ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲೆ: ಸೋರುವ ಕಟ್ಟಡ, ಕಳಚಿ ಬೀಳುವ ಚಾವಣಿ

Published 23 ಜೂನ್ 2024, 4:15 IST
Last Updated 23 ಜೂನ್ 2024, 4:15 IST
ಅಕ್ಷರ ಗಾತ್ರ

ಚನ್ನಪಟ್ಟಣ: ಸೋರುವ ಕಟ್ಟಡ, ಕಳಚಿ ಬೀಳುವ ಚಾವಣಿ. ಬಿರುಕು ಬಿಟ್ಟ ಗೋಡೆ, ಸಮರ್ಪಕವಾಗಿಲ್ಲದ ಕಿಟಕಿ ಬಾಗಿಲು, ಶಿಕ್ಷಕರ ಕೊರತೆ, ಸೂಕ್ತ ಶೌಚಾಲಯವಿಲ್ಲದೆ ಬಯಲು ಆಶ್ರಯಿಸಿರುವ ಮಕ್ಕಳು...ಇದು ತಾಲ್ಲೂಕಿನ ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲೆ ಕಥೆ ವ್ಯಥೆ.

ಸುಮಾರು 50ಕ್ಕೂ ಹೆಚ್ಚು ವರ್ಷಗಳ ಹಿಂದೆ ಕಟ್ಟಿರುವ ಶಾಲಾ ಕಟ್ಟಡ ಹೊರಗಡೆಯಿಂದ ನೋಡಲು ಸುಂದರವಾಗಿ ಕಾಣುತ್ತಿದೆ. ಆದರೆ, ಒಳಗೆ ಮಾತ್ರ ಎಲ್ಲವೂ ಅವ್ಯವಸ್ಥೆ ಆಗರವಾಗಿದೆ. ಇಂತಹ ಕಟ್ಟಡದಲ್ಲಿಯೇ ಮಕ್ಕಳು ಪಾಠ ಕಲಿಯುವ ಅನಿವಾರ್ಯತೆಯಲ್ಲಿದ್ದಾರೆ. 8 ರಿಂದ 10ನೇ ತರಗತಿವರೆಗೆ 280 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ತೀರ ಹಳೆಯದಾದ ಕಟ್ಟಡದಲ್ಲಿ ಸುಮಾರು 10 ಕೊಠಡಿಗಳಿವೆ. ಇದರಲ್ಲಿ ಒಂದು ಕೊಠಡಿಯೂ ಸಮರ್ಕವಾಗಿಲ್ಲ. ಐದು ಕೊಠಡಿಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಐದು ಕೊಠಡಿಗಳು ಬಹತೇಕ ಹಾಳಾಗಿವೆ. ಮಳೆ ಬಂದರೆ ಈ ಕೊಠಡಿಗಳಲ್ಲಿ ನೀರು ಸೋರುತ್ತದೆ. ಮೇಲಿನ ಚುರುಕಿ ಹಾಳಾಗಿದೆ. ಇದಕ್ಕೆ ತೇಪೆ ಹಾಕಲಾಗಿದ್ದರೂ ಸೋರುವ ಸಮಸ್ಯೆ ಮಾತ್ರ ನಿಂತಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.

280 ವಿದ್ಯಾರ್ಥಿಗಳು: ಈ ಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗೆ ಒಟ್ಟು 280 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕಟ್ಟಡದ ದುಸ್ಥಿತಿ ನಡುವೆಯೂ ವಿದ್ಯಾರ್ಥಿಗಳ ದಾಖಲಾತಿ ಉತ್ತಮವಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗುವುದಿಲ್ಲ ಎನ್ನುವ ಸಾರ್ವಜನಿಕ ಆರೋಪ ನಡುವೆಯೂ ಈ ಶಾಲೆಯಲ್ಲಿ ಉತ್ತಮ ದಾಖಲಾತಿ ಇದೆ. ಆದರೆ, ಕಟ್ಟಡದ ದುಸ್ಥಿತಿ ಮಾತ್ರ ಸರಿಹೋಗಿಲ್ಲ. ಇರುವ 10 ಕೊಠಡಿಗಳಲ್ಲಿ ಐದು ಕೊಠಡಿಗಳನ್ನು ಮುಖ್ಯ ಶಿಕ್ಷಕರ ಕೊಠಡಿ, ಶಿಕ್ಷಕರ ಕೊಠಡಿ, ಶಾಲಾ ಸಾಮಗ್ರಿ ಸಂಗ್ರಹ ಕೊಠಡಿ, ಗಣಕಯಂತ್ರ ಕೊಠಡಿ, ಅಡುಗೆ ಮನೆಗಾಗಿ ಐದು ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಉಳಿದ ಐದು ಕೊಠಡಿಗಳಲ್ಲಿ ಒಂದನ್ನು ಕೇಂದ್ರ ಸರ್ಕಾರದ ಅಟಲ್ ಟಿಂಕರಿಂಗ್ ಲ್ಯಾಬ್‌ಗಾಗಿ ಬಳಸಿಕೊಳ್ಳಲಾಗಿದೆ. ಉಳಿದ ನಾಲ್ಕು ಕೊಠಡಿ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿನ ಎರಡು ಕೊಠಡಿಗಳನ್ನು ತರಗತಿಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಒಟ್ಟು ಆರು ಕೊಠಡಿಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಒಟ್ಟು 8 ವಿಭಾಗಗಳ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಪ್ರಭಾರ ಮುಖ್ಯ ಶಿಕ್ಷಕ ಎಸ್.ಲೋಕೇಶ್ ತಿಳಿಸಿದರು.

ಶಾಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೌಶಲ ಅರ್ಹತಾ ತರಗತಿಗಳನ್ನು (ಎನ್.ಎಸ್.ಕ್ಯೂ.ಎಫ್.) ಆರಂಭಿಸಲಾಗಿದೆ. ಇದಕ್ಕಾಗಿ ಎರಡು ಕೊಠಡಿಗಳ ಅವಶ್ಯ ಇದೆ ಎಂದು ತಿಳಿಸಿದರು.

ಶೌಚಾಲಯ ಇದ್ದರೂ ಪಾಳು ಬಿದ್ದಿದೆ: ಶಾಲೆಯಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಶಿಕ್ಷಕರಿಗಾಗಿ ಒಂದು ಪ್ರತ್ಯೇಕ ಶೌಚಾಲಯ ಇದೆ. ಆದರೆ, ಅದರಲ್ಲಿಯೂ ಸಹ ಬಾಗಿಲು ಸರಿ ಇಲ್ಲ. ಅನಿವಾರ್ಯವಾಗಿ ಇದನ್ನೇ ಶಿಕ್ಷಕರು ಬಳುಸುತ್ತಿದ್ದಾರೆ. ಬಾಲಕಿಯರಿಗೂ ಇದನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಉಳಿದಂತೆ ಬಾಲಕರು ಬಯಲು ಆಶ್ರಯಿಸುವುದು ಅನಿವಾರ್ಯವಾಗಿದೆ ಎಂದು ಶಿಕ್ಷಕರು ಹೇಳುತ್ತಾರೆ.

ಶಿಕ್ಷಕರ ಕೊರತೆ: ಶಾಲೆಯಲ್ಲಿ ಮುಖ್ಯ ಶಿಕ್ಷಕರೂ ಸೇರಿದಂತೆ ಒಟ್ಟು 13 ಬೋಧಕ ಹುದ್ದೆಗಳು, 3 ಮಂದಿ ಬೋಧಕೇತರ ಹುದ್ದೆಗಳು ಖಾಲಿ ಇವೆ. ಇದರಲ್ಲಿ 7 ಮಂದಿ ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. 3 ಮಂದಿ ಬೋಧಕೇತರ ಹುದ್ದೆಗಳು ಖಾಲಿ ಇವೆ.

ಹಾಗೆಯೇ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಯಾನ್‌ಗಳಲ್ಲಿ ಕುಡಿಯುವ ನೀರನ್ನು ತರಿಸುತ್ತಿದ್ದೇವೆ. ಶಾಲೆ ಸಮಸ್ಯೆಗಳು ಹಾಗೂ ಅಗತ್ಯ ಬಗ್ಗೆ ಶಿಕ್ಷಣ ಇಲಾಖೆಗೆ ವರದಿ ನೀಡಲಾಗಿದೆ ಎಂದು ಮುಖ್ಯ ಶಿಕ್ಷಕ ಲೋಕೇಶ್ ಮಾಹಿತಿ ನೀಡಿದರು.

‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಾತ್ರ ಸೌಲಭ್ಯ ನೀಡುವುದಿಲ್ಲ. ಕಳಚಿ ಬೀಳುತ್ತಿರುವ ಕಟ್ಟಡದಲ್ಲಿ ಮಕ್ಕಳು ಹೇಗೆ ತಾನೇ ಶಿಕ್ಷಣ ಕಲಿಯಲು ಸಾಧ್ಯ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಭೀತಿಯುಂಟು ಮಾಡುವ ಶಾಲೆಗಳಿಗೆ ಹೇಗೆ ತಾನೇ ದಾಖಲಿಸುತ್ತಾರೆ. ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು‘ ಎಂದು ಪೋಷಕರಾದ ರಾಮಕೃಷ್ಣ, ಮಂಚೇಗೌಡ ಒತ್ತಾಯಿಸಿದರು. ‌‌

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಅವರಿಗೆ ಸತತವಾಗಿ ದೂರವಾಣಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

‘ಅಧಿಕಾರಿಗಳ ಗಮನಕ್ಕೆ ತರಲಾಗಿದೆ’

ಶಾಲಾ ಕಟ್ಟಡದ ದುಸ್ಥಿತಿ ಬಗ್ಗೆ ಶಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಕೆಲವು ಕೊಠಡಿಗಳ ಚಾವಣಿ ಕಳಚಿ ಬಿದ್ದಿದೆ. ಅವುಗಳ ರಿಪೇರಿ ಮಾಡಿಸಲಾಗಿದೆ. ಶೌಚಾಲಯ ನಿರ್ವಹಣೆ ಮಾಡಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೂ ಮನವಿ ಮಾಡಲಾಗಿದೆ - ಉಮೇಶ್ ಎಸ್.ಡಿ.ಎಂ.ಸಿ ಅಧ್ಯಕ್ಷ

‘ಮಕ್ಕಳ ಪ್ರಾಣದ ಜತೆ ಚೆಲ್ಲಾಟ’

ಖಾಸಗಿ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವ ಈ ವೇಳೆಯಲ್ಲಿ ನಮ್ಮೂರ ಶಾಲೆಯಲ್ಲಿ 280ಕ್ಕೂ ಹೆಚ್ಚು ದಾಖಲಾತಿ ಇರುವುದು ಹೆಮ್ಮೆಯ ಸಂಗತಿ. ಇಷ್ಟಿದ್ದರೂ ಸರ್ಕಾರ ಶಾಲೆಗೆ ಮೂಲ ಸೌಲಭ್ಯ ನೀಡಲು ಮೀನಮೇಷ ಎಣಿಸುತ್ತಿರುವುದು ತರವಲ್ಲ. ಕಟ್ಟಡ ಕುಸಿದು ಬಿದ್ದರೆ ಮಕ್ಕಳ ಪ್ರಾಣಕ್ಕೆ ಹಾನಿಯಾಗುವ ಸಂಭವ ಹೆಚ್ಚಾಗಿದೆ. ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು – ಕೆ.ಎಸ್. ನಾಗರಾಜು ಸ್ಥಳೀಯ ಮುಖಂಡ ಕೋಡಂಬಹಳ್ಳಿ

ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಮೇಲ್ಚಾವಣಿ ಕಳಚಿ ಬಿದ್ದಿರುವುದು
ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಮೇಲ್ಚಾವಣಿ ಕಳಚಿ ಬಿದ್ದಿರುವುದು
ಕಟ್ಟಡದ ಕೊಠಡಿಯೊಂದರಲ್ಲಿ ಚಾವಣಿ ತೇಪೆ ಹಾಕಿರುವುದು
ಕಟ್ಟಡದ ಕೊಠಡಿಯೊಂದರಲ್ಲಿ ಚಾವಣಿ ತೇಪೆ ಹಾಕಿರುವುದು
ಪಾಳುಬಿದ್ದಿರುವ ಶೌಚಾಲಯ
ಪಾಳುಬಿದ್ದಿರುವ ಶೌಚಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT