ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಟ್ಟಣ ಪಂಚಾಯಿತಿಯಾಗುವ ನಿರೀಕ್ಷೆಯಲ್ಲಿ ಕುದೂರು

ವಿವೇಕ್ ಕುದೂರು
Published 20 ಮೇ 2024, 5:37 IST
Last Updated 20 ಮೇ 2024, 5:37 IST
ಅಕ್ಷರ ಗಾತ್ರ

ಕುದೂರು: ಮಾಗಡಿ ನಂತರ ಹೆಚ್ಚು ಜನಸಂಖ್ಯೆ ಮತ್ತು ವ್ಯಾಪಾರ ವಹಿವಾಟು ನಡೆಯುವ ಕುದೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ದಶಕಗಳಿಂದಲೂ ಜನಪ್ರತಿನಿಧಿಗಳು ಭರವಸೆ ನೀಡುತ್ತಾ ಬಂದಿದ್ದಾರೆ. ಅದು ಇನ್ನೂ ಈಡೇರಿಲ್ಲ. ‌

ತಾಲ್ಲೂಕು ಕೇಂದ್ರದಷ್ಟೇ ವಿಸ್ತಾರವಾಗಿ ಬೆಳೆದಿರುವ ಕುದೂರು ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರುವ ನಿರೀಕ್ಷೆ ಹೊತ್ತಿದೆ.

ಐತಿಹಾಸಿಕ ಹಿನ್ನೆಲೆ ಇರುವ ಕುದೂರು ಪಟ್ಟಣವು ಸುತ್ತಲೂ 2-3 ಕಿಲೋಮೀಟರ್ ವ್ಯಾಪ್ತಿಯವರಿಗೆ ಪಸರಿಸಿದೆ. ಲಕ್ಷ್ಮೀದೇವಿ ನಗರ, ಮಹಾತ್ಮನಗರ, ಮಾರುತಿ ನಗರ, ನಿಶ್ಶಬ್ದ ನಗರ, ನವಗ್ರಾಮ ಸೇರಿದಂತೆ ವಿವಿಧ ಬಡಾವಣೆಗಳು ಮತ್ತು ಲೇಔಟ್ ಒಳಗೊಂಡಂತೆ ಒಟ್ಟು ಎಂಟು ವಾರ್ಡ್ ಗಳನ್ನು ಹೊಂದಿದೆ.

ತಾಲ್ಲೂಕು ಮುಖ್ಯ ಕೇಂದ್ರ ಮಾಗಡಿ ನಂತರ ಅಂದಾಜು 15 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಹಾಗೂ ವಸತಿ ಪ್ರದೇಶವನ್ನು ಹೊಂದಿರುವ ಕುದೂರನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಎಲ್ಲಾ ಸೌಕರ್ಯ ಮತ್ತು ಅವಕಾಶಗಳಿವೆ. ಆದರೂ ಕುದೂರು ಇನ್ನೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ.

ಸಾಮಾನ್ಯವಾಗಿ ಪಟ್ಟಣ ಪಂಚಾಯಿತಿಯಾಗಲು 11 ಸಾವಿರದಿಂದ 25 ಸಾವಿರದವರೆಗೂ ಜನಸಂಖ್ಯೆ ಇರಬೇಕು ಹಾಗೂ ಎಲ್ಲಾ ಸರ್ಕಾರಿ ಹಾಗೂ ಮೂಲಸೌಕರ್ಯಗಳು ಆ ಪ್ರದೇಶಗಳು ಇರಬೇಕು ಎಂಬ ಕಾನೂನು ಇದೆ. ಹೀಗಾಗಿ ಕಾನೂನಿನ ಪ್ರಕಾರವಾಗಿಯೇ 11,000 ಕ್ಕಿಂತ ಹೆಚ್ಚು ಜನಸಂಖ್ಯೆ ಹಾಗೂ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಅಂಚೆ ಕಚೇರಿ, ನಾಡ ಕಚೇರಿ, ಬ್ಯಾಂಕುಗಳು, ದೂರವಾಣಿ ಕಚೇರಿ, ಪಶು ಪಾಲನಾ ಆಸ್ಪತ್ರೆ, ಶಾಲಾ-ಕಾಲೇಜುಗಳು, ನಾನಾ ಖಾಸಗಿ ವ್ಯಾಪಾರ ವಹಿವಾಟು ಕೇಂದ್ರಗಳು.... ಹೀಗೆ ಸಾಮಾನ್ಯ ಜನರಿಗೆ ಪ್ರತಿನಿತ್ಯ ಬೇಕಾಗುವ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ನಿತ್ಯ ಜನರ ಬದುಕಿಗೆ ಬೇಕಾಗುವ ಎಲ್ಲಾ ಸೌಕರ್ಯಗಳು ಕುದೂರಿನಲ್ಲಿ ಸಿಗುತ್ತಿವೆ. ವ್ಯಾಪಾರ ವಹಿವಾಟು ಬೆಳಿಗ್ಗೆಯಿಂದ ರಾತ್ರಿವರೆಗೂ ನಡೆಯುತ್ತಲೇ ಇರುತ್ತಿದ್ದು, ದಿನೇ ದಿನೇ ಕುದೂರು ಪಟ್ಟಣದ ವ್ಯಾಪ್ತಿ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದ ಪಟ್ಟಣ ಪಂಚಾಯಿತಿಯಾಗಿ ಇನ್ನಾದರೂ ಬದಲಾಗಬೇಕು ಎಂಬುದು ಜನರ ಒತ್ತಾಸೆ.

2011ರ ಜನಗಣತಿಯಂತೆ 9,114 ಇದ್ದ ಜನಸಂಖ್ಯೆ ಇಂದು 15 ಸಾವಿರದ ಗಡಿ ದಾಟಿದೆ.

ಕುದೂರಿನಲ್ಲಿ ಸರ್ಕಾರಿ ಮತ್ತು ಖಾಸಗಿಯ ಐದು ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜು, ಮಾಧ್ಯಮಿಕ ಶಾಲೆಗಳು, ಐಟಿಐ ಕಾಲೇಜು, ಪದವಿ ಕಾಲೇಜಿದ್ದು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ರೇಷ್ಮೆಸೀರೆ ನಗರಿ ಎಂದೇ ಖ್ಯಾತವಾಗಿರುವ ಕುದೂರು ಪಟ್ಟಣದಲ್ಲಿ ನೂರಾರು ರೇಷ್ಮೆ ಕೈಮಗ್ಗ ಮತ್ತು ಪವರ್ ಲೂಮ್ಸ್, ಕಟ್ಟಡ ನಿರ್ಮಾಣ ಮತ್ತು ವ್ಯವಸಾಯ ಚಟುವಟಿಕೆಗಳು ಸಾವಿರಾರು ಸಂಖ್ಯೆ ಉದ್ಯೋಗವನ್ನು ಸೃಷ್ಟಿಸುತ್ತಿವೆ. ಪಟ್ಟಣಕ್ಕೆ ದಿನೇ ದಿನೇ ವಲಸಿಗರ ಒಳಹರಿವು ಹೆಚ್ಚಾಗಿದ್ದು, ಮೂಲ ಸೌಲಭ್ಯಗಳ ಪೂರೈಕೆ ಸವಾಲಾಗಿ ಪರಿಣಮಿಸಿದೆ.

ಕಿರಾಣಿ ಬಟ್ಟೆ, ಕಟ್ಟಡ ನಿರ್ಮಾಣ ವಸ್ತು, ಬೆಳ್ಳಿ ಬಂಗಾರ ಆಭರಣ, ಗೃಹಪಯೋಗಿ ವಸ್ತು,ದ್ವಿಚಕ್ರ ವಾಹನ, ರೇಷ್ಮೆ ಸೀರೆ ಇತ್ಯಾದಿಗಳು ವ್ಯಾಪಾರ ಪ್ರಧಾನವಾಗಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್ ಹಣಕಾಸಿನ ವ್ಯವಹಾರಕ್ಕೆ ಪೂರಕವಾಗಿವೆ. ನಿತ್ಯ 20-30 ಬಸ್ ಸಂಚಾರವಿದ್ದು, ಸುತ್ತಮುತ್ತಲಿನ 20 ಹಳ್ಳಿಗಳ ಜನರಿಗೆ ಸಂತೆ ಮತ್ತು ವ್ಯಾಪಾರ ವ್ಯವಹಾರಗಳಿಗೆ ಕುದೂರು ಕೇಂದ್ರ ಸ್ಥಾನವಾಗಿದೆ.

ಕುದೂರು ಪಟ್ಟಣದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ರಸ್ತೆಗಳ ಒತ್ತುವರಿ ಅನಿಯಂತ್ರಿತವಾಗಿದೆ. ಪುರಬೀದಿಗಳು ಮತ್ತು ದೊಡ್ಡ ರಸ್ತೆಗಳು ಗಲ್ಲಿಗಳಾಗುತ್ತಿದ್ದು, ಸಂಚಾರ ದುಸ್ತರವಾಗಿದೆ.

3,380 ಕುಟುಂಬಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ 24 ಸದಸ್ಯರಿದ್ದಾರೆ. ನೆಲ ಬಾಡಿಗೆ, ಮಳಿಗೆ ಬಾಡಿಗೆ, ಮನೆ ಕಂದಾಯ, ನೀರಿನ ಕಂದಾಯ, ತೆರಿಗೆ, ಪರವಾನಗಿ, ಇನ್ನಿತರೆ ಮೂಲಗಳಿಂದ ವಾರ್ಷಿಕ ಸುಮಾರು ₹70 ಲಕ್ಷ ಆದಾಯವಿದೆ. ಕುದೂರು ಪಟ್ಟಣದಲ್ಲಿ ಪಂಚಾಯಿತಿಗೆ ಸೇರಿದ 64 ಅಂಗಡಿ ಮಳಿಗೆಗಳಿವೆ. ಸದ್ಯ ಪಂಚಾಯಿತಿಯಲ್ಲಿ 15 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಟ್ಟಣ ದೊಡ್ಡದಾಗಿರುವುದರಿಂದ ಸರ್ಕಾರ ನಿಗದಿಗಿಂತ ಅಧಿಕ ಸಂಖ್ಯೆಯಲ್ಲಿರುವ ಸಿಬ್ಬಂದಿ ಮತ್ತು ಅಸಮರ್ಪಕ ಕಂದಾಯ ವಸೂಲತಿಯಿಂದಾದ ಆದಾಯ ಸಂಗ್ರಹದಲ್ಲಿ ಬಹುಪಾಲು ವೇತನಕ್ಕೆ ವ್ಯಯವಾಗುತ್ತಿದೆ. ಪಟ್ಟಣದ ಪ್ರಗತಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಸದಾ ಕಾಡುತ್ತಿದೆ.

ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಕುದೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಲೇಬೇಕು ಎನ್ನುವುದು ಜನರ ಬಹುದಿನದ ಬೇಡಿಕೆ.

ಕುದೂರು ಪಟ್ಟಣವು ದಾಬಸ್ ಪೇಟೆ ಮತ್ತು ಕುಣಿಗಲ್ ಕೈಗಾರಿಕಾ ಪ್ರದೇಶಕ್ಕೆ ಹತ್ತಿರವಿದೆ. ರಾಷ್ಟ್ರೀಯ ಹೆದ್ದಾರಿ 75 ಮತ್ತು ರೈಲು ಮಾರ್ಗ ಸಮೀಪವಿರುವುದರಿಂದ ವಸತಿ ಸಮುಚ್ಚಯಗಳು ದಿನೇ ದಿನೇ ಹೆಚ್ಚಾಗುತ್ತಾ ರಿಯಲ್ ಎಸ್ಟೇಟ್ ಸಹ ಬೆಳೆಯುತ್ತಿದ್ದು, ಭೂಮಿಯ ಬೆಲೆ ಗಗನಕ್ಕೆ ಏರುತ್ತಿದೆ. ಇಂತಹ ಸಮಯದಲ್ಲಿ ಪಟ್ಟಣ ಪಂಚಾಯಿತಿ ಆದರೆ ತೆರಿಗೆ ಸಂಗ್ರಹವು ಹೆಚ್ಚಾಗಿ ಸ್ಥಳೀಯ ಸರ್ಕಾರಗಳು ಬೆಳೆಯಲು ಸಹಕಾರಿಯಾಗುತ್ತವೆ.

ಜಿಟಿಟಿಸಿ, ವೀರಾಪುರದಲ್ಲಿ ನಿರ್ಮಾಣವಾಗುತ್ತಿರುವ ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣ, ಮುಂಬರುವ ದಿನಗಳಲ್ಲಿ ತಿಪ್ಪಸಂದ್ರ ಸಮೀಪ ಸಂಸ್ಕೃತ ವಿಶ್ವವಿದ್ಯಾಲಯ ತಲೆ ಎತ್ತಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಕುದೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಜನರ ಬಹುದಿನದ ಬೇಡಿಕೆ.

ಕುದೂರು ಗ್ರಾಮ ಪಂಚಾಯಿತಿ ಕಚೇರಿ
ಕುದೂರು ಗ್ರಾಮ ಪಂಚಾಯಿತಿ ಕಚೇರಿ
ಪಟ್ಟಣದಲ್ಲಿ ಒಟ್ಟು 8 ವಾರ್ಡುಗಳಿಳಿವೆ. ವಾರ್ಡ್‌ನಲ್ಲಿ ಸಮಸ್ಯೆ ಉದ್ಭವಿಸಿ ಸದಸ್ಯರು ಬಳಿ ಹೋದಾಗ ರಾಜಕೀಯ ಜಾತಿ ವೈಯಕ್ತಿಕ ಸಮಸ್ಯೆಗಳ ಉದ್ದೇಶದಿಂದ ಒಬ್ಬರ ಮೇಲೆ ಮತ್ತೊಬ್ಬರು ಹೇಳಿ ನುಣುಚಿಕೊಳ್ಳುತ್ತಾರೆ. ಸಮಸ್ಯೆ ಬಗೆಹರಿಯುವುದಿಲ್ಲ. ಪಟ್ಟಣ ಪಂಚಾಯಿತಿಯಾದರೆ ಒಂದು ವಾರ್ಡಿಗೆ ಒಬ್ಬನೇ ಸದಸ್ಯ ಇರುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲದೆ ಸಮಸ್ಯೆಗಳ ನಿವಾರಣೆಗೆ ಒತ್ತು ಆಗಲಿದೆ ಬಾಬು ಕುದೂರು ಗ್ರಾಮ ಪಂಚಾಯಿತಿಗೆ ನೀಡುತ್ತಿರುವ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ದೊರೆಯುವ ಸಂಪನ್ಮೂಲಗಳಿಂದ ಪಟ್ಟಣದ ಕುಡಿಯುವ ನೀರು ಇನ್ನಿತರೆ ಮೂಲಸೌಕರ್ಯಗಳ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತಿಲ್ಲ. ಪಟ್ಟಣ ಬದಲಾಗಬೇಕಾದರೆ ಹೆಚ್ಚಿನ ಆದಾಯ ಮತ್ತು ಅನುದಾನ ಗಳಿಸುವುದು ಅನಿವಾರ್ಯ.
ಪದ್ಮನಾಭ ಕುದೂರು.
ಪಟ್ಟಣವು ಇಂದಿಗೂ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿರುವುದರಿಂದ ನೋಂದಣಿ ಇಲಾಖೆಯ ಅನುಸಾರ ಸ್ಥಳೀಯ ಆಸ್ತಿ ಮೌಲ್ಯ ಕಡಿಮೆ ಇದೆ. ಸಣ್ಣ ಕೈಗಾರಿಕೆ ಪವರ್ ಲೂಮ್ಸ್ ಗಳಂತಹ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಬ್ಯಾಂಕ್ ಇನ್ನಿತರೆ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಪಡೆಯುವ ವೇಳೆ ಸಮಸ್ಯೆ ಆಗುತ್ತಿದೆ. ಪಟ್ಟಣ ಪಂಚಾಯಿತಿ ಆದರೆ ಸ್ವತ್ತುಗಳ ಮೌಲ್ಯವು ಏರಿ ಸಾಲ ಸೌಲಭ್ಯಗಳ ಪ್ರಮಾಣ ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಶಂಕರ್ ವ್ಯಾಪಾರಿ ಕುದೂರು.  ಈ ಹಿಂದೆ ಒಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಮತ್ತೊಮ್ಮೆ ಸರ್ಕಾರ ಕುದೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅನುಬಂಧ 1 ಮತ್ತು 2ರ ಮಾಹಿತಿಯನ್ನು ಕೇಳಿದೆ. ಅದರ ಮಾಹಿತಿಯನ್ನು ನಾವು ಕಳುಹಿಸಿಕೊಡುತ್ತೇವೆ.
ಪುರುಷೋತ್ತಮ್ ಪಿಡಿಒ ಕುದೂರು ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT