ಬುಧವಾರ, ಜುಲೈ 28, 2021
28 °C
ಲಾಕ್‌ಡೌನ್‌ನಿಂದ ₹ 30 ಕೋಟಿ ನಷ್ಟ

ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಸಜ್ಜು: ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬರೋಬ್ಬರಿ ಎರಡು ತಿಂಗಳ ಬಳಿಕ ಕೆಎಸ್ಆರ್‌ಟಿಸಿ ಬಸ್‌ಗಳು ಮತ್ತೆ ರಸ್ತೆಗೆ ಇಳಿಯಲಿದ್ದು, ಸೋಮವಾರದಿಂದ ಸಂಚಾರ ಆರಂಭ ಆಗುವ ನಿರೀಕ್ಷೆ ಇದೆ.

ಕೋವಿಡ್ ಸೋಂಕಿನ ಪ್ರಕರಣಗಳು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡನೇ ಸುತ್ತಿನ ಅನ್‌ಲಾಕ್‌ ಪ್ರಕ್ರಿಯೆ ಆರಂಭಿಸುತ್ತಿದ್ದು, ಇದೇ 21ರಿಂದ ಬಸ್‌ ಸಂಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ರಾಮನಗರ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಬಸ್‌ಗಳ ಓಡಾಟಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲ ಬಸ್‌ಗಳನ್ನೂ ಅಗತ್ಯ ದುರಸ್ತಿ ಮಾಡಿ ಸುಸ್ಥಿತಿಯಲ್ಲಿ ಇಡಲಾಗಿದೆ. ಜೊತೆಗೆ ವಾಹನಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ.

ವರದಿ ಕಡ್ಡಾಯ: ರಾಮನಗರ ಘಟಕದ ಎಲ್ಲ ಸಿಬ್ಬಂದಿ ಇದೇ 21ರಂದು ಕರ್ತವ್ಯಕ್ಕೆ ಹಾಜರಾಗುವಂತೆ ಸಂದೇಶ ಹೋಗಿದೆ. ಜೊತೆಗೆ ಕೋವಿಡ್ ಪರೀಕ್ಷೆ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಮೂರು ದಿನಗಳ ಒಳಗೆ ಪಡೆದ ಆರ್‌ಟಿಪಿಸಿಆರ್ ವರದಿಯೊಂದಿಗೆ ಕೆಲಸಕ್ಕೆ ಬರುವಂತೆ ಸೂಚಿಸಲಾಗಿದೆ.

‘ಶೇ 90ರಷ್ಟು ಸಿಬ್ಬಂದಿ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಎರಡೂ ಡೋಸ್ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಸ್‌ ಸಂಚಾರ ಕುರಿತು ಭಾನುವಾರ ಸರ್ಕಾರ ನಿರ್ಧಾರ ಪ್ರಕಟಿಸಲಿದೆ. ಅನುಮತಿ ದೊರೆತಲ್ಲಿ ಸೋಮವಾರದಿಂದಲೇ ಸಂಚಾರ ಪುನರಾರಂಭ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

₹ 30 ಕೋಟಿ ನಷ್ಟ: ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ ಕಾರಣಕ್ಕೆ ಕೆಎಸ್ಆರ್‌ಟಿಸಿ ರಾಮನಗರ ಘಟಕ ಒಂದಕ್ಕೇ ಬರೋಬ್ಬರಿ ₹ 30 ಕೋಟಿಯಷ್ಟು ಆದಾಯ ನಷ್ಟವಾಗಿದೆ.

ರಾಮನಗರ ಘಟಕದಲ್ಲಿ 550ಕ್ಕೂ ಹೆಚ್ಚು ಬಸ್‌ಗಳು ಇವೆ. ಕೋವಿಡ್ ಪೂರ್ವದಲ್ಲಿ 450–500 ಮಾರ್ಗಗಳಲ್ಲಿ ಈ ಬಸ್‌ಗಳು ಸಂಚರಿಸುತ್ತಿದ್ದು, ದಿನಕ್ಕೆ ಸರಾಸರಿ ₹ 45 ಲಕ್ಷ ಆದಾಯ ಸಂಗ್ರಹ ಆಗುತ್ತಿತ್ತು. ಕಳೆದ ಎರಡು ತಿಂಗಳಿಂದ ಬಸ್‌ ಸಂಚಾರ ಸಂಪೂರ್ಣ ಬಂದ್‌ ಆಗಿದ್ದು, ₹ 30 ಕೋಟಿಯಷ್ಟು ಆದಾಯ ಖೋತಾ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದಲ್ಲದೆ ಏಪ್ರಿಲ್‌ನಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದರು. ಈ ಸಂದರ್ಭವೂ 15 ದಿನಕ್ಕೂ ಹೆಚ್ಚು ಕಾಲ ಬಸ್‌ ಸಂಚಾರ ಬಂದ್‌ ಆಗಿದ್ದು, ಸಂಸ್ಥೆಯು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು