ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ನಾಮಪತ್ರ ಸ್ವೀಕಾರ ಇಂದಿನಿಂದ: ಜಿಲ್ಲಾಧಿಕಾರಿ

ಚೆಕ್‌ಪೋಸ್ಟ್‌ಗಳಲ್ಲಿ ಇದುವರೆಗೆ ₹6.50 ಕೋಟಿ ನಗದು ವಶ
Published 28 ಮಾರ್ಚ್ 2024, 4:50 IST
Last Updated 28 ಮಾರ್ಚ್ 2024, 4:50 IST
ಅಕ್ಷರ ಗಾತ್ರ

ರಾಮನಗರ: ‘ಚುನಾವಣಾ ಆಯೋಗದ ಆದೇಶದಂತೆ ಮಾರ್ಚ್‌ 28ರಿಂದ ಏಪ್ರಿಲ್ 4ರವರೆಗೆ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ 205ನೇ ಕೊಠಡಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು’ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.

‘ನಾಮಪತ್ರ ಸಲ್ಲಿಸುವ ಅಭ್ಯರ್ಥಿಯೊಂದಿಗೆ ನಾಲ್ವರಿಗೆ ಮಾತ್ರ ಕೊಠಡಿ ಪ್ರವೇಶಿಸಲು ಅವಕಾಶವಿರುತ್ತದೆ. ಒಬ್ಬ ಅಭ್ಯರ್ಥಿಗೆ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಒಂದು ನಾಮಪತ್ರದ ಜೊತೆಗೆ ಠೇವಣಿ ಮೊತ್ತ ಹಾಗೂ ಆಸ್ತಿಗೆ ಸಂಬಂಧಿಸಿದ ಪೂರ್ಣ ದಾಖಲಾತಿಗಳನ್ನು ಸಲ್ಲಿಸಬೇಕು’ ಎಂದು ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಿಸಲಾಗುವುದು. ಪ್ರತಿದಿನ ಸ್ವೀಕರಿಸುವ ನಾಮಪತ್ರದ ವಿವರಗಳನ್ನು ಅದೇ ದಿನ ಮಧ್ಯಾಹ್ನ 3 ಗಂಟೆಯ ನಂತರ ಜಿಲ್ಲಾಧಿಕಾರಿ ಕಚೇರಿ ನಾಮಫಲಕದಲ್ಲಿ ಹಾಕಲಾಗುವುದು. ಜೊತೆಗೆ ಆಯೋಗದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ರಾಮನಗರ ತಹಶೀಲ್ದಾರ್ ಎಎಆರ್‌ಒ ಅವರು ನೋಡಲ್ ಅಧಿಕಾರಿಯಾಗಿರುತ್ತಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಯಾವುದೇ ಪಕ್ಷದವರು ರ‍ರ‍್ಯಾಲಿ ಮಾಡುವುದಿದ್ದರೆ, ಎಎಆರ್‌ಒ ಅವರಿಂದ ಪೂರ್ವಾನುಮತಿ ಪಡೆಯಬೇಕು’ ಎಂದರು.

ಕೈಗೊಂಬೆಯಾಗಿಲ್ಲ: ‘ಚುನಾವಣಾಧಿಕಾರಿಯಾಗಿರುವ ನಾನು ಯಾರ ಕೈಗೊಂಬೆಯಾಗಿಯೂ ಕೆಲಸ ಮಾಡುತ್ತಿಲ್ಲ. ಚುನಾವಣಾ ಆಯೋಗದ ನಿರ್ದೇಶನ ಹಾಗೂ ನಿಯಮದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ’ ಎಂದು ‘ಚುನಾವಣಾಧಿಕಾರಿ ಸರ್ಕಾರದ ಕೈಗೊಂಬೆಯಾಗಿದ್ದಾರೆ’ ಎಂಬ ಜೆಡಿಎಸ್ ಆರೋಪ ಕುರಿತ ಪ್ರಶ್ನೆಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

‘ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಇದುವರೆಗೆ ₹6.50 ಕೋಟಿ ನಗದು ಹಾಗೂ ₹1.20 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ‘ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಕಚೇರಿ ಆವರಣಕ್ಕೆ ಮೂರು ವಾಹನಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಕಚೇರಿ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT