ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಮುಸ್ಲಿಮರ ವಿರುದ್ಧ ಎಚ್‌ಡಿಕೆ ಬಹಿರಂಗ ಅಸಮಾಧಾನ

ಮೀಸಲಾತಿ ನೆರವು ಕೊಟ್ಟಿದ್ದಕ್ಕೆ ಕೃತಜ್ಞತೆ ಬೇಡವೇ: ಪ್ರಶ್ನೆ
Published 24 ಜೂನ್ 2024, 7:37 IST
Last Updated 24 ಜೂನ್ 2024, 7:37 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣದಲ್ಲಿ ನಾನು ಮತ್ತು ಸಿ.ಪಿ. ಯೋಗೇಶ್ವರ್ ಮುಂಚಿನಿಂದಲು ಹೊಡೆದಾಡಿಕೊಂಡೇ ಬಂದಿದ್ದೆವು. ಬದಲಾದ ಪರಿಸ್ಥಿತಿಯಲ್ಲಿ ನಾವೀಗ ಅಣ್ಣ–ತಮ್ಮಂದಿರಂತೆ ಇದ್ದೇವೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಎರಡೂ ಪಕ್ಷದವರು ಸೇರಿ ಒಮ್ಮತದ ಅಭ್ಯರ್ಥಿ ಘೋಷಿಸುತ್ತೇವೆ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಬೈರಾಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಅಭ್ಯರ್ಥಿ ಕುರಿತು ನಿಧಾನವಾಗಿ ಹೇಳುವೆ. ಅದಕ್ಕೂ ಮುಂಚೆ, 20 ವರ್ಷಗಳಿಂದ ಸಂಘರ್ಷ ಮಾಡಿಕೊಂಡೇ ಬಂದಿರುವ ಕ್ಷೇತ್ರದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ನಡುವೆ ದೇಶದ ಹಿತದೃಷ್ಟಿಯಿಂದ ಹೊಂದಾಣಿಕೆ ಆಗಬೇಕಿದೆ’ ಎಂದರು.

‘ನನಗೆ ಕೇಂದ್ರ ಸರ್ಕಾರದಲ್ಲಿ ಸಿಕ್ಕಿರುವ ಅವಕಾಶ ಕಂಡು, ನನ್ನನ್ನು ಮುಗಿಸಲೇಬೇಕು ಎಂದು ಹೊರಟ್ಟಿದ್ದಾರೆ. ಟಿ.ವಿ. ಹಾಕಿದರೆ ಅದು ಗೊತ್ತಾಗುತ್ತದೆ. ಲಕ್ಷಾಂತರ ಕಾರ್ಯಕರ್ತರಿರುವ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ. ನಾನು ಹಾಸನದಲ್ಲಿ ಹುಟ್ಟಿದರೂ, ನನಗೆ ರಾಜಕೀಯ ಜನ್ಮದ ಕೊಟ್ಟ ರಾಮನಗರ ಜಿಲ್ಲೆಯ ಜನ, ನನ್ನ ಪಾಲಿನ ದೇವರು’ ಎಂದು ಹೇಳಿದರು.

ಕೃತಜ್ಞತೆ ಬೇಡವೆ?: ‘ನಾನು ರೇಷ್ಮೆ ಮಾರುಕಟ್ಟೆ ಮಾಡಲು ಹೋದಾಗ ರಾಮನಗರದಲ್ಲಿ ನನ್ನ ವಿರುದ್ಧ ದೊಡ್ಡ ಪ್ರತಿಭಟನೆ ಮಾಡಿಸಿ, ಮುಸ್ಲಿಮರ ಮತಗಳನ್ನು ಒಡೆದರು. ಮುಸ್ಲಿಮರ ಮೇಲೆ ನಾನು ಮತ್ತು ದೇವೇಗೌಡರು ತುಂಬಾ ಗೌರವ ಇಟ್ಟುಕೊಂಡಿದ್ದೇವೆ. ಆ ಸಮುದಾಯಕ್ಕೆ ಮೀಸಲಾತಿ ಕೊಟ್ಟು, ನೆರವು ನೀಡಿದ ನಾವು ಎಂದಿಗೂ ಅವರನ್ನು ಕೈ ಬಿಟ್ಟಿರಲಿಲ್ಲ. ಇಷ್ಟೆಲ್ಲಾ ಮಾಡಿದ ನಮ್ಮ ಬಗ್ಗೆ ಕೃತಜ್ಞತೆ ಬೇಡವೆ?’ ಎಂದು ರಾಮನಗರದಲ್ಲಿ ಚುನಾವಣೆಯಲ್ಲಿ ತಮ್ಮ ಪುತ್ರನಿಗಾದ ಸೋಲಿಗೆ ಸಂಬಂಧಿಸಿದಂತೆ, ಮುಸ್ಲಿಮರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ತಿಂದ ಅನ್ನ ಕಕ್ಕಿಕೊಳ್ಳುವಂತಹ ಸ್ಥಿತಿ ರಾಮನಗರದ ಮುಸ್ಲಿಂ ಬೀದಿಗಳಲ್ಲಿತ್ತು. ನಾವು ಬಂದ ಬಳಿಕ, ಅಲ್ಲಿನ ಸ್ಥಿತಿ ಬದಲಾಗಿದೆ. ಇಷ್ಟೆಲ್ಲಾ ಮಾಡಿದರೂ ಕುಕ್ಕರ್, ಸೀರೆ ಕೊಡುತ್ತಾರೆಂದು ಅವರಿಗೆ ಮತ ಹಾಕಿಕೊಂಡು ಎಷ್ಟು ದಿನ ನಿಮ್ಮದನ್ನು ನಡೆಸುತ್ತೀರಿ. ಅಷ್ಟೊಂದು ಅಭಿವೃದ್ಧಿ ಕೆಲಸ ಮಾಡಿದ ನಮ್ಮ ಬಗ್ಗೆ ಕೃತಜ್ಞತೆ ಬೇಡವೇ?’ ಎಂದು ಸ್ಥಳೀಯ ಮುಸ್ಲಿಂ ನಾಯಕರನ್ನು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT