ಗುರುವಾರ , ಜೂಲೈ 9, 2020
28 °C
ಕಾಂಗ್ರೆಸ್‌, ಬಿಜೆಪಿ ಮುಖಂಡರಿಗೆ ಪರೋಕ್ಷ ಟಾಂಗ್‌ ನೀಡಿದ ಎಚ್‌.ಡಿ ಕುಮಾರಸ್ವಾಮಿ

‘ಕ್ಷೇತ್ರದ ಅಭಿವೃದ್ಧಿ ನನಗೆ ಗೊತ್ತಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ:’ನನ್ನ ಕ್ಷೇತ್ರ ಅಭಿವೃದ್ಧಿ ಮಾಡುವುದು ಗೊತ್ತಿದೆ. ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಅಭಿವೃದ್ಧಿ ಪಾಠ ಹೇಳಿಸಿಕೊಳ್ಳುವ ಅವಶ್ಯ ನನಗಿಲ್ಲ’ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ತಾಲ್ಲೂಕಿನ ವಿವಿಧೆಡೆ ಮಂಗಳವಾರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಟ್ಟಣದ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ’ಕ್ಷೇತ್ರದಲ್ಲಿ ಮಳೆ ಗಾಳಿಯಿಂದ ಅಪಾರ ನಷ್ಟ ಉಂಟಾಗಿದೆ. ಇದಕ್ಕೆ ಪರಿಹಾರ ನೀಡಲು ನಾನು ಬಂದಿದ್ದೇನೆ. ಯಾರನ್ನೋ ಕೇಳಿಕೊಂಡು ಪರಿಹಾರ ನೀಡಲು ಬಂದಿಲ್ಲ’ ಎಂದು ಕುಟುಕಿದರು.

’ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಕಾರ್ಯಗತ ಮಾಡಿದ್ದೇನೆ. ಅದು ಜನರಿಗೆ ಗೊತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಮಾತನಾಡುತ್ತಿರುವವರು ಯಾರ ಕುಮ್ಮಕ್ಕಿನಿಂದ ಮಾತನಾಡುತ್ತಿದ್ದಾರೋ ತಿಳಿಯುತ್ತಿಲ್ಲ’ ಎಂದರು.

ಬಹಳ ಬೆಂಬಲ ಕೊಟ್ಟರು: ’ನನಗೆ ಬಹಳ ಬೆಂಬಲ ಕೊಟ್ಟು ಮುಖ್ಯಮಂತ್ರಿ ಮಾಡಿದರು ಎನ್ನುವುದು ನನಗೆ ಗೊತ್ತಿದೆ. ನನ್ನ ಹೆಸರು ಹೇಳಿಕೊಂಡು ಹೊರಗಡೆ ಯಾವ ರೀತಿ ಪ್ರಚಾರ ಪಡೆದರು ಎನ್ನುವುದೂ ಗೊತ್ತಿದೆ. ಕೆಲವರು ಡಬಲ್ ಗೇಮ್ ರಾಜಕೀಯ ಬಿಡಬೇಕು’ ಎಂದು ಡಿ.ಕೆ ಸಹೋದರರನ್ನು ಪರೋಕ್ಷವಾಗಿ ಟೀಕಿಸಿದರು.

ನಮಗೆ ಸ್ಟಂಟ್ ರಾಜಕೀಯ ಗೊತ್ತಿಲ್ಲ. ’ನಾನು ಯಾವತ್ತೂ ಇಂತಹ ರಾಜಕೀಯ ಮಾಡಿಲ್ಲ. ನಮ್ಮದು ಹೋರಾಟದ ರಾಜಕೀಯ. ರೈತರ ಏಳಿಗೆಗಾಗಿ ಹೋರಾಟ ಮಾಡುತ್ತಲೇ ರಾಜಕೀಯದಲ್ಲಿ ಬೆಳೆದವರು ನಾವು’ ಎಂದರು.

ಯಾರ ಋಣದಲ್ಲಿಯೂ ಇಲ್ಲ: ’ನಾನು ಯಾರ ಋಣದಲ್ಲಿಯೂ ಇಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕಾಂಗ್ರೆಸ್‌ನವರೇ ಬಂದು ನೀನೆ ಅಧಿಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು’ ಎಂದು ಕುಮಾರಸ್ವಾಮಿ ತಿಳಿಸಿದರು.

’ಅಂದು ಕಾಂಗ್ರೆಸ್ ಗೆ ಅಧಿಕಾರ ಬೇಕಿತ್ತು. ಅದಕ್ಕಾಗಿ ಬಂದರು. ನಾವು ಎಂದೂ ಕೂಡ ಅಧಿಕಾರಕ್ಕಾಗಿ ಹೋದವರಲ್ಲ. ನನ್ನ ಮೇಲೆ ರೈತರ ಋಣ ಇತ್ತು. ಹಾಗಾಗಿ 14 ತಿಂಗಳಲ್ಲಿ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತರ ಋಣ ತೀರಿಸಿದ್ದೇನೆ’ ಎಂದರು.

’ನಮ್ಮದು ಸಣ್ಣ ಪಕ್ಷ. ರೈತರ ಪಕ್ಷ. ರೈತರ ಪರವಾಗಿ ಕೆಲಸ ಮಾಡುತ್ತೇವೆ. ದೇವೇಗೌಡ ಅವರು 60 ವರ್ಷದ ರಾಜಕೀಯ ಜೀವನದಲ್ಲಿ ಎಂದೂ ಅಧಿಕಾರ ಹುಡುಕಿ ಹೋಗಿಲ್ಲ. ಹಿಂಬಾಗಿಲಿನಿಂದ ಯಾವತ್ತೂ ರಾಜಕಾರಣ ಮಾಡಿಲ್ಲ’ ಎಂದರು.

ಕುಮಾರಸ್ವಾಮಿ ಅವರು ಇದಕ್ಕೂ ಮೊದಲು ತಾಲ್ಲೂಕಿನ ಸಿಂಗರಾಜಿಪುರ ಗ್ರಾಮಕ್ಕೆ ಭೇಟಿ ನೀಡಿ ಮಗನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ₹50 ಸಾವಿರ ಪರಿಹಾರ ನೀಡಿ, ಸಾಂತ್ವನ ಹೇಳಿದರು. ನಂತರ ಸುಣ್ಣಘಟ್ಟ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಯಂತ್ರಧಾರೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದ್ದು ಗಮನ ಸೆಳೆಯಿತು.

ನಂತರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿರುಗಾಳಿ ಮಳೆಗೆ ಬೆಳೆ ಕಳೆದುಕೊಂಡಿರುವ ರೈತರಿಗೆ ವೈಯಕ್ತಿಕವಾಗಿ ₹10 ಸಾವಿರ ಪರಿಹಾರ ನೀಡಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಹಾಪ್ ಕಾಮ್ಸ್ ದೇವರಾಜು, ಕರಿಯಪ್ಪ, ವಡ್ಡರಹಳ್ಳಿ ರಾಜಣ್ಣ, ಹನುಮಂತು, ಬೋರ್ ವೆಲ್ ರಾಮಚಂದ್ರು, ಅಧಿಕಾರಿಗಳು ಇದ್ದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.