ಶುಕ್ರವಾರ, ಜುಲೈ 1, 2022
27 °C
ಖಾಸಗಿ ಬಂಕ್‌ಗೆ ಕೆಎಸ್‌ಆರ್‌ಟಿಸಿ ಮೊರೆ

ಡೀಸೆಲ್‌ ಸಗಟು ಮಾರಾಟ ದರ ಹೆಚ್ಚಳ: ಸಾರಿಗೆ ನಿಗಮಗಳಿಗೆ ನಷ್ಟದ ಭೀತಿ

ಆರ್. ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಡೀಸೆಲ್‌ ಸಗಟು ದರ ಹೆಚ್ಚಳದಿಂದ ಆಗುವ ನಷ್ಟ ತಪ್ಪಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ಹಾಗೂ ಇತರ ಸಾರಿಗೆ ನಿಗಮಗಳು ಚಿಲ್ಲರೆ ಮಾರಾಟದ ಪೆಟ್ರೋಲ್‌ ಬಂಕ್‌ಗಳ ಮೊರೆ ಹೋಗಿವೆ. ಇದರಿಂದಾಗಿ ಬಂಕ್‌ಗಳ ಮುಂದಿನ ವಾಹನಗಳ ಸಾಲಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕಾಣಿಸಿಕೊಳ್ಳುತ್ತಿವೆ.  

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದ ಕಾರಣ ಡೀಸೆಲ್‌ನ ಸಗಟು ಮಾರಾಟ ದರವು ಮಾರ್ಚ್‌ 21ರಂದು ಪ್ರತಿ ಲೀಟರ್‌ಗೆ ₹25 ಏರಿಕೆ ಆಗಿತ್ತು. ಆದರೆ, ಚಿಲ್ಲರೆ ಮಾರಾಟ ದರದಲ್ಲಿ ಏರಿಕೆ ಆಗಿರಲಿಲ್ಲ. ಸದ್ಯ ರಾಜ್ಯದಲ್ಲಿ ಸಾರಿಗೆ ಸಂಸ್ಥೆ ಮತ್ತು ಕೈಗಾರಿಕೆಗಳಿಗೆ ಮಾರಾಟ ಆಗುವ ಡೀಸೆಲ್‌ ಸಗಟು ದರ ಲೀಟರ್‌ಗೆ ₹110 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದೇ ಡೀಸೆಲ್ ಲೀಟರ್‌ಗೆ ₹95ಕ್ಕೆ ಸಿಗುತ್ತಿದೆ. ಇದರಿಂದ ಸಾರಿಗೆ ಸಂಸ್ಥೆಗಳಿಗೆ ಪ್ರತಿ ಲೀಟರ್‌ಗೆ ₹15  ಹೆಚ್ಚುವರಿ ಹೊರೆ ಬೀಳುತ್ತಿದೆ. ಸಗಟು ರೂಪದಲ್ಲಿ ಡೀಸೆಲ್‌ ಖರೀದಿಸುವ ಸಾರಿಗೆ ಸಂಸ್ಥೆಗಳು ತಮ್ಮ ಡಿಪೊಗಳ ಬಂಕ್‌ಗಳಲ್ಲಿ ಸಂಗ್ರಹಿಸಿ ಬಸ್‌ಗಳಿಗೆ ತುಂಬಿಸುವ ವ್ಯವಸ್ಥೆ ಹೊಂದಿವೆ. ಆದರೆ, ಇದೇ ಏಪ್ರಿಲ್‌ 4ರಿಂದ ಈ ವ್ಯವಸ್ಥೆ ಕೈಬಿಟ್ಟು, ಸಾಮಾನ್ಯ ಬಂಕ್‌ಗಳಲ್ಲೇ ಖರೀದಿ ಮಾಡಲಾಗುತ್ತಿದೆ.

ಒಂದು ಅಂದಾಜಿನ ಪ್ರಕಾರ ಕೆಎಸ್‌ಆರ್‌ಟಿಸಿಗೆ ದಿನವೊಂದಕ್ಕೆ 5.3 ಲಕ್ಷ ಲೀಟರ್ ಡೀಸೆಲ್‌ ಬೇಕು. ಬಿಎಂಟಿಸಿ, ವಾಯವ್ಯ ಸಾರಿಗೆ ಸಂಸ್ಥೆಗಳಿಗೆ 2.8 ಲಕ್ಷ ಲೀಟರ್‌ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ನಿತ್ಯ 2.5 ಲಕ್ಷ ಲೀಟರ್‌ ಡೀಸೆಲ್ ಬೇಕಿದೆ. ದರ ಹೆಚ್ಚಳ ಆದಾಗಿನಿಂದ ಕೆಎಸ್‌ಆರ್‌ಟಿಸಿ ಒಂದಕ್ಕೇ ನಿತ್ಯ ₹80–90 ಲಕ್ಷ ಹೆಚ್ಚುವರಿ ಹೊರೆ ಬೀಳುತ್ತಿದೆ. ಉಳಿದ ನಿಗಮಗಳೂ ₹35–40 ಲಕ್ಷ ನಷ್ಟ ಅನುಭವಿಸುತ್ತಿವೆ.

ಈ ನಷ್ಟ ಭರಿಸಲು ಬಸ್ ಟಿಕೆಟ್‌ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕು. ಇಲ್ಲವೇ ಡೀಸೆಲ್‌ ಖರೀದಿಗೆ ಸಹಾಯ ಧನ ನೀಡಬೇಕು ಎಂದು ಸಾರಿಗೆ ನಿಗಮ ಗಳು ಸರ್ಕಾರದ ಮೊರೆ ಹೋಗಿವೆ. ಆದರೆ, ಸದ್ಯ ಸರ್ಕಾರ ಯಾವುದೇ ತೀರ್ಮಾನಕ್ಕೆ ಬಾರದ ಕಾರಣ ಚಿಲ್ಲರೆ ರೂಪದಲ್ಲೇ ಡೀಸೆಲ್‌ ಖರೀದಿಗೆ ಮುಂದಾಗಿವೆ.

ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯಲ್ಲಿ ಆರು ಡಿಪೊಗಳಿದ್ದು, ಇಲ್ಲಿ ನಿತ್ಯ 450–500 ಬಸ್‌ ಸಂಚರಿಸುತ್ತಿವೆ. ಇವುಗಳಿಗೆ ಪ್ರತಿದಿನ 29 ಸಾವಿರ ಲೀಟರ್‌ ಡೀಸೆಲ್ ಬೇಕು. ಈಗ ಹೊರಭಾಗದ ಬಂಕ್‌ಗಳಲ್ಲಿ ಇಂಧನ ಖರೀದಿ ಮಾಡುತ್ತಿರುವುದರಿಂದ ರಾಮನಗರ ಘಟಕಕ್ಕೆ ನಿತ್ಯ ₹4.5 ಲಕ್ಷ ಉಳಿತಾಯ ಆಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು