ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೋನ್‌ ಕದ್ದಾಲಿಕೆ: ಎಚ್‌ಡಿಕೆ ಭ್ರಮೆ; ಶಾಸಕ ಬಾಲಕೃಷ್ಣ

ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ: ಶಾಸಕ ಬಾಲಕೃಷ್ಣ ಪ್ರಶ್ನೆ
Published 22 ಮೇ 2024, 5:03 IST
Last Updated 22 ಮೇ 2024, 5:03 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ರಾಮನಗರ: ‘ಅಶ್ಲೀಲ ಕೃತ್ಯಗಳ ವಿಡಿಯೊ ಮಾಡಿಕೊಳ್ಳುವಂತೆ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಕಾಂಗ್ರೆಸ್‌ನವರು ಹೇಳಿದ್ರಾ ಅಥವಾ ಆತ ಅತ್ಯಾಚಾರ ಎಸಗುವಾಗ ಕೊಠಡಿಯಲ್ಲಿ ಕಾಂಗ್ರೆಸ್‌ನವರು ನಿಂತು ವಿಡಿಯೊ ಸೆರೆ ಹಿಡಿದ್ರಾ’ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಪ್ರಶ್ನಿಸಿದ್ದಾರೆ.

‘ಇದೆನ್ನೆಲ್ಲಾ ಕಾಂಗ್ರೆಸ್‌ನವರೇ ಮಾಡಿದಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ.  ವಿಡಿಯೊ ಮಾಡಿಕೊಂಡಿದ್ದು ಜೆಡಿಎಸ್ ಸಂಸದ. ಬಹಿರಂಗಗೊಳಿಸಿದ್ದು ಬಿಜೆಪಿ ನಾಯಕ. ಸುಖಾಸುಮ್ಮನೆ ಕಾಂಗ್ರೆಸ್‌ನವರನ್ನು ವಿಲನ್ ಮಾಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಗ ಮತ್ತು ಮೊಮ್ಮಗ ತಪ್ಪು ಮಾಡಿದ ಬಗ್ಗೆ ಗೊತ್ತಿದ್ದರೂ ದೇವೇಗೌಡರಿಗೆ ಪುತ್ರ ಹಾಗೂ ಮೊಮ್ಮಗನ ಮೇಲಿನ ವ್ಯಾಮೋಹ ಕಡಿಮೆಯಾಗಲಿಲ್ಲ. ಪ್ರಜ್ವಲ್‌ಗೆ ಯಾಕೆ ಟಿಕೆಟ್ ಕೊಡಬೇಕು. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಪ್ರಜ್ವಲ್ ತನ್ನ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ಬದಲಾಗಿ ತಂದೆಗೆ ತಕ್ಕ ಮಗನಾದ. ನೂಲಿನಂತೆ ಸೀರೆಯಲ್ಲವೇ. ಒಂದು ಕಾಲಕ್ಕೆ ತಾನು ಕೂಡ ದಾರಿ ತಪ್ಪಿದ ಮಗ ಎಂದು ಸ್ವತಃ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ ಅಲ್ಲವೇ ಎಂದರು.

ಕಾಂಗ್ರೆಸ್‌ ಸರ್ಕಾರವು ದೇವೇಗೌಡರ ಕುಟುಂಬದ ದೂರವಾಣಿ ಕದ್ದಾಲಿಕೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ತಮ್ಮಷ್ಟಕ್ಕೆ ತಾವೇ ಕಲ್ಪನೆ ಮಾಡಿಕೊಂಡು ಆರೋಪ ಮಾಡುತ್ತಿದ್ದಾರೆ. ಅವರು ಎಂದಾದರೂ ಸತ್ಯ ಹೇಳಿರುವುದನ್ನು ನೋಡಿದ್ದೀರಾ. ಅವರು ಸತ್ಯ ಮಾತನಾಡಿದ ಉದಾಹರಣೆ ಇದ್ದರೆ ಕೊಡಿ ಎಂದು ಸುದ್ದಿಗಾರರನ್ನು ಕೇಳಿದರು.

ಒಕ್ಕಲಿಗರ ನಾಯಕತ್ವ ಈ ಹಿಂದೆ ಜನತಾದಳದಲ್ಲಿತ್ತು. ಈಗ ಅದು ಛಿದ್ರವಾಗಿದೆ. ಎಲ್ಲ ಪಕ್ಷದಲ್ಲೂ ಒಕ್ಕಲಿಗರು ಗುರುತಿಸಿಕೊಳ್ಳುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯ, ನಾಯಕತ್ವ ಈಗ ಕಾಂಗ್ರೆಸ್ ಪಕ್ಷದಲ್ಲಿದೆ. ಒಕ್ಕಲಿಗರ ನಾಯಕತ್ವವನ್ನು ಜೆಡಿಎಸ್ ನವರು ಮೋದಿ ಪಾದಕ್ಕೆ ಅಡವಿಟ್ಟಿದ್ದಾರೆ ಎಂದು ಬಾಲಕೃಷ್ಣ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT