ಬುಧವಾರ, ಜನವರಿ 22, 2020
25 °C
ಕೂಟಗಲ್‌ ಹೋಬಳಿ ಮಟ್ಟದ ಜನಸಂಪರ್ಕ ಸಭೆ

‘ಸರ್ಕಾರಿ ಯೋಜನೆ ಜನರ ಬಳಿಗೆ ತಲುಪಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಟಗಲ್ (ರಾಮನಗರ): ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಹಾಗೂ ಸಾಗುವಳಿ ಚೀಟಿದಾರರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

ತಾಲ್ಲೂಕಿನ ಕೂಟಗಲ್ ಗ್ರಾಮ ಪಂಚಾಯಿತಿ ಪಕ್ಕದ ಆವರಣದಲ್ಲಿ ಮಂಗಳವಾರ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ಹೊಂದಾಣಿಕೆ ಕೊರತೆ ಇರುವ ಕಾರಣ ಭೂ ವ್ಯಾಜ್ಯಗಳು ಬಗೆಹರಿಯುತ್ತಿಲ್ಲ. ಎರಡು ಇಲಾಖೆಗಳಿಗೆ ತಮಗೆ ಸೇರಿದ ಜಾಗದ ಮರು ಸರ್ವೆ ಮಾಡಿಕೊಳ್ಳುವಂತೆ ಸಂಸದರು ಸೂಚನೆ ನೀಡಿದ್ದಾರೆ ಎಂದರು.

ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮಂಜೂರಾಗಿರುವ ಯಾವ ಫಲಾನುಭವಿಗೂ ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರದಲ್ಲಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಕುರಿತಂತೆ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದರು.

ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು. ಜನರ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಸರ್ಕಾರಿ ಅಧಿಕಾರಿಗಳು ವಿನಾಃ ಕಾರಣ ರೈತರು ಹಾಗೂ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ. ಆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

ಅಭಿವೃದ್ಧಿ ವಿಚಾರದಲ್ಲಿ ಕೂಟಗಲ್ ಹೋಬಳಿಯನ್ನು ನಿರ್ಲಕ್ಷಿಸವ ಪ್ರಶ್ನೆಯೇ ಬರುವುದಿಲ್ಲ. ಲೋಕೋಪಯೋಗಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆ, ಕೃಷಿ , ತೋಟಗಾರಿಕೆ ಸೇರಿದಂತೆ ಅನೇಕ ಇಲಾಖೆಗಳಿಂದ ಸಾಕಷ್ಟು ಅನುದಾನಗಳನ್ನು ತರಲಾಗಿದೆ. ಅನೇಕ ಕಾರ್ಯಕ್ರಮಗಳಲ್ಲಿ ರೈತರು ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್ .ಎನ್. ಅಶೋಕ್ ಮಾತನಾಡಿ, ರೈತರಿಗೆ ಕೃಷಿ ಸಂಬಂಧಿತ ವೈಜ್ಞಾನಿಕ ಮಾಹಿತಿ ನೀಡಲು ರೈತ ಸಂಪರ್ಕ ಕೇಂದ್ರ ಅತ್ಯಗತ್ಯವಾಗಿದೆ. ಈಗ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿಯೇ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ರೈತರು ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಲೇ ಇದ್ದಾರೆ. ಸರ್ಕಾರಿ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಕೃಷಿಕರ ಸಮಸ್ಯೆ ಬಗೆಹರಿಸುವಂತಾಗಬೇಕು. ಜನರ ಸಣ್ಣ ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು. ಜನರ ಕಷ್ಟ ಸುಖಗಳನ್ನು ಆಲಿಸುವ ಜನಸಂಪರ್ಕದಂತಹ ಕಾರ್ಯಕ್ರಮಗಳು ನಿರಂತರವಾಗಿರಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಕೂಟಗಲ್ ಹೋಬಳಿಯ ಆರು ಗ್ರಾಮ ಪಂಚಾಯಿತಿಗಳಿಗೆ 114 ಮನೆಗಳ ಫಲಾನುಭವಿಗಳಿಗೆ ₨62 ಲಕ್ಷ ಬಿಡುಗಡೆ ಆಗಬೇಕಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದವರನ್ನು ಪ್ರಶ್ನಿಸಿದರೆ ಸಮರ್ಪಕವಾದ ಉತ್ತರ ಬರುತ್ತಿಲ್ಲ. ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಕೆರೆ ಪುನಶ್ಚೇತನ, ಅರೇಹಳ್ಳಿ - ಕೂಟಗಲ್ ಸೇತುವೆ ಕೆಲಸ, ಕೋತಿ ಮತ್ತು ಚಿರತೆಗಳ ಹಾವಳಿ, ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ, ಹಕ್ಕು ಪತ್ರ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಜನರು ಶಾಸಕ ಎ.ಮಂಜುನಾಥ್ ಅವರಿಗೆ ಅಹವಾಲು ಸಲ್ಲಿಸಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಮಾಮಣಿ, ಸದಸ್ಯ ಡಿ.ಎಂ. ಮಹದೇವಯ್ಯ, ಕೂಟಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾಕ್ಷಿ ರವಿ, ಶಾನುಬೋಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜಂಡುಯ್ಯ, ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್ .ರಮೇಶ್ ,ದೊಡ್ಡಗಂಗವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಜಾಲಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ, ಅಕ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಶ್ರೀ ಇದ್ದರು.

ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ
‘ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಚುನಾಯಿತರಾದ ನಂತರ ಕಷ್ಟ ಸುಖ ಆಲಿಸಲು ಬರುತ್ತಿಲ್ಲ ಎಂದು ಜನರು ದೂರುತ್ತಲೇ ಇದ್ದರು. ಇನ್ನು ಮುಂದೆ ಇದಕ್ಕೆಲ್ಲ ಅವಕಾಶ ನೀಡದೆ ಇಬ್ಬರು ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್ ಹೇಳಿದರು.

‘ಕೂಟಗಲ್ ಹೋಬಳಿಯ ಜನರು ರೇಷ್ಮೆ, ತೆಂಗು, ರಾಗಿ ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಭಾಗದ ಜನರಿಗೆ ಸರ್ಕಾರದ ಸವಲತ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಿಕೊಡಬೇಕು. ವಿಧವಾವೇತನ, ವೃದ್ಧಾಪ್ಯ ವೇತನಕ್ಕೆ ಅಧಿಕಾರಿಗಳು ಲಂಚ ಕೇಳುತ್ತಿರುವ ದೂರುಗಳಿವೆ. ಇದು ಹೀಗೆಯೇ ಮುಂದುವರೆದರೆ ಕಚೇರಿಗಳ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು