ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನೆಗೆ ಹಚ್ಚಿಸುವ ಪುಸ್ತಕ ಓದು: ಬೋಡ್ಕೆ

‘ನನ್ನ ಒಳಿತಿಗಾಗಿ ಗ್ರಂಥಾಲಯ’ ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಸಿಇಒ
Published 24 ಫೆಬ್ರುವರಿ 2024, 6:56 IST
Last Updated 24 ಫೆಬ್ರುವರಿ 2024, 6:56 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಮಕ್ಕಳು ವಿದ್ಯಾರ್ಥಿದೆಸೆಯಿಂದಲೇ ಪುಸ್ತಕಗಳನ್ನು ಓದುವುದರಿಂದ ಅವರಲ್ಲಿ ಜ್ಞಾನ ವೃದ್ಧಿ ಜೊತೆಗೆ, ವಿಮರ್ಶಾತ್ಮಕ ಚಿಂತನೆ ಬೆಳೆಯಲಿದೆ. ಅದಕ್ಕೆ ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮ ಪೂರಕವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದಶವಾರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಿಎಂಸಿಎ, ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಹಾಗೂ ದಶವಾರ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ‘ನನ್ನ ಒಳಿತಿಗಾಗಿ ಗ್ರಂಥಾಲಯ’ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ 30 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಏಕಕಾಲದಲ್ಲಿ ಗ್ರಂಥಾಲಯಗಳು ಉದ್ಘಾಟನೆಗೊಂಡಿವೆ. ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ 126 ಪಂಚಾಯತಿ ಗ್ರಂಥಾಲಯಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಒಟ್ಟಾರೆ ಈ ಕಾರ್ಯಕ್ರಮ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಇಲಾಖೆಗೆ ಸಹಕಾರ ನೀಡುತ್ತಿರುವ ಸಿಎಂಸಿಎ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಮಾತನಾಡಿ, ‘ರಾಜ್ಯದಲ್ಲೇ ಇದೊಂದು ವಿನೂತನ ಕಾರ್ಯಕ್ರಮ. ಪ್ರತಿ ಭಾನುವಾರ 6ರಿಂದ 10ನೇ ತರಗತಿ ಮಕ್ಕಳಿಗಾಗಿ ಸಿಎಂಸಿಎ ಸಂಸ್ಥೆ ವತಿಯಿಂದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮ ಹಾಗೂ ಚಟುವಟಿಕೆ ಶೀಟ್‌ಗಳ ಮೂಲಕ ಅನುಭವಾತ್ಮಕ ಕಲಿಕೆಗೆ ಅವಕಾಶ ಇರುತ್ತದೆ. ಈ ಮಾದರಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮಕ್ಕಳ ಜೊತೆಗೆ ಪೋಷಕರ ಸಹಕಾರ ಅಗತ್ಯ’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ‘ಜಗತ್ತಿನಲ್ಲಿ ವಿದ್ವಾಂಸರಿಗೆ ಹೆಚ್ಚು ಗೌರವ ಸಿಗುತ್ತದೆ. ಅದಕ್ಕೆ ಶಿಕ್ಷಣ ಮತ್ತು ಜ್ಞಾನ ಕಾರಣ. ಸಿಎಂಸಿಎ ಸಂಸ್ಥೆಯ ಈ ಹಿಂದಿನ ಕಾರ್ಯಕ್ರಮಗಳು ಮಕ್ಕಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿವೆ‌. ಗ್ರಾಮೀಣ ಭಾಗದ ಮಕ್ಕಳು ‌ಭಯ ಮತ್ತು ಸಂಕೋಚ ತೊರೆದು ಪ್ರತಿ ಭಾನುವಾರ ಗ್ರಂಥಾಲಯಕ್ಕೆ ಬರಬೇಕು’ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿಎಂಸಿಎ ಸಂಸ್ಥೆಯ ಪಿ.ಆರ್. ಮರುಳಪ್ಪ, ‘ಸಂಸ್ಥೆ 24 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರತಿ ವಾರ ಅನುಭೂತಿ, ವಿಮರ್ಶಾತ್ಮಕ ಚಿಂತನೆ ಮುಂತಾದ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ಚಟುವಟಿಕೆ ಹಾಳೆಗಳನ್ನು ನೀಡಿ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎಂ. ನಂದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಳಿನಿ ಕಾಡಯ್ಯ, ಪಿಡಿಒ ಕೆ. ದೊಡ್ಡಲಿಂಗೇಗೌಡ, ಸದಸ್ಯರಾದ ಸೌಮ್ಯ, ವಾಣಿ, ಹನುಮಂತು, ಕೃಷ್ಣಪ್ಪ, ಪಂಚಾಯಿತಿ ವ್ಯಾಪ್ತಿಯ ಶಾಲಾ ಶಿಕ್ಷಕರು, ಸಿಎಂಸಿಎ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ಮಹಮ್ಮದ್ ಶಫಿ, ವಿಜಯ್ ರಾಂಪುರ, ಸಿಎಂಸಿಎ ಸಿಬ್ಬಂದಿ ಹಾಜರಿದ್ದರು.

ಜಿಲ್ಲೆಯ ಆಯ್ದ 30 ಪಂಚಾಯಿತಿಗಳಲ್ಲಿ ಏಕಕಾಲದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ, 1551 ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT