ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ| ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಿತಿ; ಹೊರಗೆ ಥಳಕು, ಒಳಗೆ ಹುಳುಕು

ಉಪನ್ಯಾಸಕರ ಅಸಮಾಧಾನ
Published : 23 ಸೆಪ್ಟೆಂಬರ್ 2024, 4:38 IST
Last Updated : 23 ಸೆಪ್ಟೆಂಬರ್ 2024, 4:38 IST
ಫಾಲೋ ಮಾಡಿ
Comments

ಚನ್ನಪಟ್ಟಣ: ನಗರದಲ್ಲಿ ಸುಮಾರು 70ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಕುಸಿದು ಬೀಳುವ ಆತಂಕ ಎದುರಾಗಿದೆ.

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ 1961ರಲ್ಲಿ ಶಂಕುಸ್ಥಾಪನೆಯಾಗಿ 1964ರಲ್ಲಿ ಉದ್ಘಾಟನೆಗೊಂಡಿರುವ ಎರಡು ಅಂತಸ್ತಿನ ಕಟ್ಟಡ ಹೊರಗಿನಿಂದ ಸುಂದರ, ಒಳಗೆ ಕೊಳುಕು ಎಂಬಂತಾಗಿದೆ. ಕಟ್ಟಡದ ಮೇಲ್ಚಾವಣಿ ಕಳಚಿ ಬೀಳುತ್ತಿದ್ದರೂ ಇದೇ ಕಟ್ಟಡದಲ್ಲಿ ವಿದ್ಯಾರ್ಥಿಗಳು ಆತಂಕದ ವಾತಾವರಣದಲ್ಲಿ ಪಾಠ ಕೇಳುವಂತಾಗಿದೆ.

ಪ್ರಸಕ್ತ ವರ್ಷದಲ್ಲಿ ಎಲ್ಲ ವಿಭಾಗಗಳಲ್ಲಿ ಸುಮಾರು 950ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಸಿವಿಲ್, ಆಟೊ ಮೊಬೈಲ್, ಎಲೆಕ್ಟ್ರಿಕಲ್, ಮೆಕಾನಿಕ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಿವೆ. ಮಂಡ್ಯ, ಮಳವಳ್ಳಿ, ರಾಮನಗರ, ಕನಕಪುರ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ದಾಖಲಾಗಿದ್ದಾರೆ.

ಉತ್ತಮ ಬೋಧಕ ವರ್ಗ ಇದೆ. ಪ್ರತಿವರ್ಷ ಉತ್ತಮ ಫಲಿತಾಂಶವೂ ಬರುತ್ತಿದೆ. ಆದರೆ, ಕಟ್ಟಡದ ದುಸ್ಥಿತಿಯಿಂದಾಗಿ ವಿದ್ಯಾರ್ಥಿಗಳು, ಬೋಧಕರು ಚಿಂತೆಗೀಡಾಗಿದ್ದಾರೆ. ಕಾಲೇಜಿನಲ್ಲಿ 11 ತರಗತಿ ಕೊಠಡಿ, 15 ಪ್ರಯೋಗಶಾಲಾ ಕೊಠಡಿಗಳಿವೆ.

ತರಗತಿ ನಡೆಸಲು ಯೋಗ್ಯವಾಗಿಲ್ಲದ ಕೆಲವು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಪಾಠ ಮಾಡುವ ಕೊಠಡಿಗಳಲ್ಲಿಯೂ ಕಟ್ಟಡದ ಮೇಲ್ಚಾವಣಿ ಆಗಾಗ ಕಳಚಿ ಬೀಳುತ್ತಿರುತ್ತದೆ. ಯಾವಾಗ ಕಟ್ಟಡ ಕುಸಿಯುತ್ತದೋ ಎಂಬ ಭೀತಿಯಲ್ಲಿಯೇ ತರಗತಿ ನಡೆಸುವುದು ಇಲ್ಲಿನ ದಿನನಿತ್ಯದ ವ್ಯಥೆಯಾಗಿದೆ. ಜತೆಗೆ ಶೌಚಾಲಯ ದುಸ್ಥಿತಿಗೆ ತಲುಪಿದೆ ಎಂದು ಹೆಸರೇಳಲಿಚ್ಚಿಸದ ಉಪನ್ಯಾಸಕರೊಬ್ಬರು ದೂರುತ್ತಾರೆ.

ಕಟ್ಟಡದ ದುಸ್ಥಿತಿ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಿಸುವ ಭರವಸೆ ಸಿಗುತ್ತದೆ. ಆದರೆ, ಈವರೆಗೆ ನೂತನ ಕಟ್ಟಡ ಕನಸಾಗಿಯೇ ಉಳಿದಿದೆ ಎಂದು ಮತ್ತೊಬ್ಬ ಉಪನ್ಯಾಸಕರು ಹೇಳುತ್ತಾರೆ.

ಸೋರುವ ಮಾಳಿಗೆ: ‘ಕಟ್ಟಡ ಶಿಥಿಲಾವಸ್ಥೆ ತಲುಪಿ, ಮೇಲ್ಭಾಗದ ಚುರ್ಕಿ ಹಾಳಾಗಿರುವ ಕಾರಣ ಅಲ್ಲಲ್ಲಿ ಮಳೆ ನೀರು ಸೋರುತ್ತದೆ. ತರಗತಿ ನಡೆಯುವ ವೇಳೆ ಮಳೆ ಬಂದರೆ ನೀರು ಕೊಠಡಿಯಲ್ಲಿ ಸೋರಲು ಆರಂಭವಾಗುತ್ತದೆ. ಆಗ ನಮ್ಮ ಗೋಳು ಹೇಳತೀರದು’ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡರು.

ಮಳೆ ಬಂದಾಗ ಆಚೆಗೂ ಹೋಗಲಾಗದ, ಒಳಗೂ ಇರಲಾಗದ ಪರಿಸ್ಥಿತಿ ಇದೆ. ಈ ವೇಳೆ ಕಟ್ಟಡ ಕುಸಿದು ಬಿದ್ದರೆ ಎನ್ನುವ ಭಯ ಎಂದು ವಿದ್ಯಾರ್ಥಿಗಳಾದ ರೋಹಿತ್, ಮನೋಹರ್, ಸಿಂಚನಾ, ನಿಶಾ ಅಳಲು ತೋಡಿಕೊಂಡರು.

ಮತ ಎಣಿಕೆ ಕೇಂದ್ರ: ತಾಲ್ಲೂಕಿನ ಯಾವುದೇ ಸ್ಥಳೀಯ ಚುನಾವಣೆ ನಡೆದರೂ ಮತಯಂತ್ರ, ಮತಪೆಟ್ಟಿಗೆ ಇಡುವ, ನಂತರ ಮತ ಎಣಿಕೆ ನಡೆಸುವ ಕೇಂದ್ರವಾಗಿ ಇದೇ ಪಾಲಿಟೆಕ್ನಿಕ್ ಕಟ್ಟಡ ಬಳಸಿಕೊಳ್ಳಲಾಗುತ್ತಿತ್ತು. ತಾಲ್ಲೂಕಿನ ಗ್ರಾ.ಪಂ.,ತಾ.ಪಂ., ಜಿ.ಪಂ ಚುನಾವಣೆ ಮತಪೆಟ್ಟಿಗೆ, ಸಲಕರಣೆಗಳ ವಿತರಣೆ ಮಾಡಲು ಮತದಾನ ಸಿಬ್ಬಂದಿಗೆ ತರಬೇತಿ ನೀಡಲು, ಮತ ಎಣಿಕೆ ಮಾಡಲು ಈ ಕಟ್ಟಡ ಹಲವು ವರ್ಷಗಳಿಂದ ಬಳಕೆಯಾಗುತ್ತಿತ್ತು. ಇತ್ತೀಚಿಗೆ ಕಟ್ಟಡ ದುಃಸ್ಥಿತಿ ತಲುಪಿದ ನಂತರ ಈ ಎಲ್ಲ ಚಟುವಟಿಕೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಇಷ್ಟಿದ್ದರೂ ಕಳೆದ ಗ್ರಾ.ಪಂ.ಚುನಾವಣೆ ಮತ ಎಣಿಕೆ ಈ ಕಟ್ಟಡದಲ್ಲಿಯೇ ನಡೆದಿತ್ತು.
ಕಟ್ಟಡದ ದುಸ್ಥಿತಿ ಗಮನಿಸಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುವ ಅವಶ್ಯ ಇದೆ. ಶೀಘ್ರವೇ ಈ ಬಗ್ಗೆ ಗಮನ ನೀಡಿದರೆ ಮುಂದೆ ಕಟ್ಟಡ ಕುಸಿಯುವ ಅನಾಹುತ ತಡೆಯಬಹುದು. ಈ ಬಗ್ಗೆ ಎಚ್ಚೆತ್ತುಕೊಳ್ಳಲಿ ಎನ್ನುವುದು ಇಲ್ಲಿಯ ವಿದ್ಯಾರ್ಥಿಗಳ, ಉಪನ್ಯಾಸಕರ ಒತ್ತಾಯವಾಗಿದೆ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಅರುಣಾ ಪ್ರತಿಕ್ರಿಯಿಸಿ, ‘ಕಟ್ಟಡದ ದುಸ್ಥಿತಿ ಬಗ್ಗೆ ಸರ್ಕಾರಕ್ಕೆ ಪತ್ರದ ಮೂಲಕ ವರದಿ ಮಾಡಿದ್ದೇವೆ‘ ಎಂದಷ್ಟೇ ಹೇಳಿದರು.

ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾಪ ಬಂದಿದೆ. ಶೀಘ್ರ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಈ ಬಾರಿ ನೂತನ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣ ವಿಚಾರದಲ್ಲಿ ರಾಜಕಾರಣ!

ನಗರದ ಸರ್ಕಾರಿ ಪಾಲಿಟೆಕ್ನಿಕ್ ನೂತನ ಕಟ್ಟಡ ನಿರ್ಮಾಣ ವಿಚಾರದಲ್ಲಿ ರಾಜಕೀಯ ಸೇರಿಕೊಂಡಿದೆ ಎಂದು ವಿದ್ಯಾರ್ಥಿಗಳು ಕೆಲವು ಉಪನ್ಯಾಸಕರು ಆರೋಪಿಸಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಕಟ್ಟಡದ ದುಸ್ಥಿತಿ ನೋಡಿ ನೂತನ ಕಟ್ಟಡ ನಿರ್ಮಾಣಕ್ಕೆ ₹19ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆ ನಂತರ ಕುಮಾರಸ್ವಾಮಿ ಸರ್ಕಾರ ಪತನವಾದ ಮೇಲೆ ಕೋವಿಡ್‌ ಕಾರಣದಿಂದಾಗಿ ಬಿಡುಗಡೆಯಾಗಿದ್ದ ಅನುದಾನ ವಾಪಸ್ ಹೋಯಿತು ಎಂದು ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.

ಈಗ ತಾಲ್ಲೂಕಿನಲ್ಲಿ ಶಾಸಕರಿಲ್ಲ. ಕಟ್ಟಡದ ದುಸ್ಥಿತಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ. ಉಪ ಚುನಾವಣೆ ನಂತರ ಗಮನ ಹರಿಸುವ ಭರವಸೆ ನೀಡಿದ್ದಾರೆ. ಇಲಾಖೆ ಮಟ್ಟದಲ್ಲಿ ವಿಚಾರಿಸಿದರೆ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಸರ್ಕಾರ ಹೊಸ ಕಾಲೇಜುಗಳಿಗೆ ನೀಡುವ ಸಿ.ಎಸ್.ಆರ್.ಅನುದಾನ ಇಂತಹ ಹಳೆ ಕಾಲೇಜುಗಳಿಗೆ ನೀಡಿದರೆ ಎಷ್ಟೋ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಡುತ್ತಾರೆ.

ಕಳಚಿ ಬಿದ್ದಿರುವ ಸಿಮೆಂಟ್‌
ಕಳಚಿ ಬಿದ್ದಿರುವ ಸಿಮೆಂಟ್‌
ಕಾಲೇಜಿನ ಹೊರಾಂಗಣದ ಸ್ಥಿತಿ ನೋಟ
ಕಾಲೇಜಿನ ಹೊರಾಂಗಣದ ಸ್ಥಿತಿ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT