ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸೇವೆಯ ನೆನಪು ಹಂಚಿಕೊಂಡ ಮಾಗಡಿಯ ವೀರ ಯೋಧ

ಊರಿಗೆ ಮರಳುವ ಸೇನಾನಿಗೆ ಸನ್ಮಾನಕ್ಕೆ ಸಿದ್ಧತೆ
Last Updated 1 ಆಗಸ್ಟ್ 2021, 3:43 IST
ಅಕ್ಷರ ಗಾತ್ರ

ಮಾಗಡಿ: ‘ದೇಶದ ಗಡಿ ಕಾಯುವ ಭಾಗ್ಯ ಎಲ್ಲರಿಗೂ ಲಭಿಸುವುದಿಲ್ಲ’ ಎಂದು ಗಡಿ ಭದ್ರತಾ ಪಡೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಊರಿಗೆ ಹಿಂತಿರುಗಲಿರುವ ವೀರ ಯೋಧ ಚೆಲುವನಾರಾಯಣ ಹೇಳಿದರು.

ಆಗಸ್ಟ್‌ ಮೊದಲ ವಾರ ಅವರು ಮನೆಗೆ ಮರಳುತ್ತಿದ್ದಾರೆ. ಈ ನಡುವೆಯೇ ವೀರಯೋಧನನ್ನು ಸ್ವಾಗತಿಸಲು ಅವರ ಸಹಪಾಠಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಪಟ್ಟಣದ ವಿದ್ಯಾನಗರದ ನಿವಾಸಿ ಜಯಮ್ಮ ಮತ್ತು ರಂಗಸ್ವಾಮಯ್ಯ ದಂಪತಿಯ ಪುತ್ರರಾದ ಚೆಲುವನಾರಾಯಣ, ಪಟ್ಟಣದ ಜಿಕೆಬಿಎಂಎಸ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. 2000ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಕಾನ್ಸಟೇಬಲ್ ಜಿಡಿಯಾಗಿ ಸೇರ್ಪಡೆಯಾದರು.

ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ (ಸಾಂಬ), ಗುಜರಾತ್‌, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.

‘ಕಾಶ್ಮೀರದ ಕಾರಾಲ್ ಎಂಬ ಅಪಾಯದ ಪ್ರದೇಶದಲ್ಲಿ 2 ವರ್ಷ ಸೇವೆ ಮಾಡಿದ್ದೇನೆ. ಆ ಕ್ಯಾಂಪ್‌ನಿಂದ ಆಚೆ ಬಂದರೆ ಜೀವಂತವಾಗಿ ಮತ್ತೆ ಕ್ಯಾಂಪ್‌ಗೆ ಮರಳುವುದು ಖಚಿತವಿರಲಿಲ್ಲ. ಪ್ರತಿಯೊಂದು ಹೆಜ್ಜೆಯೂ ಹುಟ್ಟು, ಸಾವಿನ ಗಳಿಗೆಯನ್ನು ಲೆಕ್ಕ ಹಾಕುವಂತಿತ್ತು. ಒಂದೊಂದು ಹೆಜ್ಜೆ ಇಡಲು ಭಯದ ವಾತಾವರಣವೇ ಇರುತ್ತದೆ. ಇಂತಹ ಕಷ್ಟದ ನಡುವೆಯೂ 72 ಗಂಟೆ ಕಾಲ ಅಮೀರಬಾದ್ ಅಪರೇಷನ್‌ ಅನ್ನು ಯಶಸ್ವಿಯಾಗಿ ಮುನ್ನಡೆಸಿದೆವು’ ಎಂದು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

‘2010ರಲ್ಲಿ ಗುಜರಾತ್‌ನ ಪಾಕಿಸ್ತಾನದ ಗಡಿ ಭಾಗದಲ್ಲಿಯೂ ಕೆಲಸ ಮಾಡಿದ್ದೇನೆ. 2016ರಲ್ಲಿ ಅಸ್ಸಾಂನ ಬ್ರಹ್ಮಪುತ್ರ ನದಿ ಮಧ್ಯದಲ್ಲಿ ಕೆಲಸ ಮಾಡಿದ್ದು ಅವಿಸ್ಮರಣೀಯ. ಒಮ್ಮೆ ನದಿ ತುಂಬಿ ನಾವಿರುವ ಸ್ಥಳವೇ ಮುಳುಗಡೆಯಾಗಿತ್ತು. ಬೋಟಿನಲ್ಲೇ ಕುಳಿತು ಜೀವ ಉಳಿಸಿಕೊಂಡೆವು. ಗಡಿಗಳಲ್ಲಿ ಹಸುಗಳ ಕಳ್ಳತನ ತಡೆಯುವುದೇ ದೊಡ್ಡ ಕೆಲಸವಾಗಿತ್ತು. ಜೊತೆಗೆ ನದಿ ಪ್ರದೇಶದಲ್ಲಿ ಅಪರಾಧ ಚುಟುವಟಿಕೆ ಆಗದಂತೆ ಕೆಲಸ ನಿರ್ವಹಿಸಿದ್ದೇವೆ. ಕಠಿಣ ಸನ್ನಿವೇಶ ಎದುರಿಸಿ ದೇಶ ಸೇವೆ ಮಾಡಿರುವ ಹೆಮ್ಮೆ ನನಗಿದೆ’ ಎಂದು ವಿವರಿಸಿದರು.

‘ತಾಯಿ ನಾಡಿನ ಸೇವೆ ಮಾಡುವುದೇ ದೊಡ್ಡ ಭಾಗ್ಯ. ಅಂತಹ ದೇಶ ಸೇವೆಯನ್ನು ಯಶಸ್ವಿಯಾಗಿ ಪೂರೈಸಿ ನಿವೃತ್ತರಾಗಿ ಮನೆಗೆ ಮರಳುತ್ತಿರುವುದು ಹೆಮ್ಮೆಯ ವಿಚಾರ. ದೇಶವನ್ನು ಕಾಯುವ ಅಂತಹ ವೀರ ಯೋಧನಿಗೆ ಜನ್ಮ ನೀಡಿರುವುದು ಮಾಗಡಿ ಸೀಮೆ ಎಂಬುದೇ ನಮ್ಮೆಗೆಲ್ಲ ಸಂತಸದ ವಿಚಾರ. ಮನೆಗೆ ಮರಳಿದ ನಂತರ ವೀರ ಯೋಧ ಚೆಲುವನಾರಾಯಣ ಅವರನ್ನು ಭೇಟಿ ಮಾಡಿ ಅಭಿನಂದಿಸುತ್ತೇನೆ’ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT