ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಕ್ಕೆ ಶತಮಾನದ ಸಂಭ್ರಮ: ಸರ್ವರನ್ನೂ ಸಲಹುವ ಕನ್ಯಕಾ ಪರಮೇಶ್ವರಿ

ವಿವಿಧ ಕಾರ್ಯಕ್ರಮ ಆಯೋಜನೆ
Last Updated 22 ಫೆಬ್ರುವರಿ 2021, 5:34 IST
ಅಕ್ಷರ ಗಾತ್ರ

ರಾಮನಗರ: ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಕನ್ಯಕಾ ಪರಮೇಶ್ವರಿ ದೇಗುಲಕ್ಕೆ ಈಗ ಶತಮಾನದ ಸಂಭ್ರಮ. ಇದೇ ಸಂದರ್ಭ ದೇಗುಲದ ದೇವರ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಮತ್ತು ನೂತನ ರಥದ ಉದ್ಘಾಟನೆ ಆಗುತ್ತಿರುವುದು ಭಕ್ತರ ಖುಷಿ ಹೆಚ್ಚಿಸಿದೆ.

ನಗರದ ಎಂ.ಜಿ ರಸ್ತೆಯಲ್ಲಿರುವ ಈ ದೇಗುಲ ಈ ಭಾಗದ ಭಕ್ತರ ಪಾಲಿನ ನೆಚ್ಚಿನ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಕನ್ಯಕಾ ಪರಮೇಶ್ವರಿ ಇಲ್ಲಿನ ಮೂಲ ದೇವತೆ. ಆರ್ಯವೈಶ್ಯ ಸಮುದಾಯದ ಜನರ ಕುಲದೇವತೆ ಇದಾಗಿದೆ. ಇದರೊಟ್ಟಿಗೆ ಪಂಥ ಭೇದವಿಲ್ಲದೆ ಎಲ್ಲ ವರ್ಗಗಳ ಜನರು ಇಲ್ಲಿಗೆ ಭೇಟಿ ಕೊಟ್ಟು ದೇವಿಯನ್ನು ಬೇಡುತ್ತಾರೆ. ಶುಕ್ರವಾರ, ವಿಶೇಷ ದಿನಗಳಂದು ಇಲ್ಲಿ ಭಕ್ತರ ದಂಡೇ ನೆರೆದಿರುತ್ತದೆ.

ಶತಮಾನದ ಇತಿಹಾಸ: 1920ರ ಮೇನಲ್ಲಿ ಇಲ್ಲಿ ಕನ್ಯಕಾ ಪರಮೇಶ್ವರಿಯ ದೇಗುಲ ಪ್ರತಿಷ್ಠಾಪನೆಗೊಂಡಿತು. ಅಂದಿನಿಂದಲೂ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಸಂಪೂರ್ಣ ಕಲ್ಲಿನಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಒಟ್ಟು 108 ಕಲ್ಲುಕಂಬಗಳಿವೆ. ದೇವಾಲಯದ ಚಾವಣಿಯ ಕಲ್ಲುಚಪ್ಪಡಿಗಳಿಂದ ಕೂಡಿದೆ. 1977ರಲ್ಲಿ ದೇವಾಲಯದ ಚಿಕ್ಕ ರಾಜಗೋಪುರವನ್ನು ತೆರವುಗೊಳಿಸಿ ಸುಮಾರು 40 ಅಡಿ ಎತ್ತರದ ರಾಜಗೋಪುರವನ್ನು ನಿರ್ಮಿಸಲಾಗಿದೆ.

26 ವಿಗ್ರಹ: ಕನ್ಯಕಾ ಪರಮೇಶ್ವರಿ ಜೊತೆಗೆ ಇತರ 26 ದೇವರ ವಿಗ್ರಹಗಳೂ ಇಲ್ಲಿ ಸ್ಥಾಪನೆಗೊಂಡಿವೆ. ದೇವಾಲಯದಲ್ಲಿ ನಗರೇಶ್ವರ, ಜರ್ನಾರ್ದನ, ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಮೊದಲಾದ ದೇವರ ಮೂರ್ತಿಗಳು ಇಲ್ಲಿವೆ. ರಾಮನಗರದಲ್ಲಿ ಇಷ್ಟೊಂದು ದೇವರ ಮೂರ್ತಿಗಳಿರುವ ಇನ್ನೊಂದು ದೇವಾಲಯ ಇಲ್ಲ ಎನ್ನುತ್ತಾರೆ ಆರ್ಯವೈಶ್ಯ ಸಭಾದ ಕಾರ್ಯದರ್ಶಿ ಕೆ.ವಿ. ಉಮೇಶ್‌.

‘ಇಲ್ಲಿ ಜಲಕಂಠೇಶ್ವರ ಸ್ವಾಮಿಯ ವಿಗ್ರಹ ಇದ್ದು, ಭಕ್ತರೇ ದೇವರ ವಿಗ್ರಹಕ್ಕೆ ಜಲಾಭಿಷೇಕ ನೆರವೇರಿಸುವ ಅವಕಾಶವಿದೆ. ಜೊತೆಗೆ ಶುಕ್ರವಾರದಂದು ಮಹಿಳೆಯರು ಸರದಿ ಸಾಲಿನಲ್ಲಿ ನಿಂಬೆಹಣ್ಣು ಕುಂಕಮ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ’ ಎನ್ನುತ್ತಾರೆ ಅವರು.

ಹೊಸ ರೂಪ: ದೇಗುಲಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಯಾರಿಂದಲೂ ವಂತಿಗೆ ಕೇಳದೇ ಭಕ್ತರೇ ಸ್ವಯಂಪ್ರೇರಣೆಯಿಂದ ತಮ್ಮ ಕೈಲಾದ ಕಾಮಗಾರಿಗಳನ್ನು ಮಾಡಿಕೊಟ್ಟಿದ್ದಾರೆ. ಕಳೆದ ವರ್ಷವೇ ಶತಮಾನೋತ್ಸವ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣಕ್ಕೆ ತಡವಾಗಿದ್ದು, ಇದೀಗ ಮೂರು ದಿನ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT