 ಸಾವಿರ ಕೊಡಿ ಎಂದು ಆಗ್ರಹಿಸಿದ್ದರಿಂದ ₹ 2 ಸಾವಿರ ಸಿಗುತ್ತಿದೆ’ ಎಂದರು.

ಶಂಕುಸ್ಥಾಪನೆ ಮರೆತರು: ಮಂಚನಬೆಲೆ ಮತ್ತು ವೈ.ಜಿ. ಗುಡ್ಡ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ, ಜಾಕ್ವೆಲ್ ಮತ್ತು ಡಬ್ಲ್ಯೂ.ಟಿ.ಪಿ ಹಾಗೂ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಕುದೂರು ಪಟ್ಟಣದ ರಾಮಲೀಲಾ ಆಟದ ಮೈದಾನವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಹಾಗೂ ಮಾಗಡಿ ಪಟ್ಟಣದ ಗುರುಭವನ ಕಟ್ಟಡ ಹಾಗೂ ಕೆಂಪೇಗೌಡ ಬಯಲು ಮಂದಿರ ‌ನಿರ್ಮಾಣಕ್ಕೆ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಬಳಿ ಕಾಮಗಾರಿಯ ಶಿಲಾನ್ಯಾಸ ಅನಾವರಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಗಣ್ಯರು ಅದರತ್ತ ಗಮನ ಹರಿಸದೆ ಸಮಾವೇಶ ಮುಗಿಸಿ ತೆರಳಿದರು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್, ತಹಶೀಲ್ದಾರ್ ಸುರೇಂದ್ರಮೂರ್ತಿ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಮಾಜಿ ಶಾಸಕ ಕೆ. ರಾಜು, ಪಕ್ಷದ ಮುಖಂಡರಾದ ಅಶೋಕ್, ಕಲ್ಪನಾ ಶಿವಣ್ಣ, ಕಮಲಮ್ಮ, ದೀಪಾ ಮುನಿರಾಜ್ ಹಾಗೂ ಪಕ್ಷದ ಸ್ಥಳೀಯ ಪದಾಧಿಕಾರಿಗಳು ಇದ್ದರು.

ತಾಲ್ಲೂಕಿನ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ ಫಲಾನುಭವಿಗಳನ್ನು ಕರೆ ತರಲಾಗಿತ್ತು. ಮೈದಾನದಲ್ಲೇ ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶಕ್ಕೆ ಬಂದವರ ದಾಹ ನೀಗಿಸಲು ಮಜ್ಜಿಗೆ ಮತ್ತು ನೀರಿನ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಸನ್ಮಾನಿಸಲಾಯಿತು.

ಮಾಗಡಿಯ ಕೋಟೆ ಮೈದಾನದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು
ಮಾಗಡಿಯ ಕೋಟೆ ಮೈದಾನದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು
ರಾಜ್ಯದ ಆರ್ಥಿಕ ಸ್ಥಿತಿಗತಿ ಸುಧಾರಿಸಿದರೆ ಮತ್ತಷ್ಟು ಗ್ಯಾರಂಟಿ ಯೋಜನೆಗಳನ್ನು ಕೊಡಬಹುದು. ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಹಣ ನಮಗೆ ಸರಿಯಾಗಿ ಹಂಚಿಕೆಯಾದರೆ ಅದು ಸಾಧ್ಯವಾಗಲಿದೆ
– ಲಕ್ಷ್ಮಿ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಕಾರ್ಯಕರ್ತೆಯರಿಗೆ ಆರನೇ ಗ್ಯಾರಂಟಿ: ಲಕ್ಷ್ಮಿ ‘ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಆರನೇ ಗ್ಯಾರಂಟಿಯನ್ನು ಸರ್ಕಾರ ಈಡೇರಿಸುತ್ತದೆ. ಸ್ವಾರ್ಥದ ರಾಜಕಾರಣಕ್ಕಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಕೇಂದ್ರ ಮತ್ತು ಹಿಂದಿನ ರಾಜ್ಯ ಸರ್ಕಾರದ ಜನವಿರೋಧಿ ಆಡಳಿತದಿಂದ ಸಂಕಷ್ಟದಲ್ಲಿದ್ದ ಜನರಿಗೆ ಸ್ಪಂದಿಸಲು ಜಾರಿಗೆ ತಂದೆವು. ಈ ಪುಣ್ಯದ‌ ಕೆಲಸಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ‘ಮಾಗಡಿ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ 56 ಸಾವಿರ ನೋಂದಣಿ ಆಗಿದ್ದು 52 ಸಾವಿರ ಯಜಮಾನಿಯರಿಗೆ ತಲಾ ₹ 2 ಸಾವಿರ ಹಣ ತಲುಪುತ್ತಿದೆ. ನಾವು ಅಂಬಾನಿ ಅದಾನಿಯವರ ಸಾಲ ಮನ್ನಾ ಮಾಡಲಿಲ್ಲ. ಗ್ಯಾರಂಟಿಗಳು ಮಹಿಳೆಯರಿಗೆ ಶಕ್ತಿ ತುಂಬುವ ಜೊತೆಗೆ ಗಂಡಸರ ಹಣ ಉಳಿಸುತ್ತಿವೆ. ಸಂಸದ ಸುರೇಶ್ ಅವರು ಅಧಿಕಾರ ಇದ್ದರೂ ಮತ್ತು ಇಲ್ಲದಿದ್ದರೂ ಅಭಿವೃದ್ಧಿಪರವಾಗಿರುವ ವ್ಯಕ್ತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಏನು ಮಾಡಿರುವೆನೆಂದು ತೋರಿಸುವೆ ಬನ್ನಿ: ಬಾಲಕೃಷ್ಣ ‘ಶಾಸಕನಾಗಿ ಎಂಟು ತಿಂಗಳಲ್ಲಿ ಬಾಲಕೃಷ್ಣ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರು ಈಗಲೇ ಬರಲಿ. ಏನೇನು ಮಾಡಿರುವೆ ಎಂದು ತೋರಿಸುವೆ. ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹ 150 ಕೋಟಿ ಮಾಗಡಿ ಕೋಟೆ ಹಾಗೂ ಕೆಂಪೇಗೌಡ ಅವರು ಜನಿಸಿದ ಕೆಂಪಾಪುರ ಅಭಿವೃದ್ಧಿಗೆ ₹ 50 ಕೋಟಿ ಬಿಡುಗಡೆಯಾಗಿದೆ. ಕುಡಿಯುವ ನೀರು ಕೆರೆ ತುಂಬಿಸುವ ಯೋಜನೆ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ ಸೇರಿದಂತೆ ಕ್ಷೇತ್ರದಲ್ಲಿ ಹಲವು ಕೆಲಸಗಳಾಗುತ್ತಿವೆ. ಸಂಸದ ಸುರೇಶ್ ಅವರಿಂದಾಗಿ ಕ್ಷೇತ್ರದಲ್ಲಿ ಆರು ತಿಂಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು. ‘ಮಹಿಳಾ ಸಬಲೀಕರಣ ಎಂದು ಬಾಯಿ ಬಡಿದುಕೊಂಡು ರಾಜಕಾರಣ ಮಾಡಿದವರು ಏನೂ ಮಾಡಲಿಲ್ಲ. ಆದರೆ ಕಾಂಗ್ರೆಸ್ ಮಹಿಳೆಗೆ ಶಕ್ತಿ ತುಂಬಿದೆ. ಹೆಣ್ಣು ಮಕ್ಕಳು ಉಪಕಾರ‌ ಸ್ಮರಣೆ ಇರುವವರು. ಅವರಿಗೆ ಗ್ಯಾರಂಟಿಗಳನ್ನು ಕೊಟ್ಟಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವುದರಲ್ಲಿ ಎರಡು ಮಾತಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿಯನ್ನು ಬೀದಿಗೆ ತಂದ ಎಚ್‌ಡಿಕೆ’

‘ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಚುನಾವಣೆಯಲ್ಲಿ ಸಂಖ್ಯೆ ಆಧಾರದ ಮೇಲೆ ಕಾಂಗ್ರೆಸ್‌ ಮೂರು ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿತ್ತು. ಹೀಗಿದ್ದರೂ ಕೇವಲ 19 ಶಾಸಕರನ್ನು ಇಟ್ಟುಕೊಂಡಿರುವ ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುತ್ತಾರೆಂದರೆ ಏನೆನ್ನಬೇಕೊ? ಚುನಾವಣೆಯಲ್ಲಿ ಬಿಜೆಪಿಯವರು ಅಡ್ಡಮತ ಹಾಕಿದರೆಂದು ದೇಶದಲ್ಲಿ ಚರ್ಚೆಯಾಯಿತು. ಕುಮಾರಸ್ವಾಮಿ ಅವರಿಂದಾಗಿ ಬಿಜೆಪಿಯವರು ಮುಖಭಂಗ ಅನುಭವಿಸುವಂತಾಯಿತು’ ಎಂದು ಬಾಲಕೃಷ್ಣ ಹೇಳಿದರು. ‘ಎಚ್‌ಡಿಕೆ ಎಂದಿಗೂ ಮೈತ್ರಿಯಲ್ಲಿ ಇರುವುದಿಲ್ಲ. ಅವರ ಗರಡಿಯಲ್ಲಿ ಪಳಗಿರುವ ನಮಗಿದು ಚೆನ್ನಾಗಿ ಗೊತ್ತು. ಒಂದು ಕಡೆ ನೆಲೆ ನಿಲ್ಲದ ಅವರು ಅವರನ್ನು ಬಿಟ್ಟು ಇವರ‍್ಯಾರು ಎಂದು ಬೇರೆ ಬೇರೆ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT