ಮಂಗಳವಾರ, ಜುಲೈ 27, 2021
21 °C
ಕೆಡಿಪಿ ಪ್ರಗತಿ ಪರಿಶೀಲನಾ ಸಭೆ: ಖಾಸಗಿ ಕ್ವಾರಂಟೈನ್‌ಗೆ ಅನುಮತಿ ನೀಡಲು ಸೂಚನೆ

ರಾಮನಗರ | ಗುಣಮಟ್ಟದ ಆಹಾರ ಪೂರೈಕೆಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರುವವರಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಸ್ವಂತ ಖರ್ಚಿನಲ್ಲಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಇರಲು ಬಯಸುವವರಿಗೆ ಅವಕಾಶ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಪಂನಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಕ್ವಾರಂಟೈನ್‌ ಕೇಂದ್ರದಲ್ಲಿ ಊಟ ಸರಿಯಿಲ್ಲ, ಸ್ವಚ್ಛತೆ ಇಲ್ಲ ಎಂದರೆ ಹೇಗೆ? ರೋಗಿಗಳು ಬಂದಾಗ ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು, ಕುಗ್ಗಿಸುವ ಕೆಲಸ ಮಾಡಬಾರದು. ಉತ್ತಮ ಗುಣಮಟ್ಟದ ಊಟ ಕೊಡುವ ಜತೆಗೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ. ತಮ್ಮದೇ ಖರ್ಚಿನಲ್ಲಿ ಕ್ವಾರಂಟೈನ್ ಆಗುವವರಿಗೆ ಹೋಟೆಲ್ ಅಥವಾ ರೆಸಾರ್ಟ್‍ಗಳಲ್ಲಿ ಇರಲು ಅವಕಾಶ ಮಾಡಿಕೊಡಿ’ ಎಂದು ಸೂಚನೆ ನೀಡಿದರು.

ಇದಕ್ಕೂ ಮುನ್ನ ಶಾಸಕ ಎ.ಮಂಜುನಾಥ್‌ ಈ ಕುರಿತು ವಿಷಯ ಪ್ರಸ್ತಾಪಿಸಿದರು. ’ಮಾಗಡಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ವೃದ್ಧರನ್ನು ಇಡಲಾಗಿದೆ. ಅವರಿಗೆ ಸಕ್ಕರೆ ಕಾಯಿಲೆ ಇದೆ, ಪ್ರತಿ ದಿನ ಅನ್ನ ನೀಡಲಾಗುತ್ತದಂತೆ. ನನಗೆ ಚಪಾತಿ ಕೊಡಿ ಎಂದರೆ ಕೊಡಲ್ಲ ಎನ್ನುತ್ತಿದ್ದಾರಂತೆ ಅಧಿಕಾರಿಗಳು. ಇನ್ನೂ ಅಲ್ಲಿರುವ ಶೌಚಾಲಯವೂ ಸ್ವಚ್ಛವಾಗಿಲ್ಲ ಎನ್ನುವ ದೂರುಗಳಿವೆ. ಬಿಡದಿಯ ವೈದ್ಯರೊಬ್ಬರನ್ನು ರಾಮನಗರದ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲಿನ ಅವ್ಯವಸ್ಥೆ ನೋಡಿ ನಾನು ಹಣ ಕೊಡುತ್ತೇನೆ ಬೇರೆ ಕಡೆ ಕ್ವಾರಂಟೈನ್ ಮಾಡಿಸಿ ಎಂದು ಕೇಳುತ್ತಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಪ್ರತಿಕ್ರಿಯಿಸಿ ’ಕ್ವಾರಂಟೈನ್‌ ಕೇಂದ್ರಗಳಲ್ಲಿ ಮಾಂಸಾಹಾರ, ಮೊಟ್ಟೆ ಸೇರಿದಂತೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸ್ಥಳೀಯ ಗ್ರಾ.ಪಂ.ಗಳಿಗೆ ಸೂಚಿಸಲಾಗಿದೆ. ಖಾಸಗಿ ಕ್ವಾರಂಟೈನ್‌ ಸಂಬಂಧ ಈಗಾಗಲೇ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರೊಂದಿಗೆ ಸಭೆ ನಡೆಸಿ ಸೂಚನೆಯನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟು ಹೆಚ್ಚಳವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಔಷಧಿ ಮತ್ತು ಇತರೆ ವಸ್ತುಗಳ ದಾಸ್ತಾನಿ ಬಗ್ಗೆ ಗಮನವಿರಲಿ. ಪ್ರತಿ ತಾಲೂಕಿಗೆ 2-3 ತಜ್ಞ ವೈಧ್ಯರು ಕರ್ತವ್ಯದಲ್ಲಿ ಇರುವಂತೆ ನೋಡಿಕೊಳ್ಳಿ’ ಎಂದು ಸಚಿವರು ಡಿಎಚ್‌ಒಗೆ ಸೂಚನೆ ನೀಡಿದರು. ’ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ ರಾಮನಗರ ಜಿಲ್ಲೆಗಾಗಿ 200 ಹಾಸಿಗೆಗಳನ್ನು ಬಿಟ್ಟುಕೊಡಲು ಸಿದ್ಧರಿದ್ದು ಈ ಸಂಬಂಧ ಮಾತುಕತೆ ನಡೆಸಿ ಸೌಲಭ್ಯವನ್ನು ಬಳಸಿಕೊಳ್ಳಿ’ ಎಂದು ತಿಳಿಸಿದರು.

ಜಿ.ಪಂ.ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ ’ಸೀಲ್‌ಡೌನ್‌ ಪ್ರದೇಶಗಳಲ್ಲಿ ರೈತರಿಂದ ಹಾಲು ಖರೀದಿ ಮಾಡುತ್ತಿಲ್ಲ. ಅವರಿಗೆ  ನಷ್ಟವಾಗುತ್ತಿದೆ ಎಂದಾಗ, ಸೋಂಕಿತರಿರುವ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ 28 ದಿನಗಳ ಕಾಲ ಹಾಲು ಖರೀದಿ ಮಾಡುವುದಿಲ್ಲ, ಆದರೆ, ಅವರಿಗೆ ಒಕ್ಕೂಟದಿಂದ ಶೇ50ರಷ್ಟು ಮತ್ತು ಎಂಪಿಸಿಎಸ್‍ನಿಂದ ಶೇ25ರಷ್ಟು ನಷ್ಟವನ್ನು ಭರಿಸಲಾಗುತ್ತದೆ ಎಂದು ಬಮೂಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಖಾತೆ ಮಾಡಿಕೊಡಿ: ಕನಕಪುರ, ಮಾಗಡಿ ಮತ್ತು ರಾಮನಗರ ತಾಲ್ಲೂಕುಗಳಲ್ಲಿ ಅರಣ್ಯವಾಸಿಗಳಿಗೆ ಹಂಚಿಕೆ ಆಗಿರುವ ಜಮೀನುಗಳನ್ನು ಕೂಡಲೇ ಖಾತೆ ಮಾಡಿಕೊಡುವಂತೆ ಸಂಸದ ಡಿ.ಕೆ.ಸುರೇಶ್ ಸಭೆಯ ಗಮನ ಸೆಳೆದರು.

ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಸಾಗುವಳಿ ಪತ್ರ ನೀಡಿದರೂ ಖಾತೆ ಆಗದೇ ಸರ್ಕಾರದ ಯಾವುದೇ ಯೋಜನೆ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಡಿಸಿಎಂ, ಕೂಡಲೇ ಅಗತ್ಯ ಕ್ರಮ ಕೈಗೊಂಡು ಫಲಾನುಭವಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.

ತ್ವರಿತವಾಗಿ ಚಾಲನೆ: ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಾಮನಗರದ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿವಾದ ಇದ್ದು, ಕೋವಿಡ್ ಬಿಕ್ಕಟ್ಟು ಹತೋಟಿಗೆ ಬಂದ ಕೂಡಲೇ ಆ ಪ್ರಕ್ರಿಯೆಗಳಿಗೆ ಬಿರುಸಿನ ಚಾಲನೆ ನೀಡಲಾಗುವುದು. ವಿವಿ ಸ್ಥಳಾಂತರದ ಜತೆಯಲ್ಲಿಯೇ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೆಲ್ತ್ ಸಿಟಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಎರಡು ಯೋಜನೆಗಳು ಸಾಕಾರಗೊಂಡ ಮೇಲೆ ರಾಮನಗರದ ಚಿತ್ರಣವೇ ಬದಲಾಗಲಿದೆ ಎಂದು ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ನೆಲಮಂಗಲ ಶಾಸಕ ಡಾ.ಶ್ರೀನಿವಾಸ್ ಮೂರ್ತಿ, ಜಿ.ಪಂ. ಅಧ್ಯಕ್ಷ ಬಸಪ್ಪ, ಉಪಾಧ್ಯಕ್ಷೆ ಉಷಾ, ಜಿಪಂ ಸಿಇಓ ಇಕ್ರಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು