ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ನನ್ನ ಕರ್ಮಭೂಮಿ, ಶಾಸಕ ಮಂಜುನಾಥ್‌ ಅಡ್ರೆಸ್‌ ಎಲ್ಲಿದೆ? ಎಚ್‌.ಸಿ.ಬಾಲಕೃಷ್ಣ

Last Updated 28 ಸೆಪ್ಟೆಂಬರ್ 2021, 4:19 IST
ಅಕ್ಷರ ಗಾತ್ರ

ಮಾಗಡಿ: ‘ನನ್ನ ಹೆಸರು ಹೇಳಬೇಡಿ, ಹೇಳಿದ ಮೇಲೆ ನಮ್ಮೊಂದಿಗೆ ಚರ್ಚೆಗೆ ಬನ್ನಿ’ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಶಾಸಕ ಎ.ಮಂಜುನಾಥ್ ಅವರಿಗೆ ಸವಾಲು ಹಾಕಿದರು.

ಪುರಸಭೆ ಆವರಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘40 ವರ್ಷಗಳ ಕಾಲ ತಾಲ್ಲೂಕಿನಲ್ಲಿ ಆಡಳಿತ ನಡೆಸಿರುವ ಹುಲಿಕಟ್ಟೆ ಮನೆತನದವರು ಕಮಿಷನ್ ಹೊಡೆದಿಲ್ಲ. ಯಾರ ಮನೆಗೂ ಬೆಂಕಿ ಹಚ್ಚಿಲ್ಲ, ಕಟ್ಟೆಮನೆ ಡೈನಾಸ್ಟಿಯವರು ತುಘಲಕ್ ದರ್ಬಾರ್‌ ಮಾಡಿಲ್ಲ ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ. 20 ವರ್ಷಗಳ ಕಾಲ ಶಾಸಕರಾಗಿ ನಾನು ಏನೂ ಮಾಡಿಲ್ಲ ಎಂದು ಹೇಳಿರುವ ಈಗಿನ ಶಾಸಕರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬಂದು ಉತ್ತರಿಸಲಿ’ ಎಂದರು.

‘ಸರ್ಕಾರಿ ಬಸ್ ನಿಲ್ದಾಣ, ಸರ್ಕಾರಿ ವಾಣಿಜ್ಯ ಸಂಕೀರ್ಣ, ಕೋಟೆ ಅಭಿವೃದ್ಧಿ, ತೂಬಿನಕೆರೆ ವಿದ್ಯುತ್ ಸಬ್ ಸ್ಟೇಷನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಆಡಿಟೋರಿಯಂ ನಿರ್ಮಿಸಲು ₹2.50 ಕೋಟಿ ಅನುದಾನ ತಂದಿದ್ದೇನೆ’ ಎಂದು ತಮ್ಮ ಅಧಿಕಾರದ ಅವಧಿಯಲ್ಲಿ ನಡೆದಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ವಿವರಿಸಿದರು.

ಕೇಬಲ್ ಕಾರ್: ‘ಸಾವನದುರ್ಗದ ಬೆಟ್ಟದಿಂದ ಮಂಚನಬೆಲೆ ಜಲಾಶಯದ ತನಕ ಕೇಬಲ್ ಕಾರ್ ಅಳವಡಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಲು ತೀರ್ಮಾನಿಸಿದ್ದೆ. ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಎಕ್ಸಪ್ರೆಸ್ ಚಾನಲ್ ಅನ್ನು ಸರ್ಕಾರ ರದ್ದುಪಡಿಸಿದೆ. ಹೇಮಾವತಿ ನದಿ ನೀರು ಹರಿಸುವ ಬಗ್ಗೆ ಶಾಸಕರು ಕಾಗಕ್ಕ, ಗೂಬಕ್ಕನ ಕಥೆ ಹೇಳುವುದನ್ನು ಬಿಟ್ಟು, ನೀರು ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ, ಹಿಟ್ ಅಂಡ್ ರನ್ ಮಾತನಾಡುವುದನ್ನು ನಿಲ್ಲಿಸಲಿ’ ಎಂದು ಬಾಲಕೃಷ್ಣ ತಿಳಿಸಿದರು.

ಅಡ್ರೆಸ್ ಎಲ್ಲಿ: ‘ನಾನು ಹುಲಿಕಟ್ಟೆ ಚನ್ನಪ್ಪ ಅವರ ಪುತ್ರ ಅಂದರೆ ಎಚ್.ಸಿ.ಬಾಲಕೃಷ್ಣ. ಮಾಡಬಾಳ್ ಹೋಬಳಿ, ಮಾಗಡಿ ತಾಲ್ಲೂಕು. ಮಾಗಡಿ ನನ್ನ ಕರ್ಮಭೂಮಿ, ಬಾಲು ಯಾರೂ ಎಂದು ಕೇಳುವ ಶಾಸಕ ಎ.ಮಂಜುನಾಥ್ ಅಂಚೆ ಅಡ್ರೆಸ್ ಎಲ್ಲಿದೆ ಅಂತಾ ಹೇಳಲಿ, ಹೇಳಲಿ’ ಎಂದು ಸವಾಲು ಹಾಕಿದರು.

ರೈತರ ಬಳಿ ಬನ್ನಿ: ‘ಕೈಗಾರಿಕೆ ಸ್ಥಾಪನೆಗೆ 800 ಎಕರೆ ಭೂಮಿ ಅಪ್ರೂವ್ ಆಗಿದೆ. ರೈತರ ಬಳಿ ಬನ್ನಿ ಸಭೆ ಕರೆದು ಚರ್ಚಿಸಿ, ರೈತರ ಭೂಮಿ ಕೊಡಲು ಒಪ್ಪಿದರೆ ನನ್ನದೇನು ತಕರಾರಿಲ್ಲ’ ಎಂದರು.

‘ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿಕೊಂಡು ಚಿನ್ನ, ಬೆಳ್ಳಿ ತಗಡು ಹೊದಿಸಲಿ ನನ್ನದೇನು ಅಭ್ಯಂತರವಿಲ್ಲ. ನನ್ನ ಹೆಸರು ಹೇಳಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ’ ಎಂದು ಮಾಜಿ ಶಾಸಕರು ಎಚ್ಚರಿಸಿದರು.

ತಾಲ್ಲೂಕು ಎಸ್ಸಿ, ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ತೋಟದಮನೆ ಗಿರೀಶ್, ತಾ.ಪಂ.ಮಾಜಿ ಸದಸ್ಯ ಸಿ.ಜಯರಾಮ್, ಜಿ.ಪಂ.ಮಾಜಿ ಸದಸ್ಯ ಎಂ.ಕೆ.ಧನಂಜಯ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭೆ ಸದಸ್ಯರಾದ ರಂಗಹನುಮಯ್ಯ, ಶಿವಕುಮಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಲಕ್ಷ್ಮೀಪತಿರಾಜು, ದೊಡ್ಡಿಲಕ್ಷ್ಮಣ್‌, ಮೋಹನ್‌ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT