ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಗೈರಾಗಿದ್ದಕ್ಕೆ ಕಿಡಿ, ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ

ಒಂಬತ್ತು ದಿನದಿಂದ ರೇಷ್ಮೆ ಕಾರ್ಖಾನೆಯಲ್ಲಿ ಕೂಡಿ ಹಾಕಿದ್ದ ಮಾಲೀಕ
Published 26 ಡಿಸೆಂಬರ್ 2023, 22:24 IST
Last Updated 26 ಡಿಸೆಂಬರ್ 2023, 22:24 IST
ಅಕ್ಷರ ಗಾತ್ರ

ರಾಮನಗರ: ಮುಂಗಡವಾಗಿ ಸಾಲ ಪಡೆದಿದ್ದ ಕಾರ್ಮಿಕ ಸರಿಯಾಗಿ ಕೆಲಸಕ್ಕೆ ಬರಲಿಲ್ಲ ಎಂದು ಕೋಪಗೊಂಡಿದ್ಡ, ಇಲ್ಲಿನ ಮೆಹಬೂಬ ನಗರದ ಎಸ್‌ಐಯು ರೇಷ್ಮೆ ಕಾರ್ಖಾನೆಯ ಮಾಲೀಕರು ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿದ್ದಾರೆ.

ಕೆಲಸದ ಅವಧಿ ಮುಗಿದ ನಂತರವು ಆತನನ್ನು ಮನೆಗೆ ಕಳುಹಿಸದೆ ಕಾರ್ಖಾನೆಯಲ್ಲಿಯೇ ಸರಪಳಿ ಕಟ್ಟಿ ಕೂಡಿ ಹಾಕಿದ್ದು, ಜೀತದಾಳು ರೀತಿ ಹಗಲು ರಾತ್ರಿ ಕೆಲಸ ಮಾಡಿಸಿಕೊಂಡಿದ್ದಾರೆ. 

ಸಹ ಕಾರ್ಮಿಕರು ನೀಡಿದ ದೂರಿನ ಮೇರೆಗೆ ರಾಮನಗರ ಪುರ ಠಾಣೆ ಪೊಲೀಸರು ಸೋಮವಾರ ಸಂಜೆ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಖಾನೆಯಲ್ಲಿ ಕೂಡಿ ಹಾಕಲಾಗಿದ್ದ ಮೊಹಮ್ಮದ್ ವಸೀಂ (24) ಎಂಬ ಕಾರ್ಮಿಕನನ್ನು ರಕ್ಷಿಸಿದ್ದಾರೆ.

ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್‌ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಂಧಿಸಿದ್ದಾರೆ. 

ಐದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಐಜೂರಿನ ವಾಟರ್‌ ಟ್ಯಾಂಕ್ ವೃತ್ತದ ನಿವಾಸಿ ವಸೀಂ, ಮುಂಗಡವಾಗಿ ₹1.50 ಲಕ್ಷ ಸಾಲ ಪಡೆದಿದ್ದರು. ಅನಿವಾರ್ಯ ಕಾರಣದಿಂದ ತಿಂಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಒಂಬತ್ತು ದಿನದ ಹಿಂದೆ ಮತ್ತೆ ಕೆಲಸಕ್ಕೆ ಹೋಗಿದ್ದರು. 

ಕೆಲಸ ಬಾರದ ವಸೀಂರನ್ನು ಕಂಡು ಕೆಂಡಾಮಂಡಲವಾಗಿದ್ದ ಕಾರ್ಖಾನೆ ಮಾಲೀಕ ಮತ್ತು ಮೇಲ್ವಿಚಾರಕ, ಆತನ ಕಾಲಿಗೆ ಸರಪಳಿ ಕಟ್ಟಿ ಕೂಡಿ ಹಾಕಿದ್ದರು. ಸಾಲ ತೀರುವವರೆಗೂ ಕೆಲಸ ಮಾಡಿಕೊಂಡು ಕಾರ್ಖಾನೆಯಲ್ಲಿಯೇ ಬಿದ್ದಿರುವಂತೆ ತಾಕೀತು ಮಾಡಿದ್ದರು. ಆತನನ್ನು ಒಂಬತ್ತು ದಿನದಿಂದ ಕೂಡಿ ಹಾಕಲಾಗಿತ್ತು. ಹೊರಗಡೆ ಹೋಗಲು ಸಹ ಬಿಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದರು.  

ಸಹಕಾರ್ಮಿಕನ ಸ್ಥಿತಿಗೆ ಮರುಗಿದ್ದ ಇತರ ಕಾರ್ಮಿಕರು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ಶಿರಸ್ತೇದಾರ್ ಶಬಿನ್ ತಾಜ್ ಡಿ. 25ರಂದು ಪೊಲೀಸರಿಗೆ ದೂರು ನೀಡಿದ್ದರು. ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದರು.

‘ಕಾರ್ಖಾನೆಯ ಮೇಲೆ ನಾವು ದಾಳಿ ನಡೆಸಿದಾಗ ಕಾರ್ಖಾನೆಯ ರೇಷ್ಮೆ ಬಾಯ್ಲರ್‌ ಬಳಿ ಕಟ್ಟಿದ್ದ ಸರಪಳಿಯೊಂದಿಗೆ ಕಾರ್ಮಿಕ ಕೆಲಸ ಮಾಡುತ್ತಿದ್ದ. ನಂತರ, ಸರಪಳಿ ತೆಗೆದು ಆತನನ್ನು ರಕ್ಷಿಸಲಾಗಿದೆ. ಆಗ ಕಾರ್ಖಾನೆಯಲ್ಲಿಯೇ ಇದ್ದ ಮಾಲೀಕ ಮತ್ತು ಮೇಲ್ವಿಚಾರಕನನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಮನಗರ ಪುರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಆಕಾಶ್ ಎಸ್.ಚನ್ನಾಳ ಹಾಗೂ ಕಂದಾಯ ಇಲಾಖೆ ಶಿರಸ್ತೇದಾರ್ ಶಬಿನ್ ತಾಜ್ ದಾಳಿ ನಡೆಸಿದ್ದರು.

‘ಪಾರು ಮಾಡಿ ಎಂದು ಅಂಗಲಾಚಿದ’

‘ಕಾರ್ಖಾನೆ ಮೇಲೆ ದಾಳಿ ಮಾಡಿದಾಗ ರೇಷ್ಮೆಗೂಡು ಬೇಯಿಸುವ ಸ್ಥಳದಲ್ಲಿದ್ದ ವಸೀಂ ನಮ್ಮನ್ನು ಕಂಡ ತಕ್ಷಣ ‘ನನ್ನನ್ನು ಇಲ್ಲಿಂದ ಪಾರು ಮಾಡಿ’ ಎಂದು ಅಂಗಲಾಚಿ ಬೇಡಿಕೊಂಡ’ ಎಂದು ಅಧಿಕಾರಿಗಳು ತಿಳಿಸಿದರು. ಆರೋಪಿಗಳ ವಿರುದ್ಧ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ–1976 ಐಪಿಸಿ 343 (ಅಕ್ರಮ ಬಂಧನ) ಐಪಿಸಿ 374 (ಕಾನೂನುಬಾಹಿರವಾಗಿ ದುಡಿಸಿಕೊಳ್ಳುವುದು) ಹಾಗೂ ಐಪಿಸಿ 34 (ಅಪರಾಧ ಸಂಚು) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT