ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆಶೀರ್ವಾದ ಇದ್ದರೆ ಮತ್ತೆ ಸಿಎಂ: ಎಚ್.ಡಿ.ಕುಮಾರಸ್ವಾಮಿ

ಕೂಡ್ಲೂರು ನಿವಾಸಿಗಳಿಗೆ ಆಶ್ರಯ ನಿವೇಶನ ಹಂಚಿಕೆ
Last Updated 5 ಆಗಸ್ಟ್ 2022, 2:59 IST
ಅಕ್ಷರ ಗಾತ್ರ

ಚನ್ನಪಟ್ಟಣ: ಜನರ ಆಶೀರ್ವಾದ ಇದ್ದರೆ 2023ರಲ್ಲಿ ಮತ್ತೆ ನಾನು ಮುಖ್ಯಮಂತ್ರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ವಸತಿ ಇಲಾಖೆ, ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್‍ಗಾಂಧಿ ವಸತಿ ನಿಗಮದ ಸಹಯೋಗದಲ್ಲಿ ನಡೆದ ಎರಡನೇ ಹಂತದ ನಿವೇಶನಗಳ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿರುವ ಬಡ ಜನರ ಅನುಕೂಲಕ್ಕಾಗಿ ಈಗಾಗಲೇ ಮೊದಲ ಹಂತದಲ್ಲಿ ನಿವೇಶನ ನೀಡಿದ್ದು, ಇದೀಗ ಎರಡನೇ ಹಂತದ ನಿವೇಶನ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಇದನ್ನು ಜನರು ಯಾವುದೇ ಕಷ್ಟ ಬಂದರೂ ಮಾರಾಟ ಮಾಡದೆ ಜೋಪಾನ ಮಾಡಿಕೊಳ್ಳಬೇಕು. 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಶ್ರಯ ನಿವೇಶನದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ, ಎರಡು ಹಂತಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಉಳಿದ ನೂರಾರು ಫಲಾನುಭವಿಗಳಲ್ಲಿ ಕೆಲ ದಾಖಲಾತಿಗಳೆಂದರೆ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳು ಸಮರ್ಪಕವಿಲ್ಲದ ಕಾರಣ ಹಕ್ಕುಪತ್ರಗಳ ವಿತರಣೆ ತಡವಾಗಿದೆ. ಇದನ್ನು ಸರಿಪಡಿಸುವ ಕಾರ್ಯ ನಡೆಯಲಿದೆ ಎಂದರು.

ನಮ್ಮ ಪಕ್ಷದ ಪಂಚರತ್ನ ಯೋಜನೆಗಳಲ್ಲಿ ಒಂದಾದ ‘ಜನತಾ ಜಲಧಾರೆ’ ಕಾರ್ಯಕ್ರಮ ರಾಜ್ಯದಲ್ಲಿ ಯಾತ್ರೆ ಮಾಡಿದ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ, ಪ್ರತಿಗ್ರಾಮ ಪಂಚಾಯ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣ, ಪ್ರತಿ ಮನೆಗೆ ಆರೋಗ್ಯ ಸೇವೆ, ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗಾಗಿ ಹಲವಾರು ಯೋಜನೆ, ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗದ ಭರವಸೆ ಹಾಗೂ ಹಲವಾರು ಯೋಜನೆಗಳು ಈ ಪಂಚರತ್ನ ಯೋಜನೆಯಲ್ಲಿವೆ ಎಂದು ತಿಳಿಸಿದರು.

ತಹಶೀಲ್ದಾರ್‌ ಸುದರ್ಶನ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋವಿಂದೇಗೌಡ, ಉಪಾಧ್ಯಕ್ಷೆ ಭಾಗ್ಯಮ್ಮ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಯರಾಮು, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಕೂಡ್ಲೂರು ಸಿದ್ದರಾಮು, ಎಲೇಕೇರಿ ನಂದೀಶ್, ಪ್ರಕಾಶ್, ಸೈಯದ್ ಅಜಿಂ, ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ನಟರಾಜು, ರವಿ, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT