ಶನಿವಾರ, ಜುಲೈ 24, 2021
22 °C
ಕೋಟೆ ಪ್ರದೇಶ ಸೀಲ್‌ಡೌನ್‌ l ಅಧಿಕಾರಿಗಳ ಪರಿಶೀಲನೆ

ಕನಕಪುರ | ಮತ್ತೊಂದು ಕೋವಿಡ್‌ ಪ್ರಕರಣ: ಕೆಳಗಿನಪೇಟೆ ಸೀಲ್‌ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಇಲ್ಲಿನ ಕೋಟೆ ಬಳಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವಾರವಷ್ಟೇ ಬೂದಿಕೇರಿಯ ಯುವಕನಿಗೆ ಕೋವಿಡ್‌ ದೃಢಪಟ್ಟಿತ್ತು. ಈ ಇಬ್ಬರಿಗೂ ಯಾವುದೇ ಸಂಪರ್ಕ ಇರಲಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕುಂಬಳಗೋಡಿನ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಪರೀಕ್ಷೆ‌ ಮಾಡಿಸುವಂತೆ ಕೈಗಾರಿಕೆಯ ಸಿಬ್ಬಂದಿ ತಿಳಿಸಿದ್ದರಿಂದ ಪರೀಕ್ಷೆ ಮಾಡಿಸಿದ್ದರು. ಇದೀಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋಟೆ ಪ್ರದೇಶವನ್ನು ಮಂಗಳವಾರ ಸೀಲ್‌ಡೌನ್‌ ಮಾಡಲಾಗಿದೆ. 

ಮಂಗಳವಾರ ಬೆಳಿಗ್ಗೆಯಿಂದಲೇ ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್‌ ಪ್ರದೇಶವನ್ನು ಸರ್ವೆ ನಡೆಸಿ ಅಲ್ಲಿರುವ ಕುಟುಂಬಗಳ ಪಟ್ಟಿಮಾಡಿದರು. ಜನರು ಹೊರ ಬರದಂತೆ ಸೂಚನೆ ನೀಡಿದರು. 

ನಗರಸಭೆ ಅಧಿಕಾರಿ ಮಾಯಣ್ಣಗೌಡ ಸೀಲ್‌ಡೌನ್‌ ಪ್ರದೇಶಕ್ಕೆ ಭೇಟಿ ನೀಡಿ ಜನತೆಗೆ ಬೇಕಿರುವ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಎರಡು ಪ್ರಕರಣಗಳಲ್ಲಿ ಸೋಂಕಿತರ ಜತೆ ನೇರ ಸಂಪರ್ಕದಲ್ಲಿದ್ದ ಒಟ್ಟು 23 ಮಂದಿಯನ್ನು ಗುರುತಿಸಿದ್ದು, ಅವರನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ನಿಗಾ ವಹಿಸಲಾಗಿದೆ. 

ತಾಲ್ಲೂಕಿನಲ್ಲಿ ಕೊರೊನಾ ವೈರಸ್‌ ಹರಡದಂತೆ ತಡೆಗ‌ಟ್ಟಲು ನಗರದಲ್ಲಿನ ಬಸವೇಶ್ವರ ನಗರ, ಕೆಳಗಿನ ಕೋಟೆ, ಸಾತನೂರು ಹೋಬಳಿಯ ಹರಿಹರ ಗ್ರಾಮ, ಕೋಡಿಹಳ್ಳಿ ಹೋಬಳಿಯ ಕಾಡುಶಿವನಹಳ್ಳಿ ಮತ್ತು ಹೊಸದೊಡ್ಡಿ ಗ್ರಾಮಗಳು ಸೀಲ್‌ಡೌನ್‌ ಮಾಡಲಾಗಿದೆ. ಮೊದಲು ಸೀಲ್‌ಡೌನ್‌ ಮಾಡಲಾಗಿದ್ದ ನಗರದ ಬೂದಿಕೆರೆ ರಸ್ತೆಯನ್ನು ಅನ್‌ಲಾಕ್‌ ಮಾಡಿ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ.

ಗಾಳಿಸುದ್ದಿ: ತಾಲ್ಲೂಕಿನಲ್ಲಿ ಕೆಲವು ಕಿಡಿಗೇಡಿಗಳು ಕೋವಿಡ್‌ ಕುರಿತು ಎಂದು ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದ್ದಾರೆ. ಈವರೆಗೆ ಬೂದಿಕೇರಿ ಮತ್ತು ಕೆಳಗಿನಕೋಟೆಯಲ್ಲಿ ತಲಾ ಒಂದು ಪ್ರಕರಣ ಹೊರತು ಪಡಿಸಿ ಎಲ್ಲಿಯೂ ಕೊರೊನಾ ಸೋಂಕು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ಹಾರೋಹಳ್ಳಿ– ಬಿಡದಿ ರಸ್ತೆಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ ಎಂದು ಮಾಡಿರುವ ಅಪಪ್ರಚಾರದಿಂದ ಆ ಭಾಗಕ್ಕೆ ಜನರು ಹೋಗಲು ಭಯಬೀಳುತ್ತಿದ್ದಾರೆ.  ಇಂತಹ ವದಂತಿಗಳಿಗೆ ನಾಗರಿಕರು ಕಿವಿಗೊಡಬಾರದು ಎಂದು ತಾಲ್ಲೂಕು ಆಡಳಿತ ಮನವಿ ಮಾಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.