ಸೋಮವಾರ, ಮಾರ್ಚ್ 30, 2020
19 °C
ಕೈಲಾಂಚ ಗ್ರಾಮದ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಮಹಾದ್ವಾರ ಉದ್ಘಾಟನೆ

ಉನ್ನತ ಸ್ಥಾನಕ್ಕೆ ರಾಮನಗರದ ಜನತೆ ಕಾರಣ: ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಜಕೀಯದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ಬಡ ಜನತೆಗೆ ಸಹಾಯ ಮಾಡಿದ್ದರೆ, ಅದಕ್ಕೆ ರಾಮನಗರದ ಜನತೆ ಮಾಡಿರುವ ಆಶೀರ್ವಾದ ಕಾರಣ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ಇಲ್ಲಿನ ಕೈಲಾಂಚ ಗ್ರಾಮದ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಮಹಾದ್ವಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಕೀಯ ವಿರೋಧಿಗಳು ಮಾಡುವ ಯಾವುದೇ ವದಂತಿಗಳಿಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಮನೆ ಮಗನಾದ ನನ್ನನ್ನು ಎಂದಿಗೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ನನಗೆ ಗೊತ್ತಿಲ್ಲದಂತೆ ನನ್ನ ಬೆನ್ನ ಹಿಂದೆ ಕೆಲವು ತಪ್ಪಗಳು ನಡೆದಿದ್ದರೆ, ಅದನ್ನು ಕೇಳುವ ಹಕ್ಕು ತಾಲ್ಲೂಕಿನ ಜನತೆಗೆ ಇದೆ’ ಎಂದು ತಿಳಿಸಿದರು.

‘ಕಳೆದ ವಾರ ಜಿಲ್ಲಾ ಕೇಂದ್ರದಲ್ಲಿ ಜರುಗಿದ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಜಿಲ್ಲೆಯ ಅನೇಕ ಘಟಾನುಘಟಿಗಳು ಗಣವೇಷಧಾರಿಗಳಾಗಿ ಕೈಯಲ್ಲಿ ಲಾಠಿ ಹಿಡಿದು, ಬೇರೆ ಪಕ್ಷಗಳನ್ನೆಲ್ಲಾ ನಾಮಾವಶೇಷ ಮಾಡಿಬಿಡುತ್ತೇವೆ ಎಂದು ಪೋಸು ಕೊಟ್ಟಿದ್ದರು. ಅದನ್ನು ಕೆಲವು ಮಾಧ್ಯಮಗಳು ಉತ್ಪ್ರೇಕ್ಷೆಯಾಗಿ ತೋರಿಸಿವೆ. ಜಿಲ್ಲೆಯ ವಾಸ್ತವ ಸ್ಥಿತಿಯೇ ಬೇರೆ ಇದೆ. ಇಲ್ಲೇನಿದ್ದರೂ ಜಾತ್ಯತೀತ ಮನೋಭಾವವುಳ್ಳ ಪಕ್ಷಗಳಿಗೆ ಆದ್ಯತೆ ನೀಡುತ್ತಾರೆ ಎಂಬುದು ರಾಜಕೀಯ ವಿರೋಧಿಗಳಿಗೂ ಗೊತ್ತಿದೆ’ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ‘ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ತಾವು ಹಿಂದೆ ಬಿದ್ದಿಲ್ಲ. ನನ್ನ ಪತಿ ಎಚ್.ಡಿ. ಕುಮಾರಸ್ವಾಮಿಯವರ ಮಾರ್ಗದರ್ಶನ ಹಾಗೂ ಸಲಹೆಯಂತೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಕುಮಾರಸ್ವಾಮಿಯವರು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಭೇಟಿ ಅಭಿವೃದ್ಧಿ ವಿಚಾರವಾಗಿ ಖುದ್ದಾಗಿ ಸಲಹೆ ನೀಡಿದ್ದಲ್ಲಿ, ನನಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಅನೆಬಲ ಬಂದಂತಾಗುತ್ತದೆ’ ಎಂದು ತಿಳಿಸಿದರು.

ಮದುವೆಗೆ ಬನ್ನಿ: ರಾಮನಗರ-ಚನ್ನಪಟ್ಟಣ ನನ್ನೆರಡು ಕಣ್ಣುಗಳಿದ್ದಂತೆ. ರಾಜಕೀಯವಾಗಿ ಉನ್ನತ ಸ್ಥಾನ ನೀಡಿದ ಈ ಎರಡು ತಾಲ್ಲೂಕಗಳನ್ನು ಮರೆಯಲೂ ಸಾಧ್ಯವಿಲ್ಲ. ನನ್ನ ಪುತ್ರ ನಿಖಿಲ್ ಕುಮಾರ್ ವಿವಾಹ ಮಹೋತ್ಸವವನ್ನು ಈ ಎರಡೂ ನಗರಗಳ ಮಧ್ಯೆ ನೆರವೇರಿಸಲು ಸಂಕಲ್ಪ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ನಡೆಯುವ ನಮ್ಮ ಕುಟುಂಬದ ಮದುವೆಗೆ ಜಿಲ್ಲೆಯೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಜನರು, ಹಿತೈಷಿಗಳು ಬರಲಿದ್ದಾರೆ ಎಂದರು.

‘ಜಿಲ್ಲೆಯ ಜನರೇ ನನಗ ಮುಖ್ಯ. ಎಲ್ಲರೂ ನನ್ನ ಮಗನ ಮದುವೆಗೆ ಬಂದು ಹಾರೈಸಬೇಕು. ಎಲ್ಲರಿಗೂ ಆಮಂತ್ರಣ ನೀಡಲು ಖುದ್ದಾಗಿ ಬರಲು ಸಾಧ್ಯವಾಗುವುದಿಲ್ಲ. ಈ ದಿಕ್ಕಿನಲ್ಲಿ ಅಣ್ಣ-ತಮ್ಮಂದಿರಂತಿರುವ  ಕಾರ್ಯಕರ್ತರು ಮನೆ-ಮನೆಗೆ ಮದುವೆ ಆಮಂತ್ರಣ ನೀಡಲಿದ್ದಾರೆ. ದಯಮಾಡಿ ಎಲ್ಲರೂ ಮದುವೆಗೆ ಬರಬೇಕು’ ಎಂದು ಎಚ್.ಡಿ ಕುಮಾರಸ್ವಾಮಿ ದಂಪತಿ ಮನವಿ ಮಾಡಿದರು.

ಮದುವೆಗಾಗಿ ಜಾನಪದ ಲೋಕದ ಬಳಿ ಗೊತ್ತು ಮಾಡಿರುವ ಸ್ಥಳವನ್ನು ಕುಮಾರಸ್ವಾಮಿ ರವರು ತಮ್ಮ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಭಾನುವಾರ ವೀಕ್ಷಿಸಿದರು.

ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ದಂಪತಿಗೆ ಬೃಹತ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಚಿತ್ರವನ್ನು ನೀಡಿ ಗೌರವಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ, ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಪಾಂಡುರಂಗ, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎಚ್.ಸಿ. ರಾಜಣ್ಣ, ಬಿ. ಉಮೇಶ್, ವಾಸು, ಜಿ.ಟಿ. ಕೃಷ್ಣ, ಪ್ರಕಾಶ್, ಸಿ. ಉಮೇಶ್, ಸಿ.ಎಸ್. ಜಯಕುಮಾರ್, ವಕೀಲ ರಾಜಶೇಖರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು