ಗುರುವಾರ , ಮೇ 6, 2021
22 °C
ಜನಸ್ಪಂದನ ಸಭೆ: ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಗರಂ

ಬಿಡದಿ ಆಸ್ಪತ್ರೆ ಅವ್ಯವಸ್ಥೆ: ಶಾಸಕರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಅವ್ಯವಸ್ಥೆ ಸರಿಪಡಿಸಿ’ ಎಂದು ಕೆಂಚನಕುಪ್ಪೆ ನಾಗೇಂದ್ರ ಶಾಸಕರನ್ನು ಒತ್ತಾಯಿಸಿದರು.

ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕರಿಗೆ ಈ ಸಂಬಂಧ ದೂರು ನೀಡಿದ ಅವರು ‘ಈಗಾಗಲೇ ಹಲವು ಬಾರಿ ಈ ಬಗ್ಗೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ. ಹಣ ಕೊಟ್ಟರೆ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಇಲ್ಲದಿದ್ದರೆ ಬೆಂಗಳೂರಿನ ಆಸ್ಪತ್ರೆಗಳಿಗೆ ಕಳಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಣ ನೀಡದ ಗರ್ಭಿಣಿಯರಿಗೆ ಇಲ್ಲಿ ಹೆರಿಗೆ ಮಾಡಲಾಗುವುದಿಲ್ಲ ಎಂದು ವಾಣಿವಿಲಾಸ ಆಸ್ಪತ್ರೆಗೆ ಕಳಿಸುತ್ತಾರೆ, ರೋಗಿಗಳು ಹಣ ನೀಡದಿದ್ದರೆ ಇಲ್ಲಿ ನೋಡಲು ಆಗುವುದಿಲ್ಲ ಎಂದು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕಳಿಸುತ್ತಿದ್ದಾರೆ’ ಎಂದು ದೂರಿದರು.

ಸಭೆಯಲ್ಲಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಮಾತನಾಡಿ ‘ಜನರು ಮೌಖಿಕವಾಗಿ ಆರೋಪ ಮಾಡುತ್ತಾರೆ. ಆದರೆ ಲಿಖಿತವಾಗಿ ಆರೋಪ ಮಾಡುವುದಿಲ್ಲ. ಇದರಿಂದ ಕರ್ತವ್ಯ ನಿರ್ವಹಿಸದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ’ ಎಂದು ಶಾಸಕರಿಗೆ ತಿಳಿಸಿದರು.

‘ರೋಗಿಗಳಿಗೆ ತೊಂದರೆಯಾಗಬಾರದು. ಎಲ್ಲರಿಗೂ ಸೂಕ್ತ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಿ’ ಎಂದು ಶಾಸಕ ಎ. ಮಂಜುನಾಥ್ ಸೂಚಿಸಿದರು.

ಶಿಸ್ತು ಕ್ರಮ: ‘ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿದಂತೆ ಬಹುತೇಕ ಕಂದಾಯ ಇಲಾಖೆ ಅಧಿಕಾರಿಗಳು ಭೂ ಅಭಿವೃದ್ಧಿಗಾರರ (ಲ್ಯಾಂಡ್ ಡೆವೆಲಪರ್) ಕೆಲಸಗಳನ್ನು ಮಾತ್ರ ತುರ್ತಾಗಿ ಮಾಡಿಕೊಟ್ಟು, ರೈತರು ಮತ್ತು ಜನಸಾಮಾನ್ಯರ ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದೀರಿ. ಇದು ಹೀಗೆ ಮುಂದುವರೆದರೆ ಲೋಕಾಯುಕ್ತಕ್ಕೆ ದೂರು ಬರೆದು, ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಮಂಜುನಾಥ್ ಎಚ್ಚರಿಸಿದರು.

‘ಸಂಪರ್ಕ ರಸ್ತೆ ನಿರ್ಮಾಣ, ಭೂ ಪರಿವರ್ತನೆ, ದುರಸ್ತಿ, ಹಕ್ಕು ಪತ್ರ, ಸಾಗುವಳಿ, ಮೂಲ ಸೌಕರ್ಯಾಭಿವೃದ್ಧಿ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಲ್ಯಾಂಡ್ ಡೆವಲಪರ್‍ ಗಳಿಗೆ ಅದೇಕೋ ಅತ್ಯುತ್ಸಾಹದಿಂದ ತುರ್ತಾಗಿ ಕೆಲಸ ಮಾಡಿಕೊಡುತ್ತೀರಿ. ರೈತರ ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ನಮಗೂ ಕಾಣುತ್ತಿದೆ, ನಾವೇನು ಕಣ್ಣುಮುಚ್ಚಿ ಕುಳಿತಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲ ಎಂದು ಕೊಂಡಿದ್ದೀರಾ? ಹೀಗೆ ಮುಂದುವರೆಗೆ ಶಿಸ್ತು ಕ್ರಮ ಎದುರಿಸಬೇಕಾಗಬಹುದು’ ಎಂದು ಹರಿಹಾಯ್ದರು.

‘ಪಂಚಾಯಿತಿ ವ್ಯಾಪ್ತಿಗಳಲ್ಲಿ ಎಲ್ಲೆಲ್ಲಿ ಸರ್ಕಾರಿ ಜಮೀನು, ಗೋಮಾಳ ಲಭ್ಯವಿದೆಯೋ ಅವುಗಳ ಪೂರ್ಣ ಮಾಹಿತಿ ನೀಡಿ ಎಂದು ಹಲವು ಬಾರಿ ಸೂಚಿಸಿದ್ದರೂ ಈವರೆಗೆ ವರದಿ ನೀಡಿಲ್ಲ. ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಅಂಗನವಾಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದಿಂದ ಅನುದಾನ ತಂದರೆ, ಇಲ್ಲಿ ಸ್ಥಳ ಲಭ್ಯವಿಲ್ಲ ಎಂಬ ಅಸಮರ್ಪಕ ಉತ್ತರಗಳು ಕೇಳಿಬರುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಂದಿನ 15 ದಿನಗಳಲ್ಲಿ ನಮಗೆ ಪೂರ್ಣ ವರದಿ ಸಲ್ಲಿಸಲೇಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಿ’ ಎಂದು ಪುನರುಚ್ಚರಿಸಿದ ಅವರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಪಿಡಿಓಗಳೊಂದಿಗೆ ಸೇರಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನ, ಕಸ ವಿಲೇವಾರಿಗೆ ಜಾಗ ಗುರುತಿಸಿ, ಆಯಾ ಸ್ಥಳೀಯ ಸಂಸ್ಥೆ ಸುಪರ್ದಿಗೆ ನೀಡಬೇಕು ಎಂದು ಸೂಚಿಸಿದರು.

ಬೈರಮಂಗಲ, ಶಾನುಭೋಗನಹಳ್ಳಿ, ಮಂಚನಾಯಕನಹಳ್ಳಿ ಒಟ್ಟು 4 ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಮಾಡಲು ತಲಾ ₹15 ಲಕ್ಷ ಅನುದಾನ ಬಿಡುಗಡೆಯಾಗಿದೆ. ತುರ್ತಾಗಿ ಈ ಪಂಚಾಯಿತಿ ವ್ಯಾಪ್ತಿ ಸ್ಥಳ ಗುರುತಿಸಿ. ಅನುದಾನ ಸದ್ಬಳಕೆ ಮಾಡಬೇಕು. ಸಾಗುವಳಿ ಜಮೀನು ಸಂಬಂಧ ನಮೂನೆ 50, 53ರಡಿ ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ. ಉಳಿಕೆ ಅರ್ಜಿಗಳ ಬಗ್ಗೆ ವರದಿ ನೀಡಿ ಎಂದು ತಹಶೀಲ್ದಾರ್ ರಾಜು ಸೂಚಿಸಿದರು.

ಕ್ಯಾಸಾಪುರ ಶಾಲೆಗೆ ರಸ್ತೆ: ಕ್ಯಾಸಾಪುರ ಸರ್ಕಾರಿ ಪ್ರೌಢಶಾಲೆಗೆ ರಸ್ತೆ ಸಂಪರ್ಕ ಇಲ್ಲ. ಊರಿನ ಮುಖಂಡರು ರಸ್ತೆಗೆ ಜಾಗ ಬಿಟ್ಟುಕೊಡಲು ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಮಾತನಾಡಿ, ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಿ. ನಂತರ ತಮ್ಮ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಮಾಡಿಸಿಕೊಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್, ಸದಸ್ಯರಾದ ನೀಲಾ ಮಂಜುನಾಥ್, ಪ್ರಕಾಶ್ ಇದ್ದರು.

ಹೋಬಳಿ ಕೇಂದ್ರದಲ್ಲಿ ಜನ ಸಂಪರ್ಕ

ಪ್ರತಿ ವಾರದ ಮೊದಲ ಹಾಗೂ ಮೂರನೇ ಮಂಗಳವಾರದಂದು ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿದ್ದ ಜನ ಸಂಪರ್ಕ ಸಭೆ ಮುಂದಿನ ಸಭೆಯಿಂದ ಆಯಾ ಹೋಬಳಿ ಕೇಂದ್ರಗಳಲ್ಲಿ ನಡೆಯಲಿದೆ. ಈ ತಿಂಗಳ ಮೂರನೇ ಮಂಗಳವಾರ ಕೂಟಗಲ್ ಹಾಗೂ ಜುಲೈ ಮೊದಲ ಮಂಗಳವಾರ ಬೈರಮಂಗಲದಲ್ಲಿ ನಡೆಯಲಿದ್ದು, ಅಧಿಕಾರಿಗಳು ಸಿದ್ಧರಿರಬೇಕು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು