ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಕರಗ ಶಕ್ತ್ಯೋತ್ಸವ

ಕಳೆದ 27 ವರ್ಷಗಳಿಂದ ಆಚರಣೆ
Published 25 ಮೇ 2024, 5:29 IST
Last Updated 25 ಮೇ 2024, 5:29 IST
ಅಕ್ಷರ ಗಾತ್ರ

ಕನಕಪುರ: ನಗರದ ಸಂಗಮ ರಸ್ತೆಯಲ್ಲಿರುವ ಧರ್ಮರಾಯ ಮತ್ತು ದ್ರೌಪದಮ್ಮ ಹೂವಿನ ಕರಗ ಶಕ್ತ್ಯೋತ್ಸವ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.

ಬೆಂಗಳೂರಿನಲ್ಲಿ ನಡೆಯುವ ಕರಗದ ರೀತಿಯಲ್ಲೇ ಕನಕಪುರದಲ್ಲಿ ಕರಗ ಮಹೋತ್ಸವ ಕಳೆದ 27 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ವಿಜೃಂಭಣೆ ಆಚರಣೆಗೆ ಸಿದ್ಧಗೊಳಿಸಲಾಗಿದೆ.

ಹತ್ತು ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಪ್ರತಿದಿನವೂ ಒಂದೊಂದು ರೀತಿ ಧಾರ್ಮಿಕ ಆಚರಣೆ, ಪೂಜಾ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಗುರುವಾರ ಬೆಳಿಗ್ಗೆ ಹೂವಿನ ಕರಗಕ್ಕೆ ಸಕಲ ಸಿದ್ಧತೆ ನಡೆಯಿತು.

ಗುರುವಾರ ರಾತ್ರಿ ಕರಗದ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದ ಪಕ್ಕದಲ್ಲಿ ಮನರಂಜನೆ ಕಾರ್ಯಕ್ರಮ ನಡೆಸಲಾಯಿತು. ರಾತ್ರಿ 12:30ಕ್ಕೆ ಕರಗ ದೇವಸ್ಥಾನದಿಂದ ಹೊರಟು ಕೆಂಕೆರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಹೊರಟಿತು.

ಕೆಂಕೇರಮ್ಮನ ಬೀದಿಯಿಂದ ಅಂಬೇಡ್ಕರ್ ನಗರಕ್ಕೆ ಹೊರಟು ಅಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿ ಚಾಮುಂಡೇಶ್ವರಿ ಛತ್ರದ ರಸ್ತೆ, ನಿಂಗಣ್ಣ ರಸ್ತೆ, ಯಲ್ಲಮ್ಮ ದೇವಸ್ಥಾನದ ರಸ್ತೆ, ಪೈಪ್‌ಲೈನ್ ರಸ್ತೆ, ಎಂಎಚ್‌ಎಸ್ ರಸ್ತೆ ಮುಗಿಸಿ ಕೆಎನ್‌ಎಸ್ ವೃತ್ತಕ್ಕೆ ಬಂದು ಅಲ್ಲಿಂದ ಕನಕ ಆಸ್ಪತ್ರೆ ರಸ್ತೆಗೆ ತೆರಳಿತು.

ಪೊಲೀಸ್ ಕ್ವಾಟ್ರಸ್ ಮುಂಭಾಗದ ರಸ್ತೆಯಿಂದ ಬಾಣಂತ ಮಾರಮ್ಮ ಬಡಾವಣೆಯಲ್ಲಿ ಬಾಣಂತ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ರಾಮನಗರ ರಸ್ತೆ, ಗಿರೀಶ್ ಕಲ್ಯಾಣ ಮಂಟಪ ರಸ್ತೆ, ಮೇಗಳ ಬೀದಿ ಮಾರ್ಗವಾಗಿ ವಿವೇಕಾನಂದ ನಗರ ಮುಗಿಸಿ ಎಂ.ಜಿ ರಸ್ತೆ ಮಾರ್ಗವಾಗಿ ಕೋಟೆ ಪ್ರವೇಶಿಸಿತು.

ಹಲಸಿನ ಮರದೊಡ್ಡಿ ಮುಗಿಸಿ ಧರ್ಮರಾಯ ದೇವಸ್ಥಾನ ಮುಂಭಾಗ ಶುಕ್ರವಾರ ಬೆಳಿಗ್ಗೆ ಏರ್ಪಡಿಸಿದ್ದ ಅಗ್ನಿಕೊಂಡ ಆಯ್ದು ನಂತರ ದೇವಾಲಯವನ್ನು ಪ್ರವೇಶಿಸಿತು. ಶುಕ್ರವಾರ ಸಂಜೆ 6ಕ್ಕೆ ವಸಂತೋತ್ಸವ ಏರ್ಪಡಿಸಲಾಗಿತ್ತು.

ಅರ್ಚಕರಾದ ಒಕ್ಕಲೇರಿ ರಘು ಮತ್ತು ಶ್ರೀನಿವಾಸ್ ಹೂವಿನ ಕರಗ ಹೊತ್ತು ಯಶಸ್ವಿಯಾಗಿ ನಡೆಸಿಕೊಟ್ಟರು.

ಕರಗ ಹಾದು ಹೋಗುವ ರಸ್ತೆಗಳಲ್ಲಿ ಪ್ರತಿ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಹೂವುಗಳಿಂದ ಕರಗವನ್ನು ಸ್ವಾಗತಿಸಿದರು. ವಿಜೃಂಭಣೆಯಿಂದ ನಡೆದ ಕರಗವನ್ನು ಜನರು ನೋಡಿ ಕಣ್ತುಂಬಿಕೊಂಡರು.

ದ್ರೌಪತಮ್ಮ ಧರ್ಮರಾಯಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಕರಗದ ನೇತೃತ್ವ ವಹಿಸಿದ್ದರು.

ಕರಗೋತ್ಸವನ್ನು ಜನರು ವೀಕ್ಷಣೆ ಮಾಡಿದರು
ಕರಗೋತ್ಸವನ್ನು ಜನರು ವೀಕ್ಷಣೆ ಮಾಡಿದರು
ನೃತ್ಯದೊಂದಿಗೆ ಮೆರವಣಿಗೆ ಮಾಡುತ್ತಿರುವುದು
ನೃತ್ಯದೊಂದಿಗೆ ಮೆರವಣಿಗೆ ಮಾಡುತ್ತಿರುವುದು
ಮನೆ ಮುಂದೆ ಕರಗ ಹೊತ್ತು ಬಂದಾಗ ಮಹಿಳೆಯರು ಪೂಜೆ ನೆರವೇರಿಸಿದರು
ಮನೆ ಮುಂದೆ ಕರಗ ಹೊತ್ತು ಬಂದಾಗ ಮಹಿಳೆಯರು ಪೂಜೆ ನೆರವೇರಿಸಿದರು
ಕನಕಪುರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ಕರಗ
ಕನಕಪುರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ಕರಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT