ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

RTOನಲ್ಲಿ ಅಕ್ರಮ ನೋಂದಣಿ ದಂಧೆ: ಹಳೆ ಜಪ್ತಿ ಟ್ರ್ಯಾಕ್ಟರ್‌ಗಳೇ ವಂಚನೆ ಅಸ್ತ್ರ!

Published 1 ಜುಲೈ 2024, 1:38 IST
Last Updated 1 ಜುಲೈ 2024, 1:38 IST
ಅಕ್ಷರ ಗಾತ್ರ

ರಾಮನಗರ: ನಕಲಿ ಬೋನಫೈಡ್ ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು ಸೃಷ್ಟಿಸಿ ಟ್ರ್ಯಾಕ್ಟರ್ ಗಳನ್ನು ಅಕ್ರಮವಾಗಿ ನೋಂದಣಿ ಮಾಡುತ್ತಿದ್ದ ಜಾಲ ರಾಜ್ಯದ ವಿವಿಧೆಡೆ ಜಪ್ತಿಯಾದ ಹಳೆ ಟ್ರ್ಯಾಕ್ಟರ್ ಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ. 

ದಂದೆಯು ಕೇವಲ ರಾಮನಗರವಷ್ಟೇ ಅಲ್ಲದೆ ಬೇರೆ ಜಿಲ್ಲೆಗಳ ಕೆಲವು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೂ (ಆರ್‌ಟಿಒ) ವ್ಯಾಪಿಸಿರುವುದು ಲೋಕಾಯುಕ್ತ ತನಿಖೆಯಿಂದ ಗೊತ್ತಾಗಿದೆ.

ಸದ್ಯ ಬಂಧನಕ್ಕೊಳಗಾಗಿರುವ ಮೂವರ ಪೈಕಿ ಆರ್‌ಟಿಒ ಏಜೆಂಟ್ ಟ್ರ್ಯಾಕ್ಟರ್ ಸತೀಶ್ ಮನೆಯಲ್ಲಿ ಅಕ್ರಮ ನೋಂದಣಿಗೆ ಸಂಬಂಧಿಸಿದ ಸುಮಾರು 1500 ಕಡತ ಹಾಗೂ ವಿವಿಧ ಆರ್‌ಟಿಒಗಳಲ್ಲಿ ನೋಂದಣಿಯಾಗಿರುವ ಎರಡು ಸಾವಿರಕ್ಕೂ ಅಧಿಕ ಆರ್‌.ಸಿ ಕಾರ್ಡ್‌ಗಳು ಸಿಕ್ಕಿವೆ.

ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದವರು ಸಾಲವನ್ನು ಸಕಾಲದಲ್ಲಿ ಮರುಪಾವತಿಸದಿದ್ದಾಗ ಫೈನಾನ್ಸ್ ಸಂಸ್ಥೆಯವರು ಅವುಗಳನ್ನು  ಜಪ್ತಿ ಮಾಡಿರುತ್ತಾರೆ. ಇಂತಹ ಜಪ್ತಿಯಾದ ಈ ಟ್ರ್ಯಾಕ್ಟರ್‌ಗಳಿಗೆ ಈ ಜಾಲವು, ನಕಲಿ ದಾಖಲೆ ಮತ್ತು ಬೋನಫೈಡ್ ಪ್ರಮಾಣಪತ್ರ ಸೃಷ್ಟಿಸಿ ಅಕ್ರಮವಾಗಿ ಹೊಸ ನೋಂದಣಿ ಮಾಡಿಕೊಡುತ್ತಿತ್ತು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ದಂಧೆಗೆ ಸಂಬಂಧಿಸಿದಂತೆ ಬಂಧಿತ ಆರ್‌ಟಿಒ ಶಿವಕುಮಾರ್ ಮತ್ತು ಪ್ರಥಮ ದರ್ಜೆ ಸಹಾಯಕ ರಚಿತ್ ರಾಜ್ ಇಬ್ಬರೂ, ವಾಹನ ನೋಂದಣಿಗೆ ಸಂಬಂಧಿಸಿದಂತೆ ಇಲಾಖೆಯು ತಮಗೆ ಕೊಟ್ಟಿರುವ ಲಾಗಿನ್ ಐ.ಡಿ ಮತ್ತು ಪಾಸ್‌ವರ್ಡ್‌ ಅನ್ನು ಸತೀಶ್‌ಗೆ ಕೊಟ್ಟಿದ್ದರು. ಆತನೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ತನ್ನ ಬ್ಯಾಂಕ್ ಖಾತೆಯಿಂದಲೇ ಆನ್‌ಲೈನ್ ಮೂಲಕ ಶುಲ್ಕ ತುಂಬುತ್ತಿದ್ದ. ನೋಂದಣಿಗೆ ಸಂಬಂಧಿಸಿದ ಕಡತಗಳನ್ನು ಶಿವಕುಮಾರ್ ಪರಿಶೀಲಿಸದೆಯೇ ಸಹಿ ಹಾಕುವ ಮೂಲಕ ದಂಧೆಯಲ್ಲಿ ಭಾಗಿಯಾಗಿ, ಬರುತ್ತಿದ್ದ ಹಣದಲ್ಲಿ ಪಾಲು ಪಡೆಯುತ್ತಿದ್ದರು ಎಂದು ಮೂಲಗಳು ಹೇಳಿವೆ.

ಟ್ರ್ಯಾಕ್ಟರ್ ಯಾಕೆ?: ‘ವಾಹನಗಳ ಉತ್ಪಾದನೆಗೆ ಸಂಬಂಧಿಸಿದ ಬಿಎಸ್–4 (ಭಾರತ್ ಸ್ಟೇಜ್) ಮತ್ತು ಬಿಎಸ್–6 ಟ್ರಾಕ್ಟರ್‌ಗಳಿಗೆ ಅನ್ವಯವಾಗುವುದಿಲ್ಲ. ಹಾಗಾಗಿ, ಆರ್‌ಟಿಒದಲ್ಲಿ ಈ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಪ್ಲೋಡ್ ಮಾಡಿದರೂ ಸಿಸ್ಟಂ ಸ್ವೀಕರಿಸುವುದರಿಂದ ನೋಂದಣಿ ಸುಲಭವಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ನೋಂದಣಿ ದಂಧೆ ನಡೆಸಲಾಗಿದೆ’ ಎಂದು ನಿವೃತ್ತ ಆರ್‌.ಟಿ.ಒ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆ ವಾಹನಗಳನ್ನು ಈ ರೀತಿ ಅಕ್ರಮವಾಗಿ ನೋಂದಣಿ ಮಾಡಿಸಲು ಸಾಧ್ಯವಿಲ್ಲ. ಯಾಕೆಂದರೆ, ನೋಂದಣಿ ಸಂದರ್ಭದಲ್ಲಿ ಅವುಗಳನ್ನು ತಯಾರಿಸುವ ಕಂಪನಿಯಿಂದಲೇ ತಯಾರಿಕೆಗೆ ಸಂಬಂಧಿಸಿದ ದತ್ತಾಂಶವು ಆರ್‌ಟಿಒ ಕಚೇರಿಗೆ ನೇರವಾಗಿ ಸಿಗುತ್ತದೆ. ನೋಂದಣಿ ಸಂದರ್ಭದಲ್ಲಿ ಮಾಲೀಕ ಮತ್ತು ಫೈನಾನ್ಸಿಯರ್ ಹೆಸರು ಹಾಕಿ ಕೊಡುವುದಷ್ಟೇ ಡೀಲರ್ ಕೆಲಸವಾಗಿರುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT