ಭಾನುವಾರ, ಅಕ್ಟೋಬರ್ 24, 2021
21 °C

ಪಕ್ಷದಲ್ಲಿ ಬೆಳೆದು, ಹೊರಹೋಗಿ ತೆಗಳಿದರೆ ಸುಮ್ಮನಿರುವುದಿಲ್ಲ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜೆಡಿಎಸ್‌ನ ಮೂರ್ನಾಲ್ಕು ಶಾಸಕರು ಪಕ್ಷ ತೊರೆಯಲು ಸಿದ್ಧತೆ ನಡೆಸಿದ್ದು, ಅಂತಹ ಕ್ಷೇತ್ರಗಳಲ್ಲಿ ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿಕೊಂಡಿದ್ದೇವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ಬಿಡದಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಪಕ್ಷದಲ್ಲಿ ಬೆಳೆದು, ಹೊರಹೋಗಿ ತೆಗಳಿದರೆ ಸುಮ್ಮನಿರಲಾಗದು. ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲು ನಾನು ತಯಾರಿದ್ದೇನೆ’ ಎಂದರು.

ಈ ಹಿಂದೆ‌ ಕೆಲವರು ಪಕ್ಷದ ಶಕ್ತಿ ಬಳಸಿಕೊಂಡು ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದರು. ಇವರಿಂದಲೇ ಪಕ್ಷದ ಸಂಘಟನೆ ಹಿಂದೆ ಉಳಿಯಿತು. ನಿನ್ನೆಯೂ ಒಬ್ಬ ಶಾಸಕರು ನಾನಾಗಿಯೇ ಪಕ್ಷ ಬಿಟ್ಟು ಹೋಗಲ್ಲ, ನಾಯಕರೇ ಗೊಂದಲ ಸೃಷ್ಟಿ ಮಾಡ್ತಿರೋದು ಅಂದಿದ್ದಾರೆ. ನಾವ್ಯಾಕೆ ಗೊಂದಲ ಸೃಷ್ಟಿ ಮಾಡೋಣ. ಒಳಗೊಳಗೇ ಸಂಚು ರೂಪಿಸಿಕೊಂಡು ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಅಧಿಕಾರದ ರುಚಿ ಕಂಡು ನಡುನೀರಲ್ಲಿ ಕಾರ್ಯಕರ್ತರನ್ನು ಬಿಟ್ಟು ಹೋಗ್ತಾರೆ ಎಂದು ಟೀಕಿಸಿದರು.

ನಮ್ಮಿಂದ ಯಾವುದೇ ಶಾಸಕರಿಗೆ ಅಪಚಾರವಾಗಿಲ್ಲ. ಪಕ್ಷ‌ ಬಿಡೋರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿದೆ. ಯಾವಾಗ ಬೇಕಾದ್ರೂ ಚರ್ಚೆಗೆ ಅವಕಾಶ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷ ತೊರೆಯುವ ಬಗ್ಗೆ ಕೆಲವರು ಅನಗತ್ಯವಾಗಿ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬಹುದಾದ ವಿಚಾರಗಳನ್ನು ಹೊರಗೆ ಹೇಳುವುದು ಸರಿಯಲ್ಲ. ಏನೇ ಸಮಸ್ಯೆ, ಗೊಂದಲ ಇದ್ದರೂ ಬರಲಿ. ಚರ್ಚೆ ಮಾಡಲು ನಾನು ಸಿದ್ಧ ಇದ್ದೇನೆ. ಯಾರೂ ಪಕ್ಷದ ಸಂಘಟನೆಗೆ ಹೊಡೆತ ಬೀಳುವಂತೆ ನಡೆದುಕೊಳ್ಳಬಾರದು ಎಂದು ತಾಕೀತು ಮಾಡಿದರು.

ಜೆಡಿಎಸ್ ಕಾರ್ಯಕರ್ತರ ಪಕ್ಷ. ಅದು ದುರ್ಬಲ ಆಗಿಲ್ಲ. ಆಗುವುದೂ ಇಲ್ಲ. ಪಕ್ಷ ತಳಮಟ್ಟದಿಂದ ಪುಟಿದೇಳುತ್ತಿದೆ ಎಂದರು.
ನಮ್ಮ ಪಕ್ಷ ನಿಷ್ಕ್ರಿಯ ಆಗಿಬಿಟ್ಟಿದೆ ಎಂದು ಕೆಲವರು ಅಂದುಕೊಂಡಿದ್ದರು ಕೆಲವರು. ಈಗ ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿರುವಂತಿದೆ. ಅದೇ ಕಾರಣಕ್ಕೆ ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ವಿಜಯದಶಮಿ ನಂತರ ಜೆಪಿ ಭವನದಲ್ಲಿ ಜಿಲ್ಲಾವಾರು ಸಭೆ ಮಾಡುತ್ತೇವೆ. ಎರಡನೇ ಹಂತದ ಕಾರ್ಯಾಗಾರ ಆರಂಭ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ... ‌ಹತಾಶೆಯಲ್ಲಿರುವ ಈಶ್ವರಪ್ಪ ನಾಲಿಗೆ –ಮಿದುಳುಗೆ ಸಂಪರ್ಕ ತಪ್ಪಿದೆ: ಕಾಂಗ್ರೆಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು