ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಕುಸಿಯುವ ಸ್ಥಿತಿಯಲ್ಲಿ ಪುರಸಭೆ ಮಳಿಗೆ

Published 18 ಡಿಸೆಂಬರ್ 2023, 8:00 IST
Last Updated 18 ಡಿಸೆಂಬರ್ 2023, 8:00 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಪುರಸಭೆ ಮಾರುಕಟ್ಟೆ ಅಂಗಡಿ ಮಳಿಗೆಗಳು ಶಿಥಿಲಗೊಂಡು ಅಪಾಯಕಾರಿಯಾಗಿವೆ. ಮಳಿಗೆಗೆಳನ್ನು ಕೆಡವಿ ನೂತನ ಕಟ್ಟಡ ನಿರ್ಮಿಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿ ಎರಡು ವರ್ಷ ಕಳೆದಿದೆ.

ನೂತನ ಮಾರುಕಟ್ಟೆ ಕಟ್ಟಡ ನಿರ್ಮಿಸಲು ₹2ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪುರಸಭೆಗೆ ಬರಬೇಕಾದ ಬಾಡಿಗೆ ಹಣ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಶಾಸಕರಾದ ಕೂಡಲೇ ಪುರಸಭೆಯಲ್ಲಿ ಸದಸ್ಯರೆಲ್ಲರನ್ನು ಸೇರಿಸಿ ಸಭೆ ಕರೆದು ಅಪಾಯಕಾರಿ ಪುರಸಭೆ ಅಂಗಡಿ ಮಳಿಗೆಗಳನ್ನು ಕೂಡಲೇ ಕೆಡವಿ ನೂತನ ಕಟ್ಟಡ ಕಟ್ಟುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಶಾಸಕರ ಮಾತು ಧಿಕ್ಕರಿಸಿ ಅಧಿಕಾರಿಗಳು, ದಳ್ಳಾಳಿಗಳ ಅಪವಿತ್ರ ಮೌತ್ರಿಯಿಂದಾಗಿ ಪುರಸಭೆಗೆ ಬರಬೇಕಾದ ಬಾಡಿಗೆ ಹಣ ಖಾಸಗಿಯವರ ಪಾಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಪುರಸಭೆ ಸದಸ್ಯರ ಆರೋಪ.

ಹಿನ್ನೆಲೆ: ಶಾಸಕ ಎಚ್.ಸಿ.ಬಾಲಕೃಷ್ಣ ತಂದೆ ಎಚ್.ಜಿ.ಚನ್ನಪ್ಪ ಶಾಸಕರಾಗಿದ್ದಾಗ 1974-75ರಲ್ಲಿ ಪುರಸಭೆ 10ನೇ ಹಣಕಾಸು ಯೋಜನೆ ಮತ್ತು ಐಡಿಎಸ್ಎಂಟಿ ಯೋಜನೆಗಳ ಅನುದಾನ ಬಳಸಿಕೊಂಡು ಜಿಕೆಬಿಎಂಎಸ್ ಶಾಲೆಗೆ ಮೈಸೂರಿನ ಅರಸರು ದಾನವಾಗಿ ನೀಡಿರುವ ಭೂಮಿಯಲ್ಲಿ 42 ಅಂಗಡಿ ಮಳಿಗೆಗಳನ್ನು ಕಟ್ಟಿಸಿದ್ದರು. ಮಳಿಗೆಗಳನ್ನು ಸಾರ್ವಜನಿಕವಾಗಿ ಹರಾಜು ಮಾಡಿದ್ದು, ಸ್ಥಿತಿವಂತರು ಕಡಿಮೆ ಬಾಡಿಗೆಗೆ ಹರಾಜು ಕೂಗಿ 2 ಮತ್ತು 3 ಅಂಗಡಿ ಮಳಿಗೆಗೆಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

ಹರಾಜಿನಲ್ಲಿ ಮಾಸಿಕವಾಗಿ ಕಡಿಮೆ ಬಾಡಿಗೆಗೆ ಪಡೆದವರು ಮೂರನೇ ವ್ಯಕ್ತಿಗೆ ಮಾಸಿಕವಾಗಿ ಹೆಚ್ಚಿನ ಬಾಡಿಗೆ ಪಡೆದು ಮಳಿಗೆಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ನೀಡಿದ್ದರು. ಅಂದಿನಿಂದ ಇಂದಿನವರೆಗೆ ಅಂಗಡಿ ಮಳಿಗೆಗಳು ಶಿಥಿಲವಾಗಿ ಉರುಳುವ ಸ್ಥಿತಿತೆ ತಲು‍ಪಿವೆ.  ಹರಾಜಿನಲ್ಲಿ ₹800 ಬಾಡಿಗೆ ಕೂಗಿದ್ದವರು ಮೂರನೇ ವ್ಯಕ್ತಿಗೆ ವ್ಯವಹಾರ ನಡೆಸಲು ನೀಡಿದ್ದು ಬಾಡಿಗೆದಾರರಿಂದ ಖಾಸಗಿಯವರು ₹8 ಸಾವಿರದಂತೆ ಬಾಡಿಗೆ ಪಡೆಯುತ್ತಿದ್ದಾರೆ. ಚುನಾವಣೆ ನಡೆದು ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಅಂಗಡಿ ಮಳಿಗೆ ತೆರವುಗೊಳಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸುತ್ತಾರೆ.ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಂಗಡಿಗಳನ್ನು ಹರಾಜಿನಲ್ಲಿ ಪಡೆದು ಮೂರನೇ ವ್ಯಕ್ತಿಗೆ ಬಾಡಿಗೆ ನೀಡಿರುವ ವ್ಯಕ್ತಿಗಳಿಂದ ವಂತಿಗೆ ಸಂಗ್ರಹಿಸುವುದು ನಡೆದುಕೊಂಡು ಬಂದಿದೆ ಎಂದು ವ್ಯಾಪಾರಿಗಳು ಆರೋಪಿಸುತ್ತಾರೆ.

ಜನದಟ್ಟಣೆ ಇರುವ ರಾಮರಾಜ ಅರಸ್‌ ರಸ್ತೆ, ಬಸ್‌ನಿಲ್ದಾಣ ಸಮೀಪ ಇರುವ ಅಂಗಡಿ ಮಳಿಗೆಗೆ ಬೇಡಿಕೆ ಅಧಿಕವಾಗಿದೆ. ಬಡವರಿಗೆ ಹಣ ಸಾಲ ನೀಡಿ ಬಡ್ಡಿ ವ್ಯವಹಾರ ನಡೆಸುವವರೇ ಹೆಚ್ಚಿನ ಅಂಗಡಿಗಳನ್ನು ಹರಾಜಿನಲ್ಲಿ ಪಡೆದಿದ್ದಾರೆ ಎಂದು ಅಂಗಡಿ ಮಳಿಗೆ ಸಿಗದೆ ಬೀದಿಬದಿ ವ್ಯಾಪಾರ ಮಾಡುತ್ತಿರುವ ಮಹಿಳೆಯರು ಆರೋಪಿಸುತ್ತಾರೆ.

ರಾಮರಾಜ ಅರಸ್ ರಸ್ತೆ ಬದಿ ಇರುವ ಪುರಸಭೆ ಅಂಗಡಿ ಮಳಿಗೆಗಳಿಗೆ ಮಾಸಿಕ ಬಾಡಿಗೆ ಇಂದಿಗೂ ಕೇವಲ ₹800 ಇದೆ. ರಸ್ತೆ ಮತ್ತೊಂದು ಬದಿ ಇರುವ ಖಾಸಗಿ ಕಟ್ಟಡಗಳ ಬಾಡಿಗೆ ₹16ರಿಂದ 20 ಸಾವಿರ ಇದೆ. ಪುರಸಭೆ ಅಂಗಡಿ ಮಳಿಗೆಗಳಿಂದ ನ್ಯಾಯೋಚಿತವಾಗಿ ಬರಬೇಕಾದ ಬಾಡಿಗೆ ಕೂಡ ನಿಯಮಿತವಾಗಿ ವಸೂಲಿಯಾಗುತ್ತಿಲ್ಲ ಎಂಬುದು ಹೆಸರು ಹೇಳಲು ಇಚ್ಛಿಸದ ಪುರಸಭೆ ನೌಕರರ ಅಭಿಪ್ರಾಯ.

42 ಅಂಗಡಿ ಮಳಿಗೆಗೆಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಒಂದು ಅಂಗಡಿ ನೀಡಿಲ್ಲ. ಇಲ್ಲೂ ಕೂಡ ಅಸ್ಫೃಶ್ಯತೆ ಅಚರಿಸಿಕೊಂಡು ಬರಲಾಗಿದೆ ಎಂದು ದಲಿತ ಮುಖಂಡರು ಆರೋಪಿಸುತ್ತಾರೆ.

ಪುರಸಭೆಗೆ ಮುಖ್ಯಾಧಿಕಾರಿಗಳಾಗಿ ಮತ್ತು ನೌಕರರಾಗಿ ಬಂದವರು ಇಲ್ಲಿವರೆಗೆ ಯಾರೂ ಪಟ್ಟಣದಲ್ಲಿ ವಾಸವಾಗಿಲ್ಲ.

ದೂರದ ಮೈಸೂರು, ಬೆಂಗಳೂರು, ತುಮಕೂರುಗಳಲ್ಲಿ ವಾಸವಾಗಿದ್ದು, ನಿತ್ಯ ನೆಂಟರು ಬಂದಂತೆ ಪುರಸಭೆ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಪುರಸಭೆ ಅಂಗಡಿ ಮಳಿಗೆಗಳತ್ತ ಗಮನಿಸುತ್ತಿಲ್ಲ. ಅಧಿಕಾರಿಗಳು ತಮಗೆ ಮಾಸಿಕವಾಗಿ ಬರಬೇಕಾದ ವಂತಿಗೆ ಬಂದರೆ ಸಾಕು ಎಂದು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಕೆಲವು ನಿಷ್ಠಾವಂತ ನೌಕರರು ಹೇಳುತ್ತಾರೆ.

ಹರಾಜು ರದ್ದುಪಡಿಸಿ

ಪುರಸಭೆಯಿಂದ ಕಡಿಮೆ ಬಾಡಿಗೆಗೆ ಹರಾಜಿನಲ್ಲಿ ಅಂಗಡಿ ಪಡೆದುಕೊಂಡು ಮೂರನೇ ವ್ಯಕ್ತಿಗೆ ಹೆಚ್ಚಿನ ಬಾಡಿಗೆಗೆ ನೀಡಿರುವವರ

ಹರಾಜು ರದ್ದುಪಡಿಸಿ, ಅಂಗಡಿಯನ್ನು ಖಾಲಿ ಮಾಡಿಸಬೇಕು. ಕಟ್ಟಡ ಕೆಡವಿ ನೂತನ ಮಾರುಕಟ್ಟೆ ನಿರ್ಮಿಸಲು ಅಧಿಕಾರಿಗಳು ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ಮುಂದಾಗಬೇಕು.

ಎಸ್.ಜಿ.ವನಜಾ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕಿ.

ಕಠಿಣ ಕ್ರಮ ಕೈಗೊಳ್ಳಿ

ಪುರಸಭೆ ವ್ಯಾಪ್ತಿಯಲ್ಲಿನ ಅಂಗಡಿ ಮಳಿಗೆಗೆಳಲ್ಲಿ ಎಸ್.ಸಿ, ಎಸ್‌.ಟಿ ಸಮುದಾಯಗಳಿಗೆ ಅಂಗಡಿ ನೀಡದೆ ಅಸ್ಪೃಶ್ಯತೆ ಆಚರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಲಿತರಿಗೆ ಅಂಗಡಿ ಮಳಿಗೆಗಳನ್ನು ನೀಡಬೇಕು.

ಪುಷ್ಪಾವತಿ, ಸಂಚಾಲಕಿ, ರಾಜ್ಯ ಭೋವಿ ಸಂಘದ ಮಹಿಳಾ ಸಂಚಾಲಕಿ

ಕಟ್ಟಡ ಕೆಡವಲು ಯೋಜನೆ

ಪುರಸಭೆ ಅಂಗಡಿ ಮಳಿಗೆಗಳು ಶಿಥಿಲಗೊಂಡಿವೆ. ಹರಾಜಿನಲ್ಲಿ ಕಡಿಮೆ ಬಾಡಿಗೆಗೆ ಪಡೆದು ಮೂರನೇ ವ್ಯಕ್ತಿಗೆ ಹೆಚ್ಚಿನ ಬಾಡಿಗೆ ಪಡೆದಿರುವುದು ನಾನು ಅಧಿಕಾರ ವಹಿಸಿಕೊಳ್ಳುವುದಕ್ಕಿಂತ ಮುಂಚಿನ ವಿಚಾರ. ಶಿಥಿಲ ಕಟ್ಟಡ ಕೆಡವಲು ಯೋಜನೆ ರೂಪಿಸಲಾಗಿದೆ.

ಶಿವರುದ್ರಯ್ಯ, ಮುಖ್ಯಾಧಿಕಾರಿ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT