ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಈಡೇರದಿದ್ದರೆ ಜೆಡಿಎಸ್ ಬಾಗಿಲು ಬಂದ್

ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ
Last Updated 8 ನವೆಂಬರ್ 2021, 7:54 IST
ಅಕ್ಷರ ಗಾತ್ರ

ದೇವನಹಳ್ಳಿ: ‘ರಾಜ್ಯದ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 123 ಸ್ಥಾನಗಳನ್ನು ನೀಡಿದರೆ ಕೊಟ್ಟ ಮಾತಿನಂತೆ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತೇನೆ. ಅದು ಸಾಧ್ಯವಾಗದಿದ್ದರೆ ಜೆಡಿಎಸ್ ಪಕ್ಷದ ಕಚೇರಿಯ ಬಾಗಿಲು ಬಂದ್ ಮಾಡಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಜೆಡಿಎಸ್ ಭವನ ಹಾಗೂ ಪಿ.ಎಲ್.ಡಿ. ಬ್ಯಾಂಕ್ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಅನ್ಯ ಪಕ್ಷಗಳ ಬಗ್ಗೆ ಟೀಕೆ ಮಾಡುವುದರ ಬದಲಿಗೆ ‘ಪಂಚರತ್ನ’ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಮಾಡಲಿದ್ದೇವೆ. 2018ರಲ್ಲಿ ಕಾಂಗ್ರೆಸ್‌ನ ಅಸಹಕಾರದ ನಡುವೆಯೂ ಉತ್ತಮ ಕೆಲಸ ಮಾಡಿದ್ದೆ. ಆದರೆ, ಪ್ರಚಾರ ಸಿಗಲಿಲ್ಲ ಎಂದರು.

‘ಸಿಂಧಗಿಯಲ್ಲಿ ಜನರು ದೇವೇಗೌಡರನ್ನು ನೆನಪಿಸಿಕೊಂಡರು. ಆದರೆ, ಮತ ನೀಡಲಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಅವರು ನೀಡಿದ ಕೊಡುಗೆಯನ್ನು ಇಂದಿಗೂ ನೆನೆಸಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ಒಕ್ಕಲಿಗ ಸಮಾಜಕ್ಕೆ ಅನುಕೂಲ ಎಂದು ಲೇವಡಿ ಮಾಡಿದ್ದರು. ನಾನು ಜಾತಿರಹಿತವಾಗಿ ಕೆಲಸ ಮಾಡಿದ್ದೇನೆ. ₹ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾ ಮಾಡಬಾರದು ಎಂದು ಕಾಂಗ್ರೆಸ್‌ನಿಂದ ಒತ್ತಡವೂ ಇತ್ತು’ ಎಂದು ಹೇಳಿದರು.

‘ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ಆರಂಭಿಸಿದ ಕ್ಷಣದಿಂದ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಸರ್ಕಾರ ಉಳಿಸುವುದು ಕಷ್ಟವಿರಲಿಲ್ಲ. ನಾನೂ ಕೂಡ ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸಬಹುದಿತ್ತು. ನಾನು ಆ ಕೆಲಸ ಮಾಡಲಿಲ್ಲ. ನಿಸರ್ಗ ನಾರಾಯಣಸ್ವಾಮಿ ದಲಿತ ಸಮಾಜಕ್ಕೆ ಸೇರಿದ್ದರೂ ನಮ್ಮ ಮನೆಯ ಮಗನಂತೆ ಬೆರೆತುಹೋಗಿದ್ದು, ಕ್ಷೇತ್ರದ ಜನತೆ ನೀಡಿದ ಮತಕ್ಕೆ ದ್ರೋಹ ಬಗೆಯಲಿಲ್ಲ’ ಎಂದು
ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ. ಕೋಟ್ಯಂತರ ರೂಪಾಯಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಭಿವೃದ್ಧಿ ಸಹಿಸದ ಕಾಂಗ್ರೆಸ್‌ನವರು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ದೂರಿದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ. ಜಾತಿ, ಮತರಹಿತವಾಗಿ ಆಡಳಿತ ನೀಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ಹೊಂದಲಾಗಿದೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಕೇವಲ ಒಂದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದರು.

ಬಯಲುಸೀಮೆ ಭಾಗಕ್ಕೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಲು ಕುಮಾರಸ್ವಾಮಿ ವಿರೋಧಿಸುತ್ತಿದ್ದಾರೆ ಎನ್ನುವುದು ಸುಳ್ಳು. ಯೋಜನೆಯಡಿ ಹಣ ಲೂಟಿ ಮಾಡಲಾಗುತ್ತಿದೆ. ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ 4 ವರ್ಷಗಳಾದರೂ ಈ ಯೋಜನೆಯಡಿ ನೀರು ಬರುವುದು ಅನುಮಾನವಿದೆ ಎಂದು ಟೀಕಿಸಿದರು.

ಕುಡಿಯಲು ನೀರು ಕೇಳಿದ ಜನರಿಗೆ ಕೊಳಚೆ ನೀರು ಕೊಡುತ್ತಿದ್ದಾರೆ. ಈ ಭಾಗದ ಜನರು ವಿಧಿಯಿಲ್ಲದೆ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಬೆಳೆಯುವ ತರಕಾರಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗದಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಹಣದಾಸೆಗಾಗಿ ತಮ್ಮ ಭೂಮಿಯನ್ನು ಕೆಐಎಡಿಬಿಗೆ ಸ್ವಾಧೀನ ಮಾಡಬೇಡಿ. ರೈತರೇ ಬಲವಂತವಾಗಿ ಭೂಮಿ ಹಸ್ತಾಂತರಕ್ಕೆ ಮುಂದಾಗಿರುವುದು ಕಂಡುಬರುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದರು.

ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ನಿರಂತರವಾಗಿ ಇಂತಹವರ ಬಗ್ಗೆ ವರದಿ ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ದೇವರ ಪೂಜಾ ಸಾಮಗ್ರಿಗಳ ವ್ಯಾಪಾರ ಮಾಡುವ 75 ವರ್ಷದವರ ಮಗ ಉದ್ಯೋಗ ಕಳೆದುಕೊಂಡಿದ್ದಾರೆ. ಹಿರಿಯರ ಮೇಲೆ ದೊಡ್ಡ ಜವಾಬ್ದಾರಿಯಿರುವ ಬಗ್ಗೆ ಬೆಳಕು ಚೆಲ್ಲುವ ವರದಿಯನ್ನು ಪತ್ರಿಕೆ ಮಾಡಿರುವುದು ಶ್ಲಾಘನೀಯ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಜೆಡಿಎಸ್ ಗ್ರಾಮಾಂತರ ಉಸ್ತುವಾರಿ ಬೆಳ್ಳಿ ಲೋಕೇಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ತಾಲ್ಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಎಸ್.ಸಿ ಜಿಲ್ಲಾ ಘಟಕದ ಅಧ್ಯಕ್ಷ ಗುರಪ್ಪ, ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಆರ್. ಮುನಿರಾಜು, ವಿಜಯಪುರ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ಉಪಾಧ್ಯಕ್ಷ ಎಂ. ಕೇಶವಪ್ಪ, ಹಾಡೋನಹಳ್ಳಿ ಅಪ್ಪಯಣ್ಣ, ಲಕ್ಷ್ಮಣ್, ಮಂಡಿಬೆಲೆ ರಾಜಣ್ಣ, ಕೋಡಗುರ್ಕಿ ಮಂಜಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT