ರಾಮನಗರ: ‘ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಹಳ್ಳ ಹಿಡಿದಿದೆ. ಯೋಜನೆ ಹೆಸರಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಈ ಕುರಿತು, ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿ ಕುರಿತು ಸಮಗ್ರ ತನಿಖೆಯಾಗಬೇಕು...’ – ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಿಂದ ಕೇಳಿಬಂದ ಒತ್ತಾಯವಿದು.
ಕುಡಿಯುವ ನೀರಿನ ವಿಷಯದ ಕುರಿತು ಸಭೆಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ‘ಜೆಜೆಎಂ ಅಡಿ ಹಳ್ಳಿಗಳಿಗೆ ನೀರು ಪೂರೈಕೆ ಕಾರ್ಯ ನಡೆಯುತ್ತಿದೆ’ ಎಂದು ಗಮನಕ್ಕೆ ತಂದರು.
ಆಗ ಶಾಸಕ ಎಚ್.ಸಿ. ಬಾಲಕೃಷ್ಣ, ‘ಎಲ್ಲೆಲ್ಲಿಗೆ ನೀರು ಪೂರೈಕೆಯಾಗಿದೆ? ಪೈಪ್‌ಲೈನ್ ಅಳವಡಿಕೆ ಎಲ್ಲೆಲ್ಲಿ ನಡೆದಿದೆ? ಎಷ್ಟು ಮೇಲ್ಮಟ್ಟದ ನೀರು ಸಂಗ್ರಹಗಾರ ಟ್ಯಾಂಕ್‌ಗಳನ್ನು ನಿರ್ಮಿಸಿದ್ದೀರಿ?’ ಎಂದು ಪ್ರಶ್ನಿಸಿದರು. ಆಗ ಅಧಿಕಾರಿ, ‘ಟ್ಯಾಂಕ್ ನಿರ್ಮಾಣ ವಿಳಂಬವಾಗಿದ್ದು, ಪೈಪ್‌ಲೈನ್ ಅಳವಡಿಕೆ ನಡೆಯುತ್ತಿದೆ’ ಎಂದರು.
ಅದಕ್ಕೆ ಕೆರಳಿದ ಬಾಲಕೃಷ್ಣ, ‘ನೀವೇನು ಕೆಲಸ ಮಾಡಿದ್ದೀರೆಂದು ಗೊತ್ತಿದೆ. ಮಾಗಡಿಯಲ್ಲಿ ಒಂದೇ ಒಂದು ಟ್ಯಾಂಕ್ ನಿರ್ಮಿಸಿಲ್ಲ. ಪೈಪ್‌ಲೈನ್ ಕಾಮಗಾರಿ ಹೆಸರಿನಲ್ಲಿ ರಸ್ತೆ ಅಗೆದು ಹಣ ಲೂಟಿ ಹೊಡೆಯುತ್ತಿದ್ದೀರಿ. ಸಭೆಗೆ ನೀರು ಕೊಡುತ್ತಿದ್ದೇವೆ ಎಂದು ಹೇಳುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು. ಅವರ ಮಾತಿಗೆ ಇತರ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ದನಿಗೂಡಿಸಿದರು.
‘ವರ್ಷದೊಳಗೆ ಮುಗಿಯಬೇಕಿದ್ದ ಕಾಮಗಾರಿ ಅರ್ಧದಷ್ಟೂ ಮುಗಿದಿಲ್ಲ. ಹೀಗೆಯೇ ವಿಳಂಬ ಮಾಡಿದರೆ ಕೇಂದ್ರ ಸರ್ಕಾರದವರು ಹಣ ಕೊಡದೆ ಯೋಜನೆಯನ್ನೇ ನಿಲ್ಲಿಸುತ್ತಾರೆ. ಜನರ ಮನೆ ಬಾಗಿಲಿಗೆ ನೀರು ಒದಗಿಸುವ ಯೋಜನೆ ಹೆಸರಲ್ಲಿ ಲೂಟಿ ಮಾಡುತ್ತಿದ್ದೀರಿ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಸಚಿವ ರೆಡ್ಡಿ ಮತ್ತು ಜಿಲ್ಲಾ ಪಂಚಾಯಿಸಿ ಸಿಇಒ ಅವರಿಗೆ ಒತ್ತಾಯಿಸಿದರು.
ಅವರ ಮಾತಿಗೆ ದನಿಗೂಡಿಸಿದ ಪರಿಷತ್ ಸದಸ್ಯ ಎಸ್. ರವಿ, ‘ಯೋಜನೆಯ ದಿಕ್ಕು ತಪ್ಪಿಸಿದೆ. ನೀವೇ ಹೇಳುವಂತೆ ಜೆಜೆಎಂನಡಿ ಜಿಲ್ಲೆಯಲ್ಲಿ ಎಷ್ಟು ಮನೆಗಳಿಗೆ ನೀರು ಹರಿಸಿದ್ದೀರಿ? ಎಲ್ಲೆಲ್ಲಿ ಕಾಮಗಾರಿ ನಡೆದಿದೆ? ಯಾರಿಗೆ, ಎಷ್ಟು ಮೊತ್ತಕ್ಕೆ ಟೆಂಡರ್ ಕೊಟ್ಟಿದ್ದೀರಿ? ಎಂಬುದರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
ಆಗ ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ, ‘ಜೆಜೆಎಂ ಕಾಮಗಾರಿಗೆ ಏಳೆಂಟು ಸಲ ಟೆಂಡರ್ ಕರೆದರೂ ಯಾರೂ ಬರುತ್ತಿಲ್ಲ. ವಿಧಿ ಇಲ್ಲದೆ, ಕಪ್ಪುಪಟ್ಟಿಗೆ ಸೇರಿರುವ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟು ಕೆಲಸ ಮಾಡಿಸಬೇಕಾಗಿದೆ. ಶಾಸಕರು ಹೇಳುವಂತೆ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಆರೋಪ ಕುರಿತು ತನಿಖೆ ನಡೆಸಲಾಗುವುದು’ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ, ‘ಯೋಜನೆಯ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಆಗಿರುವ ಪ್ರಗತಿ, ಕಾಮಗಾರಿ, ಫಲಾನುಭವಿಗಳ ಮಾಹಿತಿ ಸಮೇತ ತನಿಖೆ ಮಾಡಿ. ಮುಂದಿನ ಸಭೆಯ ಹೊತ್ತಿಗೆ ವರದಿ ಕೈ ಸೇರಬೇಕು’ ಎಂದು ಸಿಇಒಗೆ ಸೂಚಿಸಿದರು.
ನಿವೇಶನ ಗುರುತಿಸಿ: ಜಿಲ್ಲೆಯಲ್ಲಿ ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳಿಗೆ ನಿಗದಿತ ಸಮುದಾಯದವರು ಇಲ್ಲದಿದ್ದರೆ, ಅದನ್ನು ಬೇರೆಯವರಿಗೆ ನೀಡಲು ಸಚಿವರು ಸೂಚಿಸಬೇಕು. ವಸತಿ ರಹಿತರಿಗೆ ರಾಮನಗರ ಮತ್ತು ಹಾರೋಹಳ್ಳಿಯಲ್ಲೂ ನಿವೇಶನಕ್ಕೆ ಜಾಗ ಹುಡುಕಬೇಕು. ಅದಕ್ಕೆ ಸರ್ವೇಯರ್‌ಗಳನ್ನು ನಿಯೋಜಿಸಬೇಕು’ ಎಂದು ಶಾಸಕ ಹುಸೇನ್, ಬಾಲಕೃಷ್ಣ ಒತ್ತಾಯಿಸಿದರು.
ಅದಕ್ಕೆ ಸಚಿವ, ‘ವಿತರಣೆಯಾಗದ ಮನೆಗಳ ಮಾಹಿತಿ ತರಿಸಿಕೊಂಡು, ಅಗತ್ಯವಿರುವವರ ಪಟ್ಟಿ ಮಾಡಿ ವಿತರಿಸಿ’ ಎಂದು ಜಿ.ಪಂ. ಸಿಇಒಗೆ ಸೂಚಿಸಿದರು. ಆಗ ಜಿಲ್ಲಾಧಿಕಾರಿ, ‘ಚನ್ನಪಟ್ಟಣದಲ್ಲಿ ಡಿಸಿಎಂ ಸೂಚನೆ ಮೇರೆಗೆ, ನಿವೇಶನ ಹಂಚಲು ಈಗಾಗಲೇ ಜಾಗ ಗುರುತಿಸಿರುವಂತೆ ಉಳಿದ ತಾಲ್ಲೂಕುಗಳಲ್ಲಿ ಜಾಗ ಹುಡುಕಲಾಗುವುದು’ ಎಂದರು.
ಪರಿಷತ್ ಸದಸ್ಯ ಸುಧಾಮ ದಾಸ್, ‘ಪ್ಲಾಸಿಕ್ಟ್ ಹಾವಳಿ ತಡೆಗೆ ಏಕಾಏಕಿ ಕ್ರಮ ಕೈಗೊಳ್ಳುವ ಬದಲು, ಮೊದಲು ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ. ಬಳಿಕ ದಂಡದ ಕಾರ್ಯಾಚರಣೆ ಮಾಡಿ’ ಎಂದು ಸಲಹೆ ನೀಡಿದರು. ‘ಏಕಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಮಾರಾಟ ಮಾಡುವವರ ವಿರುದ್ಧ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ನಿರಂತರವಾಗಿ ದಾಳಿ ನಡೆಸಿ ದಂಡ ಹಾಕಬೇಕು. ಈ ಬಗ್ಗೆ ಮೂರು ದಿನಕ್ಕೊಮ್ಮೆ ಪರಿಶೀಲನೆ ನಡೆಸುವೆ’ ಎಂದು ಜಿಲ್ಲಾಧಿಕಾರಿ ಹೇಲಿದರು.
ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಕೆಡಿಪಿ ಸಭೆ ನಾಮ ನಿರ್ದೇಶನ ಸದಸ್ಯೆ ಸುಕನ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಮುಖ್ಯಾಂಶಗಳು
* ಕೆಲವೇ ಇಲಾಖೆಗಳ ಪ್ರಗತಿ ಪರಿಶೀಲನೆಗಷ್ಟೇ ಸೀಮಿತವಾದ ಸಭೆ.
* ಸಭೆಯಲ್ಲಿ ಎರಡು ಸಲ ಕೈ ಕೊಟ್ಟ ವಿದ್ಯುತ್.
* ಶಾಸಕರ ಅನುದಾನದಡಿ ಕೊಳವೆಬಾವಿ ಕೊರೆಯಿಸಲು ಅವಕಾಶಕ್ಕೆ ಒತ್ತಾಯ.
* ಜಿಲ್ಲಾಸ್ಪತ್ರೆಯಲ್ಲಿ 24x7 ಪೊಲೀಸ್ ಹೊರಠಾಣೆ ತೆರೆಯಬೇಕು.
* ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್
* ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆಗೆ ಟ್ರಾಮಾ ಘಟಕ ಆರಂಭಿಸಬೇಕು.
* ರೇಷ್ಮೆಗೂಡು ಮಾರುಕಟ್ಟೆ ಎದುರು ಮನಬಂದಂತೆ ವಾಹನ ನಿಲುಗಡೆಗೆ ಕಡಿವಾಣ ಹಾಕಬೇಕು.
ಜಿಲ್ಲಾಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಉಸ್ತುವಾರಿ ಸಚಿವರು ಆಸ್ಪತ್ರೆಗೆ ಅಗತ್ಯವಿರುವ ಶುಶ್ರೂಷಕರು ಡಿ ಗ್ರೂಪ್ ಹಾಗೂ ಭದ್ರತಾ ಸಿಬ್ಬಂದಿ ಒದಗಿಸಬೇಕು.– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಜಿಲ್ಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಆನೆ ಕ್ಯಾಂಪ್ ತೆರೆಯುವುದೇ ಪರಿಹಾರ. ನಾಡಿಗೆ ಬರುವ ಆನೆಗಳನ್ನು ಹಿಡಿದು ವಾಪಸ್ ಕಾಡಿಗೆ ಬಿಡುವ ಬದಲು ಕ್ಯಾಂಪ್‌ನಲ್ಲಿ ಪಳಗಿಸಿದರೆ ಕಾಡಾನೆ ಹಾವಳಿ ನಿಲ್ಲಲಿದೆ– ಎಸ್. ರವಿ ವಿಧಾನ ಪರಿಷತ್ ಸದಸ್ಯ
ಪೌತಿ ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಅಭಿಯಾನ ಮಾಡಲಾಗುವುದು– ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ
ಒಣ ತ್ಯಾಜ್ಯ ನಿರ್ವಹಣೆಗೆ ಜಿಲ್ಲೆಯ ವಿವಿಧೆಡೆ ಎಂಆರ್‌ಎಫ್ ಘಟಕಗಳನ್ನು ತೆರೆಯಲಾಗುವುದು. ಇದರಿಂದ ನಗರ ಮತ್ತು ಪಟ್ಟಣದ ಮಟ್ಟದಲ್ಲಿ ಕಸ ವಿಲೇವಾರಿ ಸಮಸ್ಯೆ ಪರಿಹಾರ ಸಿಗಲಿದೆ– ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ
ಜನರ ತಲುಪದ ಅಂಬೇಡ್ಕರ್ ನಿಗಮದ ಸೌಲಭ್ಯ; ಆಕ್ರೋಶ
‘ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಮೂರ್ನಾಲ್ಕು ವರ್ಷಗಳಿಂದ ಪರಿಶಿಷ್ಟರಿಗೆ ಮಂಜೂರಾದ ಕೊಳವೆಬಾವಿಗಳನ್ನು ಕೊರೆದಿಲ್ಲ. ಇತರ ಸೌಲಭ್ಯಗಳು ಸಹ ತಲುಪುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿ’ ಎಂದು ಶಾಸಕ ಬಾಲಕೃಷ್ಣ ನಿಗಮದ ವ್ಯವಸ್ಥಾಪಕಿ ಸರೋಜಾದೇವಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ‘ಬೋರ್ ಕೊರೆಯಿಸುವ ಕೆಲಸ ನಡೆಯುತ್ತಿದೆ’ ಎಂದು ಸಮಜಾಯಿಷಿ ನೀಡಿದರು.
‘ಎಲ್ಲೆಲ್ಲಿ ಆಗಿದೆ ಎಂಬುದರ ವರ್ಷವಾರು ಮಾಹಿತಿ ಕೊಡಿ’ ಎಂದಾಗ ಸರೋಜಾದೇವಿ ತಡವರಿಸಿದರು. ಆಗ ಮಧ್ಯ ಪ್ರವೇಶಿಸಿದ ಸಭೆಯ ನಾಮನಿರ್ದೇಶಿತ ಸದಸ್ಯ ಎನ್.ಸಿ. ಗುರುಮೂರ್ತಿ ‘2018ರಿಂದಲೂ ನಿಗಮದಲ್ಲಿ ಕೊಳವೆಬಾವಿ ಸೇರಿದಂತೆ ಯಾವ ಸೌಲಭ್ಯಗಳು ಜನರನ್ನು ತಲುಪಿಲ್ಲ. ಬೋರ್ ಕೊರೆಯಬೇಕಾದರೆ ಫಲಾನುಭವಿಗಳು ಗುತ್ತಿಗೆದಾರನಿಗೆ ₹25 ಸಾವಿರ ಕೊಡಬೇಕಾಗಿದೆ. ಜಿಲ್ಲೆಗೆ ಸರೋಜಾದೇವಿ ಅವರು ಬಂದ ಬಳಿಕ ನಿಗಮದಲ್ಲಿ ಏನೂ ಪ್ರಗತಿಯಾಗಿಲ್ಲ. ಅವರನ್ನು ಜಿಲ್ಲೆಯಿಂದ ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಆಗ ಬಾಲಕೃಷ್ಣ ‘ಜಿಲ್ಲೆಯಲ್ಲಿ ಪರಿಶಿಷ್ಟರಿಗೆ ನಿಮಗದ ಸೌಲಭ್ಯಗಳು ತಲುಪಿಸುವಲ್ಲಿ ವ್ಯವಸ್ಥಾಪಕರು ವಿಫಲರಾಗಿದ್ದು ಈ ಕುರಿತು ತನಿಖೆಯಾಗಬೇಕು. ಹಾಗೆಯೇ ಕೊಳವೆಬಾವಿ ಕೊರೆಯಿಸಲು ರಾಜ್ಯದಾದ್ಯಂತ ಒಬ್ಬರಿಗೇ ಟೆಂಡರ್ ಕೊಡಲಾಗಿದೆ. ಇದನ್ನು ಬದಲಿಸಿ ಜಿಲ್ಲಾವಾರು ಟೆಂಡರ್‌ಗೆ ಅವಕಾಶ ಕಲ್ಪಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.
ತನಿಖೆ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ‘ನಿಗಮದ ವಿರುದ್ಧ ಕೇಳಿಬಂದಿರುವ ಆರೋಪ ಸರಿಯಾಗಿದೆ. ಅಲ್ಲಿ ಒಂದಿಷ್ಟು ಸಮಸ್ಯೆಗಳಿರುವುದು ನಿಜ. ಎಲ್ಲವನ್ನೂ ಪರಿಶೀಲಿಸಿ ಸರಿಪಡಿಸಲಾಗುವುದು’ ಎಂದರು.
ಜೆ.ಡಿ ವಿರುದ್ಧ ಕ್ರಮಕ್ಕೆ ಶಾಸಕ ಪಟ್ಟು
‘ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಅವರು ಸೋಲೂರಿನಲ್ಲಿ ನಡೆದ ಅಂಬೇಡ್ಕರ್ ಜಾಥಾಕ್ಕೆ ನನ್ನನ್ನ ಆಹ್ವಾನಿಸಿಲ್ಲ. ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲೂ ಭಾಗವಹಿಸದ ಅವರು ಪರಿಶಿಷ್ಟ ಸಮುದಾಯಗಳಿಗೆ ಸಂಬಂಧಿಸಿದ ಕೆಲಸದ ಕುರಿತು ಮಾತನಾಡುವುದಕ್ಕೂ ಸಿಗುತ್ತಿಲ್ಲ’ ಎಂದು ನೆಲಮಂಗಲ ಶಾಸಕ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ‘ನನ್ನಿಂದ ಯಾವುದೇ ತಪ್ಪಾಗಿಲ್ಲ’ ಎಂದು ಸಮಜಾಯಿಷಿ ನೀಡಿದರು.
ಅದಕ್ಕೆ ಕೆರಳಿದ ಶ್ರೀನಿವಾಸ್ ‘ನಿಮ್ಮಿಂದ ನನ್ನ ಹಕ್ಕುಚ್ಯುತಿಯಾಗಿದ್ದು ನಿಮ್ಮ ನಡೆ ವಿರುದ್ಧ ಇಲಾಖೆಗೂ ಪತ್ರ ಬರೆದಿರುವೆ. ಉಸ್ತುವಾರಿ ಸಚಿವರು ಅಧಿಕಾರಿ ವಿರುದ್ಧ ಕೈಗೊಳ್ಳಬೇಕು. ಅಲ್ಲಿಯವರೆಗೆ ನಾನು ಸುಮ್ಮನಿರುವುದಿಲ್ಲ’ ಎಂದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಹುಸೇನ್ ಪರಿಷತ್ ಸದಸ್ಯ ರವಿ ‘ಶಾಸಕರನ್ನು ಕಡೆಗಣಿಸಿ ಅಗೌರವ ತೋರಬೇಡಿ. ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
‘ಪುಡಿ ರೌಡಿಗಳ ಹಾವಳಿ ನಿಯಂತ್ರಿಸಿ’
‘ಜಿಲ್ಲೆಯಲ್ಲಿ ಇತ್ತೀಚೆಗೆ ಪುಂಡರು ಹಾಗೂ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಅಟ್ರಾಸಿಟಿ ಪ್ರಕರಣಗಳಲ್ಲೂ ಭಾಗಿಯಾಗುತ್ತಿರುವ ಅವರಿಂದ ನಮ್ಮ ನೆಮ್ಮದಿಯೂ ಹಾಳಾಗಿದೆ. ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆ ಕ್ರಿಕೆಟ್ ಬೆಟ್ಟಿಂಗ್ ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದೆ. ಬೆಟ್ಟಿಂಗ್‌ನಿಂದಾಗಿ ಎಷ್ಟೊ ಕುಟುಂಬಗಳು ಬೀದಿಗೆ ಬಂದಿವೆ. ನಾವೂ ನ್ಯಾಯ ಪಂಚಾಯಿತಿ ಮಾಡಿ ಸಾಕಾಗಿದೆ. ಪೊಲೀಸರು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಪರಿಷತ್ ಸದಸ್ಯ ಎಸ್. ರವಿ ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಕಾರ್ತಿಕ್ ರೆಡ್ಡಿ ‘ಕನಕಪುರದ ಘಟನೆ ಬಳಿಕ ರೌಡಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ಈಗ ಆ್ಯಪ್‌ಗಳ ಮೂಲಕ ನಡೆಯುತ್ತಿದ್ದು ಅದಕ್ಕೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಅದಕ್ಕೆ ಎಲ್ಲಾ ಕಡೆ ವಿರೋಧ ವ್ಯಕ್ತವಾಗುತ್ತಿದ್ದು ಸರ್ಕಾರದ ಮಟ್ಟದಲ್ಲೇ ಇದಕ್ಕೆ ಕಡಿವಾಣ ಬೀಳಬೇಕು. ಮಾದಕ ವಸ್ತುಗಳ ಮಾರಾಟ ಮತ್ತು ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು’ ಎಂದರು.
ಸೆ. 15ರಿಂದ ನಿರಂತರ ನೀರು ‘ರಾಮನಗರಕ್ಕೆ 24x7 ನಿರಂತರ ನೀರು ಪೂರೈಕೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಿ’ ಎಂದು ಸಚಿವ ರೆಡ್ಡಿ ಅವರು ಕೆಯುಡಬ್ಲ್ಯೂಎಸ್‌ಡಿಬಿ ಅಧಿಕಾರಿಗಳಿಗೆ ಸೂಚಿಸಿದರು.
ಆಗ ಶಾಸಕ ಹುಸೇನ್ ‘ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ. ನಿಮ್ಮಿಂದಾಗಿ ಜನ ನಮಗೆ ಬೈಯ್ಯುತ್ತಿದ್ದಾರೆ. ಗುಂಡಿ ಮುಚ್ಚುವ ಹಣವನ್ನು ನಗರಸಭೆಗೆ ಕೊಟ್ಟಿದ್ದರೆ ನಾವೇ ಇಡೀ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದೆವು. ಅದಕ್ಕೂ ನೀವು ಒಪ್ಪುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ‘ಅಗೆದಿರುವ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ₹12 ಕೋಟಿ ಇದ್ದು ಈಗಾಗಲೇ ದುರಸ್ತಿ ಕೆಲಸ ಪ್ರಗತಿಯಲ್ಲಿದೆ. ನಗರಸಭೆಗೆ ಹಣ ಕೊಡಲು ಮಂಡಳಿ ಮೇಲಧಿಕಾರಿಗಳು ಒಪ್ಪಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.