ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ತಹಶೀಲ್ದಾರ್ ಬಿ.ಜಿ. ಶ್ರೀನಿವಾಸ್‌ಪ್ರಸಾದ್

Last Updated 2 ನವೆಂಬರ್ 2020, 2:02 IST
ಅಕ್ಷರ ಗಾತ್ರ

ಮಾಗಡಿ: ‘ಕನ್ನಡ ನಮ್ಮತನವಾಗಬೇಕು. ಬದುಕಿಗೆ ಬೇಕಾದ ಎಲ್ಲವನ್ನೂ ನೀಡುವ ಕಾಮಧೇನುವಿನಂತಹ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಬಿ.ಜಿ. ಶ್ರೀನಿವಾಸ್‌ಪ್ರಸಾದ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಗತ್ತನ್ನು ಕಾಡುತ್ತಿರುವ ಕೊರೊನಾ ಸೋಂಕಿನಿಂದ ಹೊರಬರುವ ಶಕ್ತಿಯನ್ನು ಭುವನೇಶ್ವರಿ ಕರುಣಿಸಲಿ. ನಾವು ಕನ್ನಡಿಗರಾಗಿ ಜನಿಸಿದ್ದೇವೆ. ನಿಸಾರ್‌ ಅಹಮದ್‌ ನುಡಿದಂತೆ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ಕನ್ನಡಿಗರಾಗಿಯೇ ಬದುಕಿ ತಾಯಿನಾಡಿನ ರಕ್ಷಣೆಗೆ ಅರ್ಪಿಸಿಕೊಳ್ಳಬೇಕು ಎಂದು ಆಶಿಸಿದರು.‌

ನಾಡು, ನುಡಿ, ನೆಲ, ಜಲದ ಸಂರಕ್ಷಣೆಗೆ ದುಡಿದ ಮಹನೀಯರನ್ನು ಸ್ಮರಿಸುವ ದಿನವೇ ಕನ್ನಡ ರಾಜ್ಯೋತ್ಸವ. ದಾರ್ಶನಿಕರು, ಕವಿಗಳು, ಸಾಧಕರು, ಸಂತರು, ಕಲಾವಿದರು, ಜನಪದರು, ಚಿತ್ರಶಿಲ್ಪಿಗಳು, ಯೋಧರು, ದಾನಿಗಳು, ಧರ್ಮ ಸಮನ್ವಯಕಾರರ ಬದುಕಿನ ಬಗ್ಗೆ ಮಕ್ಕಳಿಗೆ ಪರಿಚಯಿಸಬೇಕು. ಸಂತರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ಸುಸಲಿತ, ಸರಳ ಸುಂದರ ಭಾಷೆ. ಭಾಷೆಯ ಲಾಲಿತ್ಯವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಎರಡು ಸಾವಿರ ವರ್ಷಗಳಿಂದಲೂ ಸಹಸ್ರಾರು ದಾಳಿಗಳನ್ನು ಮೆಟ್ಟಿ ನಿಂತು ಮುನ್ನಡೆದಿದೆ. ಆದಿಕವಿ ಪಂಪನಿಂದ ರನ್ನ, ಪೊನ್ನ, ಜನ್ನ, ಕುಮಾರವ್ಯಾಸ, ಕುವೆಂಪು, ಆಲೂರು ವೆಂಕಟರಾಯರರಂತಹ ಮಹನೀಯರು ರಚಿಸಿರುವ ಸಾಹಿತ್ಯ ಕೃತಿಗಳನ್ನು ಓದಬೇಕು. ಭಾಷೆ ಬಳಕೆಯಿಂದ ಬೆಳೆದು ಉಳಿಯಲಿದೆ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿ, ರಾಜ್ಯೋತ್ಸವ ಎಂಬುದು ಕೇವಲ ಬಾಹ್ಯ ಆಚರಣೆಗೆ ಸೀಮಿತವಾಗಬಾರದು. ಹೃದಯದಲ್ಲಿ ಅನುರಣಿಸುವಂತಾಗಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದೇಶ್ವರ, ಸಬ್ ಇನ್‌ಸ್ಪೆಕ್ಟರ್ ಟಿ. ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಮಹೇಶ್, ಡಿವಿಜಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಬಿ. ಅಶೋಕ್, ಶಿರಸ್ತೇದಾರ್ ಜಗದೀಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್. ಲೋಕೇಶ್, ಪತ್ರಕರ್ತ ಎಚ್.ಎಲ್. ರಂಗನಾಥಬಾಬು, ಕನ್ನಡ ಸಹೃದಯ ಬಳಗದ ಕಾರ್ಯದರ್ಶಿ ಬಿ.ಎಂ. ಮಾರಣ್ಣ, ತಿರುಮಲೆ ಕನ್ನಡಕೂಟದ ಸಂಚಾಲಕ ಟಿ.ಎಂ. ಶ್ರೀನಿವಾಸ್‌ ಮಾತನಾಡಿದರು.

ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ನಟರಾಜ್ ಮಧು, ಶಿಕ್ಷಕರಾದ ಮುನಿಯಪ್ಪ, ಗಂಗಾಧರ್, ಬಸವರಾಜು, ನಾರಾಯಣ್, ಗೌರಿಶಂಕರ್, ಕನ್ನಡ ಅಭಿಮಾನಿಗಳು, ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಇದ್ದರು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕಿ ಮಂಜುಳಾ ಕನ್ನಡ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT