‘ಎಫ್‌ಐಆರ್‌ ದಾಖಲಿಸಲು ಅನುಮತಿ ನೀಡಿ‘

ಶುಕ್ರವಾರ, ಜೂಲೈ 19, 2019
22 °C
ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಎಸ್ಪಿಗೆ ಮನವಿ

‘ಎಫ್‌ಐಆರ್‌ ದಾಖಲಿಸಲು ಅನುಮತಿ ನೀಡಿ‘

Published:
Updated:
Prajavani

ರಾಮನಗರ: 2006 ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕ್ರಮ ವಹಿಸದ ಹಾಗೂ ಬುಡಕಟ್ಟು ಜನರಿಗೆ ಸಿಗಬೇಕಾದ ಹಕ್ಕನ್ನು ತಪ್ಪಿಸಲು ಸುಳ್ಳು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್ ಅವರಿಗೆ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.

ಸರ್ಕಾರದ ಅಧಿಕಾರಿಗಳು ಬುಡಕಟ್ಟು ಜನರಿಗೆ ಕಾಯ್ದೆಯ ಬಗ್ಗೆ ಸರಿಯಾದ ಮಾಹಿತಿ ನೀಡದೆ ವಿಳಂಬ ಮಾಡುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ 2012ರ ತಿದ್ದುಪಡಿ ನಿಯಮ 12ಎ (10) ರಂತೆ ಯಾವುದೇ ಸಮಿತಿಯು ಅಥವಾ ಯಾವುದೇ ದರ್ಜೆಯ ಯಾರೇ ಅಧಿಕಾರಿಯು ಅರಣ್ಯ ಹಕ್ಕುಗಳ ಮೇಲಿನ ಯಾವುದೇ ಕ್ಷೇಮುಗಳ ಸ್ವೀಕರಣೆ ಅಥವಾ ತಿರಸ್ಕರಣೆ, ಮಾರ್ಪಾಡು ಅಥವಾ ತೀರ್ಮಾನ ಮಾಡುವ ಅಧಿಕಾರ ಹೊಂದಿಲ್ಲ ಎಂದು ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಕೃಷ್ಣಮೂರ್ತಿ ತಿಳಿಸಿದರು.

2006ರ ಅರಣ್ಯ ಹಕ್ಕು ಕಾಯ್ದೆ ಕಲಂ 3(1)ಎ ಯಿಂದ ಎಂ, ಕಲಂ 3(2), ಕಲಂ 4 ಹಾಗೂ ನಿಯಮ 13ರಲ್ಲಿ ತಿಳಿಸಿರುವಂತೆ ಮನೆ, ಗುಡಿಸಲು, ಒಡ್ಡುಗಳು, ಬಾವಿಗಳು, ಸ್ಮಶಾನಗಳು, ಪವಿತ್ರ, ಪೂಜಾಸ್ಥಳಗಳು, ಹಿರಿಯರ ಹೇಳಿಕೆ ಹಾಗೂ ಅರೆನ್ಯಾಯಿಕ ಮತ್ತು ನ್ಯಾಯಿಕ ದಾಖಲೆಗಳು ಮತ್ತಿತರ ಸಾಕ್ಷ್ಯಗಳಲ್ಲಿ ಕನಿಷ್ಟ ಎರಡು ಸಾಕ್ಷ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಬುಡಕಟ್ಟು ಜನರಿಗೆ ಅರಣ್ಯ ಭೂಮಿಯ ವೈಯುಕ್ತಿಕ ಹಾಗೂ ಸಮುದಾಯಕ ಹಕ್ಕು ಪತ್ರ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.

2008ರಲ್ಲಿ ಕೆಲವರು 2006ರ ಅರಣ್ಯ ಹಕ್ಕು ಕಾಯ್ದೆಯನ್ನು ರದ್ದುಪಡಿಸಬೇಕೆಂದು ರಿಟ್ ಸಲ್ಲಿಸಿದರು. ವಾದವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಇದೇ ವರ್ಷ ಫೆ. 13ರಂದು ಆದಿವಾಸಿಗಳಿಗೆ ಮರಣ ಶಾಸನವನ್ನೇ ನೀಡಿತು. ಆದರೆ ಅದೇ ನ್ಯಾಯಲಯವು ನಿಜವಾದ ವಸ್ತುಸ್ಥಿತಿಯನ್ನು ಆಲಿಸಿ ಫೆ. 28ರಂದು ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 110 ಬುಡಕಟ್ಟು ಸಮುದಾಯದ ಗ್ರಾಮಗಳಿದ್ದು ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕು ಪತ್ರದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಧಿಕಾರಿಗಳಿಗೆ ಮಾಹಿತಿ ಕೊರತೆ ಇರುವುದರಿಂದ ತಕ್ಷಣವೇ ಬುಡಕಟ್ಟು ಸಮುದಾಯದ ಮುಖಂಡರು ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅದಿವಾಸಿಗಳಿಗೆ ಸಿಗಬೇಕಾದ ಭೂಮಿಯನ್ನು ತಪ್ಪಿಸುತ್ತಿದ್ದಾರೆ. ಗ್ರಾಮ ಅರಣ್ಯ ಹಕ್ಕು ಸಮಿತಿಯ ತೀರ್ಮಾನವನ್ನು ಪರಿಗಣಿಸದ, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ನೀಡುವ ದೂರು ಆಧರಿಸಿ ಪ್ರಥಮ ವರ್ತಮಾನ ವರದಿ ದಾಖಲಿಸುವಂತೆ ಆದೇಶಿಸಬೇಕು ಎಂದರು.

ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಮಹದೇವಯ್ಯ, ರಾಜು, ಪುಟ್ಟಮಾದಯ್ಯ, ಅಪ್ಪಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !