ಶುಕ್ರವಾರ, ಮೇ 20, 2022
26 °C

ಯಾರು ಪಕ್ಷ ಬಿಟ್ಟರೂ ಚಿಂತೆ ಇಲ್ಲ: ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಯಾರು ಜೆಡಿಎಸ್ ಬಿಟ್ಟರೂ ಚಿಂತೆ‌ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ನಾಯಕರನ್ನು ಬೆಳೆಸುವ ಶಕ್ತಿ‌‌ ಇದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಶುಕ್ರವಾರ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಸಿ.ಎಸ್. ಪುಟ್ಟರಾಜು ಹಾಗೂ ಇತರೆ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ ‘ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೋ ಅದನ್ನು ಕಟ್ಟಿಕೊಂಡು ನನಗೇನು ಆಗಬೇಕಿಲ್ಲ. ನನಗೆ ನನ್ನ  ಪಕ್ಷ, ಕಾರ್ಯಕರ್ತರು ಮುಖ್ಯ’ ಎಂದರು.

ಸಿ.ಎಂ‌. ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ‘ಅವರು ದೇವೇಗೌಡರ ಗರಡಿಯಲ್ಲಿ ಪಳಗಿದವರು. ದೇವೇಗೌಡರ ಆಸೆಯಂತೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹೀಗಾಗಿ ಪಕ್ಷಕ್ಕೆ ಬರುತ್ತೇನೆ ಎಂದಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ’ ಎಂದರು.

‘ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳ ಆತ್ಮಹತ್ಯೆ  ಆಘಾತಕಾರಿ ಸಂಗತಿ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಕೊಡಲಿ’ ಎಂದರು.

ನಂಬಿದವರ ಬೆಳೆಸದ ಸಿದ್ದರಾಮಯ್ಯ: ಎಚ್‌ಡಿಕೆ

ಬೆಂಗಳೂರು: ‘ಸಿದ್ದರಾಮಯ್ಯ ಅವರು ಇಬ್ರಾಹಿಂ ಅವರಿಗೆ ಪರಿಷತ್ತಿನ ವಿರೋಧಪಕ್ಷದ ನಾಯಕ ಸ್ಥಾನ ಕೊಡಿಸಬಹುದಿತ್ತು. ಅವರು ತಾವು ಬೆಳೆದರೆ ಹೊರತು ನಂಬಿಸಿ ಕಾಂಗ್ರೆಸ್‌ಗೆ ಕರೆದೊಯ್ದವರ ಬೆಳೆಸಲಿಲ್ಲ‘ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಕಾಂಗ್ರೆಸ್ ತೊರೆಯುವುದಾಗಿ ಹೇಳಿರುವ ಸಿ.ಎಂ.ಇಬ್ರಾಹಿಂ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಚರ್ಚಿಸಿದ ಕುಮಾರಸ್ವಾಮಿ, ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

‘ಇಬ್ರಾಹಿಂ ಅವರು ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ. ಒತ್ತಡ ಹಾಕಲಾಗದು. ಹಿಂದಿನ ಕೆಲವು ಘಟನೆಗಳನ್ನು ಮೆಲುಕು ಹಾಕಿ, ತಮ್ಮ ನೋವು ಹೇಳಿಕೊಂಡರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು