ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಗೆದ್ದಿದ್ದರೆ ಕೋಟಿ, ಕೋಟಿ ಅನುದಾನ ತರುತ್ತಿದ್ದೆ: ಶಾಸಕ ಬಾಲಕೃಷ್ಣ

Published 20 ಜೂನ್ 2024, 7:03 IST
Last Updated 20 ಜೂನ್ 2024, 7:03 IST
ಅಕ್ಷರ ಗಾತ್ರ

ಮಾಗಡಿ: ಲೋಕಸಭೆ ಚುನಾವಣೆಗೂ ಮುನ್ನ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಾಗಡಿ ತಾಲ್ಲೂಕಿಗೆ ₹150 ಕೋಟಿ ಅನುದಾನ ತಂದಿದ್ದರು. ಈ ಬಾರಿಯೂ ಜನರು ಅವರನ್ನೇ ಗೆಲ್ಲಿಸಿದ್ದರೆ ತಾಲ್ಲೂಕಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರವನ್ನು  ಅಭಿವೃದ್ಧಿ ಪಡಿಸಲಾಗುತ್ತಿತ್ತು’ ಎಂದು ಶಾಸಕ ಎಚ್‌.ಎಸ್‌. ಬಾಲಕೃಷ್ಣ ಹೇಳಿದರು.

ತಾಲೂಕಿನ ಕಲ್ಯಾ ಹಾಗೂ ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಸುಮಾರು ₹20 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋಟೇಗೌಡನಪಾಳ್ಯ ಬೆಟ್ಟದ ಮಾದೇಶ್ವರ ದೇವಾಲಯದ ಬಳಿ ಕಾವೇರಿ ನೀರಾವರಿ ನಿಗಮದ ₹1 ಕೋಟಿ ವೆಚ್ಚದ ರಕ್ಷಣಾಗೋಡೆ ಕಾಮಗಾರಿಗೆ ವಿಧ್ಯುಕ್ತವಾಗಿ ಈಗ ಚಾಲನೆ ನೀಡಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಈ ಮೊದಲು ಚಾಲನೆ ನೀಡಿರಲಿಲ್ಲ ಎಂದರು.

ಹೇಮಾವತಿ ನೀರಾವರಿಗೆ ತುಮಕೂರು ಜಿಲ್ಲೆಯವರು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಮಾಗಡಿ ತಾಲ್ಲೂಕಿನ ಕಾಂಗ್ರೆಸ್‌ ಮುಖಂಡರು ಆಕ್ಷೇಪ ಎತ್ತಿದ್ದಾರೆ. ಆದರೆ, ಈ ಬಗ್ಗೆ ಸಂಸದ ಡಾ. ಸಿ.ಎನ್‌. ಮಂಜುನಾಥ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಲ್ಲಿಯೂ ಚಕಾರ ಎತ್ತಿಲ್ಲ. ಈ ಇಬ್ಬರಿಗೂ ಮಾಗಡಿಗೆ ಹೇಮಾವತಿ ನೀರು ತರುವ ಬದ್ಧತೆ ಇದೆಯಾ ಎಂದು ಪ್ರಶ್ನಿಸಿದರು. 

ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಜಿಲ್ಲೆಗೆ ಬಂದ ಸಮಯದಲ್ಲಿ ಮೇಕೆದಾಟು ನೀರಾವರಿ ಯೋಜನೆ ಬಗ್ಗೆ ಕೂಡ ಪ್ರಸ್ತಾಪಿಸಲಿಲ್ಲ. ಗೆದ್ದರೆ ಮಹದಾಯಿ, ಮೇಕೆದಾಟು, ಕರಾವಳಿಯಿಂದ ಬಯಲುಸೀಮೆಗೆ ನೀರು ಹರಿಸುವ ನೀರಾವರಿ ಯೋಜನೆಗಳ ಸಮಸ್ಯೆ ಬಗೆಹರಿಸುವುದಾಗಿ ಚುನಾವಣೆಗೂ ಮೊದಲು ಹೇಳಿದ್ದರು. ಗೆದ್ದು ಬಂದ ಮೇಲೆ ಆ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಕೇಳಿದರು. 

ತಹಶೀಲ್ದಾರ್ ಶರತ್ ಕುಮಾರ್, ಕಾಂಗ್ರೆಸ್‌ನ ಶೈಲಜ, ತಾ.ಪಂ.ಮಾಜಿ ಅಧ್ಯಕ್ಷ ನಾರಾಯಣಪ್ಪ, ಮಲ್ಲಿಕಾರ್ಜುನ ಸ್ವಾಮಿ, ಚನ್ನಮ್ಮನಪಾಳ್ಯ ಭರತ್, ಕಲ್ಯ ಗ್ರಾ.ಪಂ. ಅಧ್ಯಕ್ಷ ಬಸವರನಪಾಳ್ಯ ಕುಮಾರ್, ತಗ್ಗೀಕುಪ್ಪೆ ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಮಾದೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ರಂಗಸ್ವಾಮಯ್ಯ, ಜಯರಂಗಯ್ಯ, ಕುರುಪಾಳ್ಯ, ಶಂಕರ್ ಮೋಟೇಗೌಡನಪಾಳ್ಯ ಶ್ರೀನಿವಾಸ್, ಯೋಗಮೂರ್ತಿ, ರಾಜಣ್ಣ, ಹೂಜಗಲ್ ಅರುಣ್ ಕುಮಾರ್‌  ಭಾಗವಹಿಸಿದ್ದರು.

ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಬೇಕಿದ್ದ ವ್ಯಕ್ತಿ ಜೈಲಿಗೆ ಹೋಗಿದ್ದಾರೆ ಎಂಬ ಸಿ.ಪಿ. ಯೋಗೇಶ್ವರ ಹೇಳಿಕೆಗೆ ಮನ್ನಣೆ ನೀಡುವುದು ಸೂಕ್ತವಲ್ಲ. ಅವರಿಗಿಷ್ಟ ಬಂದಂತೆ ಮಾತನಾಡುತ್ತಾರೆ.
–ಎಚ್‌.ಎನ್. ಬಾಲಕೃಷ್ಣ ಶಾಸಕ ಮಾಗಡಿ
ಅರಣ್ಯ ನಾಶಕ್ಕೆ ಎಚ್‌ಡಿಕೆ ಸಹಿ!
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ ಎಂದಾಗ ಖುಷಿಯಾಯಿತು. ನೋಡಿದರೆ ಅರಣ್ಯ ನಾಶಪಡಿಸುವ ಕೆಲಸಕ್ಕೆ ಸಹಿ ಹಾಕಿದ್ದಾರೆ. ಹಿಂದಿನ ಸರ್ಕಾರ ಅರಣ್ಯ ಉಳಿಯಬೇಕು ಎಂದು ಆ ಕಡತವನ್ನು ತಿರಸ್ಕರಿಸಿತ್ತು. ಅದಕ್ಕೆ ಕುಮಾರಸ್ವಾಮಿ ಸಹಿ ಹಾಕಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT