ಗುರುವಾರ , ಮೇ 26, 2022
25 °C

ತಿಟ್ಟಮಾರನಹಳ್ಳಿ ಗ್ರಾಮದ ಸೇತುವೆ ಬಳಿ ಭೂಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಚನ್ನಪಟ್ಟಣ ಹಾಗೂ ಕುಣಿಗಲ್ ಮುಖ್ಯರಸ್ತೆಯಲ್ಲಿ ಸೇತುವೆ ಬಳಿ ಭುಕುಸಿತ ಉಂಟಾಗಿದ್ದು, ಇದರಿಂದ ಅಪಾಯವಾಗುವ ಸಂಭವ ಎದುರಾಗಿದೆ ಎಂದು ತಿಟ್ಟಮಾರನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುವ ಶತಮಾನಕ್ಕೂ ಹೆಚ್ಚಿನ ಹಳೆಯ ಸೇತುವೆಯ ಬಳಿ ಭೂಕುಸಿತ ಉಂಟಾಗಿದ್ದು, ಸೇತುವೆಗೆ ಅಪಾಯ ಎದುರಾಗಿದೆ. ಇದು ಬೇವೂರು ಹಾಗೂ ಮಾಕಳಿ ಮಾರ್ಗದ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಎನ್ನಿಸಿದ್ದು, ಸೇತುವೆ ಕುಸಿಯುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರಾದ ಸೊಸೈಟಿ ರಾಜಣ್ಣ, ಉಮಾಶಂಕರ್, ಪುಟಾಣಿ ಗೌಡ, ವೆಂಕಟೇಶ್, ಮೆಡಿಕಲ್ ಕುಮಾರ್, ಟಿ.ಎಸ್. ಯೋಗೇಶ್, ದೀಪಾ ರಾಜು ಆರೋಪಿಸಿದ್ದಾರೆ.

ಕೆರೆ ಕೋಡಿ ನೀರು ಹರಿದುಹೋಗಲು ಇರುವ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯ ಒಂದು ಬದಿಯಲ್ಲಿ ಕೆಲದಿನಗಳಿಂದ ಭೂ ಕುಸಿತ ಉಂಟಾಗುತ್ತಿದೆ. ಈ ರಸ್ತೆಯ ಚರಂಡಿ ಹಾಗೂ ಮಳೆ ನೀರು ರಭಸವಾಗಿ ಹಳ್ಳಕ್ಕೆ ಹರಿಯುತ್ತಿರುವ ಕಾರಣದಿಂದ ಸೇತುವೆಯ ಬಳಿ ಭೂ ಕುಸಿತವಾಗುತ್ತಿದೆ. ಇದು ಮುಂದುವರೆದಲ್ಲಿ ಸೇತುವೆಗೆ ಅಪಾಯ ಕಟ್ಟಿಟ್ಟಬುತ್ತಿಯಾಗಿದ್ದು, ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾ.ಪಂ. ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಇದರತ್ತ ಗಮನ ಹರಿಸಬೇಕು. ಇಲ್ಲವಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು