ಮಂಗಳವಾರ, ಅಕ್ಟೋಬರ್ 26, 2021
21 °C
ಕೆಂಪೇಗೌಡನದೊಡ್ಡಿ ಗೋಮಾಳದಲ್ಲಿ 38 ಮಂದಿಗೆ ಅಕ್ರಮ ಪರಭಾರೆ

ನಿವೇಶನ ಅಕ್ರಮ: ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಗರ ಹೊರವಲಯದಲ್ಲಿರುವ ಕೆಂಪೇಗೌಡನ ದೊಡ್ಡಿ ಗ್ರಾಮದಲ್ಲಿ ಆಶ್ರಯ ಮನೆ ಹೆಸರಿನಲ್ಲಿ ಅಕ್ರಮವಾಗಿ 38 ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಇದಕ್ಕೆ ಕಾರಣರಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ಒತ್ತಾಯಿಸಿದರು.

‘ಗ್ರಾಮಕ್ಕೆ ಹೊಂದಿಕೊಂಡಂತೆ ಜೀಗೇನಹಳ್ಳಿ ಸರ್ವೆ ಸಂಖ್ಯೆ 92ರಲ್ಲಿ 7 ಎಕರೆ ಗೋಮಾಳ ಇದೆ. ಇದರಲ್ಲಿ 3 ಎಕರೆ ಜಮೀನಿನಲ್ಲಿ ಸ್ಥಳೀಯ ವಸತಿ ರಹಿತ ಫಲಾನುಭವಿಗಳನ್ನು ಗುರುತಿಸಿ ಸರ್ಕಾರ 2004–05ರಲ್ಲಿ ಒಟ್ಟು 121 ಫಲಾನುಭವಿಗಳಿಗೆ 25X30 ಅಡಿ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿತ್ತು’ ಎಂದು ಗ್ರಾಮದ ಮುಖಂಡ ಮಂಜುನಾಥ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ, ಹರಿಸಂದ್ರ ಗ್ರಾ.ಪಂ. ಪಿಡಿಒ ಶ್ರೀನಿವಾಸ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಳಿದ 4 ಎಕರೆ ಗೋಮಾಳದಲ್ಲಿ 38 ಮಂದಿಗೆ ತಲಾ 30X40 ಅಳತೆಯ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ತಾವೇ ಇ–ಖಾತೆ ಮಾಡಿಕೊಟ್ಟಿದ್ದಾರೆ. ತಹಶೀಲ್ದಾರ್ ಸಹಿತ ಹಿರಿಯ ಅಧಿಕಾರಿಗಳ ಸಹಿಯನ್ನು ನಕಲು ಮಾಡಲಾಗಿದೆ ಎಂದು ದೂರಿದರು. 

‘38 ನಿವೇಶನಗಳನ್ನು ಪಡೆದವರಾರು ಕೆಂಪೇಗೌಡನ ದೊಡ್ಡಿ ನಿವಾಸಿಗಳಲ್ಲ. ರೇಷನ್‌ ಕಾರ್ಡ್, ಮತದಾರರ ಪಟ್ಟಿಯಲ್ಲೂ ಅವರ ಹೆಸರುಗಳಿಲ್ಲ. ಹೀಗಿದ್ದೂ ನಕಲಿ ವಾಸಸ್ಥಳ ವಿಳಾಸ ನೀಡಿ ನಿವೇಶನ ಪಡೆದಿದ್ದಾರೆ. ಒಂದೇ ಕುಟುಂಬದ 20ಕ್ಕೂ ಹೆಚ್ಚು ಮಂದಿಗೆ ನಿವೇಶನ ನೀಡಲಾಗಿದೆ. 38ರ ಪೈಕಿ 36 ನಿವೇಶನಗಳಿಗೆ ಈಗಿನ ಪಿಡಿಒ ಅವರೇ ಅಕ್ರಮವಾಗಿ ಇ–ಖಾತೆ ಮಾಡಿಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

ಗ್ರಾಮದ ಮುಖಂಡ ಸುರೇಶ್‌ ಮಾತನಾಡಿ, ‘ಹಿಂದುಳಿದವರು, ಪರಿಶಿಷ್ಟರು, ಇರುಳಿಗರಿಗೆ ಸಿಗಬೇಕಾದ ನಿವೇಶನಗಳನ್ನು ಅಧಿಕಾರಿಗಳು ಬಲಾಢ್ಯರಿಗೆ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕೆಂಪೇಗೌಡನದೊಡ್ಡಿ ಭೂ ದಾಖಲೆಗಳು ಲಭ್ಯವಿಲ್ಲದಿರುವುದನ್ನು ದುರುಪಯೋಗ ಪಡಿಸಿಕೊಂಡು ಈ ರೀತಿಯ ಕೃತ್ಯಗಳನ್ನು ಎಸಗಲಾಗುತ್ತಿದೆ’ ಎಂದು ದೂರಿದರು.

‘ಪ್ರಕರಣ ಸಂಬಂಧ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಿದ್ದೇವೆ. ಆದರೂ, ಈವರೆಗೂ ಕ್ರಮ ಜರುಗಿಸಿಲ್ಲ. ಪಿಡಿಒ ಶ್ರೀನಿವಾಸ್ 2013ರಿಂದಲೂ ಹರಿಸಂದ್ರ ಗ್ರಾ.ಪಂ.ನಲ್ಲೇ ಕಾರ್ಯ ನಿರ್ವಹಿಸುತ್ತಿದ್ದು ಹಲವು ಅಕ್ರಮ ಎಸಗಿದ್ದಾರೆ. ತನಿಖೆ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಅಕ್ರಮ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತೇವೆ’ ಎಂದರು.

ಗ್ರಾಮದ ಮುಖಂಡರಾದ ಕೆ.ಬಿ. ರಾಜಣ್ಣ, ಸುರೇಶ್. ಕೆ.ಟಿ. ರಮೇಶ್‌, ಕೆ.ಬಿ. ಮಲ್ಲಯ್ಯ, ಆರ್‌. ಕುಮಾರ್, ನಂದೀಶ್‌, ರೈತ ಸಂಘದ ಮುಖಂಡರಾದ ಪಾದರಹಳ್ಳಿ ಕೃಷ್ಣಪ್ಪ, ಪ್ಯಾರುಸಾಬ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.