ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ ತಾಲ್ಲೂಕು ಘೋಷಣೆ: ವರ್ಷವಾದರೂ ಅಧಿಕಾರಿಗಳ ನೇಮಕವಿಲ್ಲ

ಗೋವಿಂದರಾಜು ವಿ 
Published 18 ಮಾರ್ಚ್ 2024, 5:10 IST
Last Updated 18 ಮಾರ್ಚ್ 2024, 5:10 IST
ಅಕ್ಷರ ಗಾತ್ರ

ಹಾರೋಹಳ್ಳಿ: ಪಟ್ಟಣವಾಗಿದ್ದ ಹಾರೋಹಳ್ಳಿ ತಾಲ್ಲೂಕು ಆಗಿ ಮೇಲ್ದರ್ಜೆಗೇರಿ ಒಂದು ವರ್ಷವಾಗಿದೆ (2023ರ ಫೆ.21). ಆದರೆ, ತಾಲ್ಲೂಕಿಗೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ನೇಮಕವೂ ಆಗಿಲ್ಲ, ಕಾಯಂ ಕಟ್ಟಡಗಳೂ ಇಲ್ಲ. 

ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಕೊನೆಯ ಬಜೆಟ್‌ನಲ್ಲಿ ಹಾರೋಹಳ್ಳಿ ಪಟ್ಟಣವನ್ನು ತಾಲ್ಲೂಕು ಆಗಿ ಘೋಷಿಸಲಾಗಿತ್ತು. 

ರಾಮನಗರ ಜಿಲ್ಲೆಯ 5ನೇ ಹೊಸ ತಾಲ್ಲೂಕು ಆಗಿರುವ ಹಾರೋಹಳ್ಳಿಗೆ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇಮಕವಾಗಿದೆ. ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕೆಳಭಾಗದಲ್ಲಿ ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿ ಮಾಡಲಾಗಿದೆ. ಉಳಿದಂತೆ ಬೇರೆ ಇಲಾಖೆಗಳಿಗೆ ಅಧಿಕಾರಿಗಳನ್ನು ‌ನೇಮಕ ಮಾಡಿಲ್ಲ.

ಒಂದು ತಾಲ್ಲೂಕು ಕಾರ್ಯಾರಂಭಗೊಳ್ಳಬೇಕಾದರೆ 32 ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳ ನೇಮಕವಾಗಬೇಕು. ಇಲಾಖಾ ಕಚೇರಿಗಳಿಗೆ ಸ್ಥಳ ನಿಗದಿಯಾಗಬೇಕು. ಕಚೇರಿಗಳು ಬೇಕು. ಸರ್ಕಾರ ಈ ಕುರಿತು ಗಮನಹರಿಸಬೇಕಿತ್ತು. ಆದರೆ, ಅದಾವುದೂ ತಾಲ್ಲೂಕಿನಲ್ಲಿ ಆಗಿಲ್ಲ ಎಂಬುದು ತಾಲ್ಲೂಕಿನ ಜನರ ದೂರು.

ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ವರ್ಷ ಕಳೆದರೂ ಇದುವರೆಗೂ ವಾರ್ಡ್‌ ವಿಂಗಡಿಸುವ ಕೆಲಸ ಮಾಡಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂಬ ಆರೋಪಿಸುತ್ತಾರೆ ಹಾರೋಹಳ್ಳಿ ನಿವಾಸಿ ಸುರೇಶ್‌.

ಹಾರೋಹಳ್ಳಿ ತಾಲ್ಲೂಕು ಕಚೇರಿಯ ಕಟ್ಟಡ ನಿರ್ಮಾಣ ಜಾಗ ಗುರುತಿಸಲಾಗಿದೆ. ಹಾರೋಹಳ್ಳಿ- ಆನೇಕಲ್ ರಸ್ತೆಯಲ್ಲಿ ಪಟ್ಟಣಕ್ಕೆ ಹೊಂದಿಕೊಂಡಂತೆ ಒಂದು ಎಕರೆ ಜಾಗದಲ್ಲಿ ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ.

252 ಗ್ರಾಮಗಳು: ಕನಕಪುರ ತಾಲ್ಲೂಕಿನ ಭಾಗವಾಗಿದ್ದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಬೇರ್ಪಡಿಸಿ ನೂತನ ತಾಲೂಕು ರಚನೆಗೆ ಸರಕಾರ ಆದೇಶ ಹೊರಡಿಸಿ, 2 ಹೋಬಳಿಗಳ 26 ಕಂದಾಯ ವೃತ್ತಗಳನ್ನು ಗುರುತಿಸಿದೆ. ಹಾರೋಹಳ್ಳಿ ಹೋಬಳಿಯ 15 ವೃತ್ತಗಳ 145 ಗ್ರಾಮಗಳು ಮರಳವಾಡಿ ಹೋಬಳಿಯ ವೃತ್ತಗಳ 145 ಗ್ರಾಮಗಳು ಸೇರಿ ಒಟ್ಟು 252 ಗ್ರಾಮಗಳನ್ನು ಬೇರ್ಪಡಿಸಿ ನೂತನ ತಾಲ್ಲೂಕು ರಚಿಸಲಾಗಿದೆ.

ದಾಖಲಾತಿಗಳು ಕನಕಪುರ ತಾಲ್ಲೂಕಿನಿಂದ ಹಾರೋಹಳ್ಳಿ ತಾಲ್ಲೂಕು ಎಂದು ಬದಲಾವಣೆಯಾಗಬೇಕು ಈಗಾಗಲೇ ಹಲವು ದಾಖಲಾತಿಗಳು ಹಾರೋಹಳ್ಳಿ ಎಂದು ಬದಲಾವಣೆಗೊಂಡಿವೆ. ಪ್ರಮುಖವಾಗಿ ಕಂದಾಯ ಇಲಾಖೆಗಳ ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿವೆ ಈಗಾಗಲೇ ಹಾರೋಹಳ್ಳಿ ತಾಲ್ಲೂಕು ಎಂದು ನಮೂದಾಗಿವೆ. ಇನ್ನು ಕೆಲವು ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿವೆ.

ವಿವಿಧ ಯೋಜನೆ ಪಡೆಯಲು ಸಮಸ್ಯೆ: ಸರ್ಕಾರ ರೈತರಿಗೆ ನೀಡುತ್ತಿರುವ ಬರ ಪರಿಹಾರ ಸೇರಿದ್ದಂತೆ ಜಮೀನು ಪ್ರಕ್ರಿಯೆಗಳು ಹಾಗೂ ಹಲವು ಯೋಜನೆಗಳ ಅನುಕೂಲ ಪಡೆಯಲು ಸಮಸ್ಯೆ ಆಗುತ್ತಿದ್ದು,  ತಾಂತ್ರಿಕ ದೋಷ ಉಂಟಾಗಿದೆ. ಅಧಿಕೃತ ಹಾರೋಹಳ್ಳಿ ತಾಲ್ಲೂಕು ಎಂದು ನಮೂದು ಆಗುತ್ತಿಲ್ಲ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಇದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ. 

ನಡೆಯದ ಗ್ರಾ.ಪಂ ಚುನಾವಣೆ:ಹಾರೋಹಳ್ಳಿ ಗ್ರಾಮ ಪಂಚಾಯಿತಿಯಿಂದ ,ಪಟ್ಟಣ ಪಂಚಾಯಿತಿಯನ್ನಾಗಿ ಬೇರ್ಪಡಿಸಿ ಕೊಳ್ಳಿಗಾನಹಳ್ಳಿ, ದ್ಯಾವಸಂದ್ರ, ಟಿ. ಹೊಸಹಳ್ಳಿ, ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಗಳ ಕೆಲವು ಗ್ರಾಮಗಳನ್ನು ಗಡಿಗಳನ್ನಾಗಿ ಗುರುತಿಸಲಾಗಿತ್ತು. ಆದರೆ ಈವರೆಗೂ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಒಳಗೊಂಡಂತೆ, ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಚುನಾವಣೆ ನಡೆಯದಿರುವುದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ಆದಷ್ಟು ಬೇಗ ಸರ್ಕಾರ ಇತ್ತ ಗಮನಹರಿಸಿ ಎಲ್ಲಾ ಇಲಾಖೆಗೆ ಅಧಿಕಾರಿಗಳನ್ನು ನೇಮಿಸಿ, ತಾಲ್ಲೂಕಿಗೆ  ಬೇಕಾದ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬ ಒತ್ತಾಯ ತಾಲ್ಲೂಕಿನ ಜನರದ್ದು. 

ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸರ್ಕಾರ ಆದಷ್ಟು ಬೇಗನೆ ಅನುದಾನ ನೀಡಿ ಹೊಸ ಕಟ್ಟಡ ನಿರ್ಮಾಣ ಮಾಡಿದರೆ ಕೆಲಸ ಮಾಡಲು ಅನುಕೂಲವಾಗುವುದು
ನಟರಾಜು,  ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ
ಹಿಂದಿನ ಬಿಜೆಪಿ ಸರ್ಕಾರ ತಾಲ್ಲೂಕು ಕಟ್ಟಡಕ್ಕೆ ಜಾಗ ಗುರುತಿಸಿದ್ದು ಸರ್ಕಾರ ಬದಲಾದ ನಂತರ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಆದಷ್ಟು ಬೇಗನೆ ತಾಲ್ಲೂಕು ಆಡಳಿತವನ್ನು ಕಾರ್ಯಗತಗೊಳಿಸಬೇಕು
-ಗೌತಮ್ ಗೌಡ, ಅಧ್ಯಕ್ಷ ಹಾರೋಹಳ್ಳಿ ತಾಲ್ಲೂಕು ಹೋರಾಟ ಸಮಿತಿ
ಹೊಸ ತಾಲ್ಲೂಕು ಆಗಿ ಕನಕಪುರ ಹಾರೋಹಳ್ಳಿ ಎರಡೂ ಕಡೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಕಟ್ಟಡ ವ್ಯವಸ್ಥೆ ಮಾಡಬೇಕು
- ಚೀಲೂರು ಮುನಿರಾಜು, ರೈತ ಸಂಘದ ಜಿಲ್ಲಾಧ್ಯಕ್ಷ
ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚಿದಂತೆ ಹಾರೋಹಳ್ಳಿಯತ್ತ ಜನರು ಮುಖ ಮಾಡಿದ್ದಾರೆ. ಹಾಗಾಗಿ ನೂತನ ತಾಲ್ಲೂಕಿಗೆ ಮೂಲಸೌಕರ್ಯಗಳ ಒದಗಿಸಬೇಕು
-ಶ್ರೀನಿವಾಸ್ ಎಚ್.ಟಿ., ಅಧ್ಯಕ್ಷ ಹಾರೋಹಳ್ಳಿ ನಾಗರಿಕ ಹಿತ ಸಂರಕ್ಷಣಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT