ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಹಕ್ಕು ದೊರಕಿಸಿಕೊಟ್ಟ ಅಂಬೇಡ್ಕರ್

Published 2 ಮೇ 2024, 6:14 IST
Last Updated 2 ಮೇ 2024, 6:14 IST
ಅಕ್ಷರ ಗಾತ್ರ

ಕನಕಪುರ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕಾರ್ಮಿಕ ಕಾಯ್ದೆಯಡಿ ಹಕ್ಕುಗಳನ್ನು ಕೊಟ್ಟಿದ್ದಾರೆ ಕಾರ್ಮಿಕರು ಕಾರ್ಮಿಕ ಕಾಯ್ದೆಯ ಬಗ್ಗೆ ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಕಾರ್ಮಿಕ ಇಲಾಖೆಯ ಸವಲತ್ತು ಪಡೆದುಕೊಳ್ಳಬೇಕು ಎಂದು ಅಂಬೇಡ್ಕರ್‌ ಕ್ರಾಂತಿಸೇನೆ ರಾಜ್ಯಾಧ್ಯಕ್ಷ ವಿ.ಬಾಬು ತಿಳಿಸಿದರು.

ಇಲ್ಲಿನ ಇಂದಿರಾ ನಗರದಲ್ಲಿನ ಅಂಬೇಡ್ಕರ್‌ ಭವನದಲ್ಲಿ ಬುಧವಾರ ನಡೆದ ಕಾರ್ಮಿಕ ದಿನಾಚರಣೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಸೇರಿದಂತೆ ವಿವಿಧ ಸ್ತರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಾರ್ಮಿಕ ಇಲಾಖೆಯ ಬಗ್ಗೆ, ಕಾರ್ಮಿಕ ನಿಯಮ, ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕು, ಕಾರ್ಮಿಕರ ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ಹಣವನ್ನು ಸರ್ಕಾರ ಕೊಡುತ್ತಿದೆ. ಆದರೆ ಅದು ನಿಜವಾದ ಕಾರ್ಮಿಕರಿಗೆ ಸೇರುತ್ತಿಲ್ಲ, ಇಲಾಖೆಯಲ್ಲಿ ದುರ್ಬಳಕೆ ಆಗುತ್ತಿದೆ. ಕಾರ್ಮಿಕರಿಗೆ ಬರುತ್ತಿರುವ ಸವಲತ್ತು ಮತ್ತು ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ಎಂದು ಆರೋಪಿಸಿದರು.

ಗೌಡಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್‌ ಮಾತನಾಡಿ, ದೇಶದಲ್ಲಿ ಜೈ ಜವಾನ್‌, ಜೈ ಕಿಸಾನ್‌ ಎಂದು ಜೈಕಾರವನ್ನು ಹಾಕಲಾಗುತ್ತದೆ. ಆದರೆ ಇದರ ಜೊತೆಗೆ ಇಂದು ಜೈ ಕಾರ್ಮಿಕ ಎಂದು ಹೇಳಬೇಕಿದೆ. ಏಕೆಂದರೆ ಕಾರ್ಮಿಕರಿಲ್ಲದೆ ಪ್ರಪಂಚದಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ. ರೈತನಿಗೆ ಮತ್ತು ಯೋಧನಿಗೆ ಬೆಂಬಲವಾಗಿ ಕಾರ್ಮಿಕರು ಕೆಲಸ ಮಾಡುತ್ತಾರೆ. ರೈತ ಮತ್ತು ಯೋಧ ಬಳಸುವ ಪ್ರತಿಯೊಂದು ವಸ್ತು ಕಾರ್ಮಿಕನಿಂದಲೇ ತಯಾರಾಗುತ್ತದೆ ಎಂದರು.

ಈ ಹಿಂದೆ ಕಾರ್ಮಿಕರು 15 ಗಂಟೆ ಕೆಲಸ ಮಾಡಬೇಕಿತ್ತು. ಹೋರಾಟದ ನಂತರ 8 ಗಂಟೆಗೆ ನಿಗದಿಯಾಗಿದೆ, ಕಾರ್ಮಿಕರು ಯಾವುದೆ ಕ್ಷೇತ್ರದಲ್ಲಿ ಕೆಲಸ ಮಾಡಲಿ, ಅದರ ಜವಾಬ್ದಾರಿ ಮತ್ತು ಪರಿಮಿತಿಯನ್ನು ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪೌರ ಕಾರ್ಮಿಕರು ಸೇರಿದಂತೆ ಕೆಳ ಸ್ಥರದಲ್ಲಿ, ಸ್ವಚ್ಛತೆ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಮೊದಲು ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಬೇಕು, ನಮ್ಮ ಮುಂದಿನ ತಲೆಮಾರಿಗೂ ಇದೇ ಕೆಲಸವನ್ನು ಖಾಯಂ ಆಗಿ ಮಾಡಿಕೊಳ್ಳದೆ ಉನ್ನತ ಶಿಕ್ಷಣ ಕೊಟ್ಟು ಹೊಸ ಆಯ್ಕೆಗಳನ್ನು ಮಾಡಿಕೊಳ್ಳಬೇಕು, ಪೌರ ಕಾರ್ಮಿಕನ ಮಗ ಪೌರಕಾರ್ಮಿಕನೇ ಆಗಬೇಕಿಲ್ಲ ಎಂದು ಹೇಳಿದರು.

ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಜನಾರ್ದನ್‌ ಮಾತನಾಡಿ, ಮೊದಲಿಗೆ ಪೌರಕಾರ್ಮಿಕರೆಂದರೆ ಒಂದು ರೀತಿಯ ಕೀಳು ಭಾವನೆಯಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪೌರ ಕಾರ್ಮಿಕರಾದರೂ ನಾವು ಒಬ್ಬ ನೌಕರರು. ನಾವು ಮಾಡುವ ಕೆಲಸದಿಂದಲೇ ನಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕು.  ಇಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿಕಾಸ ಕಟ್ಟಡದ ಕೂಲಿ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಜಿ. ರಾಜು, ಮಾತಂಗ ಟ್ರಸ್ಟ್‌ ಅಧ್ಯಕ್ಷ ಜೀವನ್‌ ಮೂರ್ತಿ, ಹೊರಗುತ್ತಿಗೆ ನೀರು ಸರಬರಾಜು ಅಧ್ಯಕ್ಷ ಮೋಹನ್‌, ಇಂದಿರಾ ನಗರದ ಮುಖಂಡರಾದ ಯಂಗಯ್ಯ, ರಾಮಯ್ಯ, ವೆಂಕಟರಮಣಯ್ಯ, ಜೀವನ್‌ಕುಮಾರ್‌, ನಾಗೇಂದ್ರ, ಶಿವಕುಮಾರ್‌, ಶ್ರೀನಿವಾಸ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT