ಸೋಮವಾರ, ಆಗಸ್ಟ್ 8, 2022
21 °C

ರಾಜ್‌ ಪ್ರತಿಮೆ ಸ್ಥಾಪನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಕನ್ನಡ ನಾಡಿನ ವರನಟ ಡಾ.ರಾಜ್‌ಕುಮಾರ್‌ ಮತ್ತು ಕನಕಪುರಕ್ಕೆ ಅವಿನಾಭಾವ ಸಂಬಂಧವಿದ್ದು, ಅವರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಬೇಕು. ಮುಖ್ಯರಸ್ತೆಗೆ ಅವರ ಹೆಸರೇ ಇಡಬೇಕೆಂದು’ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಭಾಸ್ಕರ್‌ ಒತ್ತಾಯಿಸಿದರು.

ಇಲ್ಲಿನ ವಿವೇಕಾನಂದ ನಗರದಲ್ಲಿರುವ ಸತ್ಯಾನಾರಾಯಣ ಕಲ್ಯಾಣ ಮಂಟಪದಲ್ಲಿ ವೇದಿಕೆ ವತಿಯಿಂದ ಆಯೋಜನೆ ಮಾಡಿದ್ದ ಡಾ.ರಾಜ್‌ ಅವರ 15‌ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್‌ಕುಮಾರ್‌ ಸಿನಿಮಾ ರಂಗವನ್ನು ಪ್ರವೇಶಿಸುವುದಕ್ಕೂ ಮುಂಚೆ ಕನಕಪುರದಲ್ಲಿ ತಮ್ಮ ತಂದೆಯವರ ಜತೆಗೂಡಿ ಹಲವು ವರ್ಷಗಳ ಕಾಲ ನಾಟಕವನ್ನು ಪ್ರದರ್ಶಿಸಿ, ಕನಕಪುರದಲ್ಲೇ ಇದ್ದರು. ನಂತರದ ದಿನಗಳಲ್ಲಿ ಗುಬ್ಬಿ ವೀರಣ್ಣ ಅವರ ನಾಟಕ ಮಂಡಳಿಯ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾರೆ. ಇಂದಿಗೂ ತಾಲ್ಲೂಕಿನ ಜನತೆ ಡಾ.ರಾಜ್‌ ಅವರನ್ನು ನೆನೆಯುತ್ತಾರೆ’ ಎಂದರು.

‘ಇಂತಹ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ನಾಡಿನ ಹೆಮ್ಮೆಯ ರಾಜ್‌ ಅವರ ಪುತ್ಥಳಿಯನ್ನು ತಾಲ್ಲೂಕಿನಲ್ಲಿ ನಿರ್ಮಿಸುವುದೆ ನಮ್ಮ ಭಾಗ್ಯವಾಗಿದೆ. ಆ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಮತ್ತು ಸಂಸದರಾದ ಡಿ.ಕೆ.ಸುರೇಶ್‌ ಅವರು ನಿರ್ಮಿಸುವ ಮೂಲಕ ತಾಲ್ಲೂಕಿಗೆ ಗೌರವ ತರಬೇಕು’ ಎಂದು ಮನವಿ ಮಾಡಿದರು.

ಸಾಂಸ್ಕೃತಿಕ ಸೌರಭ ಟ್ರಸ್ಟ್‌ನ ಅಧ್ಯಕ್ಷ ರಾಬಿ ನಾಗರಾಜು ಮಾತನಾಡಿ, ‘ಡಾ.ರಾಜ್‌ ಅವರು ಕನ್ನಡ ಭಾಷೆಯ ಅಭಿಮಾನದ ಸಂಕೇತವಾಗಿದ್ದಾರೆ. ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಗಾಗಿ ಹೋರಾಡಿದ್ದಾರೆ. ಕನ್ನಡ ಭಾಷೆಯ ಆರಾಧಕರಾಗಿದ್ದರು. ಇಂದಿಗೂ ಕನ್ನಡಿಗರಿಗೆ ಮತ್ತು ಕಲಾವಿದರಿಗೆ, ಗಾಯಕರಿಗೆ ಪ್ರೇರಣೆಯಾಗಿದ್ದಾರೆ’ ಎಂದು ತಿಳಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ವೆಂಕಟೇಶ್‌ ಮಾತನಾಡಿ, ‘ಡಾ.ರಾಜ್‌ಕುಮಾರ್‌ ಅವರು ಕನ್ನಡ ಭಾಷೆಯಲ್ಲಿ ಭಕ್ತಿ ಮತ್ತು ಪೌರಾಣಿಕ ಹಾಗೂ ಸಾಮಾಜಿಕ ಚಲನಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಅಂತಹ ಕಲಾವಿದ ಮತ್ತೊಮ್ಮೆ ಹುಟ್ಟಲು ಸಾಧ್ಯವಿಲ್ಲ, ರಾಜ್‌ಕುಮಾರ್‌ಗೆ ಸಾಟಿ ಬೇರಾರು ಇಲ್ಲ’ ಎಂದು ಹೇಳಿದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ನಮನ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಎಂ.ಚಂದ್ರು, ಸ್ವಕರವೇ ತಾಲ್ಲೂಕು ಅಧ್ಯಕ್ಷ ಅಂಗಡಿ ರಮೇಶ್‌, ಪದಾಧಿಕಾರಿಗಳಾದ ಕೆ.ಸಿ.ಅಪ್ಪಾಜಿ, ಅಸ್ಗರ್‌ಖಾನ್‌, ಪರಮೇಶ್‌, ನಾಗರಾಜು, ಹಿಂದು ಜಾಗರಣಾ ವೇದಿಕೆಯ ಸುರೇಶ್‌, ಪರಮೇಶ್‌, ರಂಗಣ್ಣ, ಮಂಜುನಾಥ್‌ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು