ಮಂಗಳವಾರ, ಡಿಸೆಂಬರ್ 1, 2020
20 °C

ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ: ಡಾ.ಸಿ.ಎನ್. ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಲಹೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದರು.

ಭಾರತೀಯ ಭಾಷೆ ಮತ್ತು ಸಾಹಿತ್ಯದಲ್ಲಿ ಕನ್ನಡ ಉನ್ನತ ಶ್ರೇಣಿಯಲ್ಲಿದೆ. ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು-ನುಡಿಯ ಐಸಿರಿಗೆ ಕವಿಗಳ ಕೊಡುಗೆ ಅನನ್ಯವಾದುದು. ಕನ್ನಡ ಭಾಷೆ ಹಾಗೂ ನಾಡಿನ ವೈಭವವನ್ನು ಅನೇಕ ಕವಿಗಳು ತಮ್ಮ ಪದಪುಂಜಗಳಲ್ಲಿ ಬಹುಸುಂದರವಾಗಿ ವರ್ಣಿಸಿದ್ದಾರೆ ಎಂದು ಹೇಳಿದರು.

ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರನ್ನು ನಾವಿಂದು ಸ್ಮರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ರಾಜ್ಯದ ಸರ್ವಾಂಗೀಣ ಪ್ರಗತಿಗೆ ಬುನಾದಿ ಹಾಕಿ ಕರ್ನಾಟಕ ಎಂದು ನಾಮಕರಣ ಮಾಡಿದ ಡಿ. ದೇವರಾಜ ಅರಸು ಅವರ ಸಾಧನೆಯನ್ನೂ ಮರೆಯುವಂತಿಲ್ಲ. ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಅದೊಂದು ಬಹುದೊಡ್ಡ ಸಂಸ್ಕೃತಿ. ಬಹುತ್ವದ ನೆಲೆಯಲ್ಲಿ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲಾರ್ಥ ಹೊಂದಿದೆ. ಇದೊಂದು ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಪದವಾಗಿದೆ ಎಂದು ಹೇಳಿದರು.

ನಾಡಿನ ಇತಿಹಾಸದ ವ್ಯಾಪ್ತಿ ದೊಡ್ಡದು. ಧರ್ಮಪ್ರಭು ಕೆಂಪೇಗೌಡರಂತಹ ರಾಜವಂಶಗಳು ಜನಮನ್ನಣೆಗೆ ಪಾತ್ರವಾಗಿವೆ. ತನ್ನ ಭೌಗೋಳಿಕ ನೆಲೆ ಮತ್ತು ಶ್ರೀಮಂತ ಪರಂಪರೆಯಿಂದಾಗಿ ಕರ್ನಾಟಕ ಭಾರತದ ರಾಜ್ಯಗಳ ಪೈಕಿ ಹೆಮ್ಮೆಯ ಸ್ಥಾನ ಹೊಂದಿದೆ. ರಾಜ್ಯದ ಇತಿಹಾಸ ಶ್ರೀಮಂತ ಮತ್ತು ವೈವಿಧ್ಯವಾದುದು. ಬಹಳಷ್ಟು ರಾಜರ, ವೀರರ, ಕೊಡುಗೈದಾನಿಗಳ ವೀರ ಪರಂಪರೆಯನ್ನು ಹೊಂದಿದೆ ಎಂದು ತಿಳಿಸಿದರು.

ಜಿಲ್ಲೆಯು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ  ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿರುವುದು ಸಂತಸ ತಂದಿದೆ. ಹಾಗೆಯೇ ಕನ್ನಡ ನಾಡು, ನುಡಿ, ನೆಲ, ಜಲದ ವಿಷಯಕ್ಕೆ ಧಕ್ಕೆ ಬಂದಾಗಲೆಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲಕ್ಕೆ ನಿಲ್ಲುತ್ತಿರುವುದು ಖುಷಿಯ ವಿಚಾರ ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು