ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ದಿನ ಪೂರೈಸಿದ ಕಾವೇರಿ ಹೋರಾಟ

Published 13 ಜನವರಿ 2024, 7:22 IST
Last Updated 13 ಜನವರಿ 2024, 7:22 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಸರ್ಕಾರವನ್ನು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಕಾವೇರಿ ನಿರಂತರ ಹೋರಾಟ ಶುಕ್ರವಾರ ನೂರು ದಿನ ಪೂರೈಸಿದೆ.

ಅ.5 ರಿಂದ ವೇದಿಕೆಯ ಪದಾಧಿಕಾರಿಗಳು ನಗರದಲ್ಲಿ ನಿರಂತರ ಹೋರಾಟ ಆರಂಭಿಸಿದ್ದು, ಪ್ರತಿದಿನ ವಿವಿಧ ಹೋರಾಟಗಳ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಶುಕ್ರವಾರ ನಗರದ ಕಾವೇರಿ ಸರ್ಕಲ್‌ನಲ್ಲಿ ನಡೆದ ನೂರನೇ ದಿನದ ಹೋರಾಟದಲ್ಲಿ ಮಾಜಿ ಶಾಸಕ ಎಂ.ಸಿ. ಅಶ್ವಥ್ ಭಾಗವಹಿಸಿ ಹೋರಾಟಕ್ಕೆ ಮೆರಗು ತಂದರು.

ಈ ವೇಳೆ ಮಾತನಾಡಿದ ಎಂ.ಸಿ.ಅಶ್ವಥ್, ಯಾವುದೇ ಹೋರಾಟಗಳು ಎಂಟು ಹತ್ತು ದಿನಗಳಿಗೆ ಮಾತ್ರ ಸೀಮಿತವಾಗುತ್ತವೆ. ಅದರಲ್ಲೂ ನಾಡಿನ ಏಳಿಗೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಈ ಹೋರಾಟಗಳಿಗೆ ಹಲವು ಸಮಸ್ಯೆಗಳು, ಕಷ್ಟಗಳು ಅಡೆತಡೆಗಳು ಬರುತ್ತದೆ. ಎಲ್ಲವನ್ನು ಮೆಟ್ಟಿ ಕಾವೇರಿ ಉಳಿಸಿ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಸತತವಾಗಿ 100 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮೇಕೆದಾಟು ಯೋಜನೆ ನಿರ್ಮಾಣದಿಂದ ಕನಿಷ್ಠ ಆರು ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಜತೆಗೆ ವಿದ್ಯುತ್ ಉತ್ಪಾದನೆಗೂ ಸಹ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎರಡು ರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿ ಎರಡು ರಾಜ್ಯಗಳಿಗೆ ಅನುಕೂಲವಾಗುವ ಮೇಕೆದಾಟು ಯೋಜನೆಯನ್ನು ಅನುಷ್ಟಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟದಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ಎಲೇಕೇರಿ ಮಂಜುನಾಥ್, ಪ್ರವೀಣ್ ಕುಮಾರ್, ಬೇವೂರು ಯೋಗೀಶ್ ಗೌಡ, ಬೆಂಕಿ ಶ್ರೀಧರ್, ಆರ್.ಶಂಕರ್, ತಿಮ್ಮರಾಜು, ಪುಟ್ಟಪ್ಪಾಜಿ, ಮುಜಾಯಿದ್, ದುರ್ಗೇಗೌಡ, ಮೆಣಸಿಗನಹಳ್ಳಿ ರಾಮಕೃಷ್ಣಯ್ಯ, ರಾಜಪ್ಪ, ಶಿವಣ್ಣ ಅರಳಾಳುಸಂದ್ರ, ಸಿದ್ದಪ್ಪಾಜಿ ಚಿಕ್ಕೇನಹಳ್ಳಿ, ಎಂ.ಎನ್.ರಾಜು, ಕಿರಣ್ ಕುಮಾರ್, ಜಯಕುಮಾರ್, ನಾಗರಾಜು ಕೋಡಂಬಹಳ್ಳಿ, ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT