ಶನಿವಾರ, ಜೂಲೈ 4, 2020
24 °C
pressmeet

ರೇಷ್ಮೆಗೂಡಿಗೆ ಪ್ರೋತ್ಸಾಹಧನ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರೇಷ್ಮೆಗೂಡಿಗೆ ರಾಜ್ಯ ಸರ್ಕಾರ ಕೂಡಲೇ ಪ್ರೋತ್ಸಾಹ ಧನವನ್ನು ಘೋಷಿಸಬೇಕು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರವಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ರೇಷ್ಮೆಗೂಡಿನ ದರ ಕುಸಿತ ಕಂಡಿದೆ. ಹೀಗಾಗಿ ದ್ವಿತಳಿ ಗೂಡಿಗೆ ₹250 ಹಾಗೂ ಮಿಶ್ರತಳಿ ಗೂಡಿಗೆ ₹200 ಪ್ರೋತ್ಸಾಹಧನ ನೀಡಬೇಕು. ರೇಷ್ಮೆಬೆಳೆ ಮಾಡಲಾಗದೇ ಇರುವ ಹಿಪ್ಪುನೇರಳೆ ತೋಟಕ್ಕೆ ಪ್ರತಿ ಎಕರೆಗೆ ₹25ಸಾವಿರ ಪರಿಹಾರಧನ ನೀಡಬೇಕು. ಸರ್ಕಾರ ರೀಲರ್‌ಗಳ ಸಮಸ್ಯೆಗೆ ಸ್ಪಂದಿಸಿ ಕೆಎಸ್‍ಎಂಬಿ ಮೂಲಕ ಒತ್ತೆ ಸಾಲ ನೀಡುತ್ತಿದೆ. ಅದೇ ರೀತಿ ರೇಷ್ಮೆ ಬೆಳೆಗಾರರ ಸಮಸ್ಯೆಗೂ ಪರಿಹಾರ ನೀಡಬೇಕೆಂದು ಎಂದು ಹೇಳಿದರು.

ಸರ್ಕಾರವೇ ರೇಷ್ಮೆ ಕೃಷಿ ಕ್ಷೇತ್ರಗಳಲ್ಲಿ ಚಾಕಿಹುಳು ಸಾಕಾಣಿಕಾ ಕೇಂದ್ರಗಳನ್ನು ತೆರೆದು ಬೆಳೆಗಾರರಿಗೆ ಕಡಿಮೆ ದರದಲ್ಲಿ ಉತ್ತಮ ಚಾಕಿಹುಳು ಸರಬರಾಜು ಮಾಡಬೇಕು. ಸೋಂಕು ನಿವಾರಕ ಔಷಧ ನೀಡಬೇಕು. ರೇಷ್ಮೆಹುಳು ಮನೆ ಮತ್ತು ಹಾಸಿಗೆ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಭೈರಮಂಗಲ ವ್ಯಾಪ್ತಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಅವರಿಗೂ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಲ್ಲರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ರೇಷ್ಮೆ ಬೆಳೆಗಾರರನ್ನು ಮಾತ್ರ ಕಡೆಗಣಿಸಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಂದ್ರು, ಶಶಿ, ಅನಂತ್, ರಾಮಕೃಷ್ಣ, ಶಿವ ರೇಣುಕ, ಸಂತೋಷ್ ಬಾಲು, ರಾಜೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು