ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಾದರೂ ಬಿಡುಗಡೆಯಾಗದ ಬಿಲ್: ಗ್ರಾ.ಪಂ. ಕಚೇರಿಗೆ ಮೇಕೆ ನುಗ್ಗಿಸಿ ಪ್ರತಿಭಟನೆ

Published 16 ಜೂನ್ 2023, 13:06 IST
Last Updated 16 ಜೂನ್ 2023, 13:06 IST
ಅಕ್ಷರ ಗಾತ್ರ

ರಾಮನಗರ: ನರೇಗಾದಡಿ ಕೊಟ್ಟಿಗೆ ನಿರ್ಮಾಣದ ಬಿಲ್ ಬಿಡುಗಡೆ ವಿಳಂಬವಾಗಿದ್ದರಿಂದ ಆಕ್ರೋಶಗೊಂಡ ರೈತರೊಬ್ಬರು, ಮೈಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣಕ್ಕೆ ಶುಕ್ರವಾರ ಮೇಕೆಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದರು.

ಪಂಚಾಯಿತಿ ಕಡೆಯಿಂದ ರೈತ ರವಿ ಅವರಿಗೆ ಕೊಟ್ಟಿಗೆ ಮಂಜೂರಾಗಿತ್ತು. ನಿರ್ಮಾಣ ಕೆಲಸದ ₹37,982 ಸಾವಿರ ಬಿಲ್ ಒಂದು ವರ್ಷವಾದರೂ ಬಿಡುಗಡೆಯಾಗಿರಲಿಲ್ಲ.

ನಿತ್ಯ ಕಚೇರಿಗೆ ಅಲೆದು ರೋಸಿ ಹೋಗಿದ್ದ ರವಿ ಅವರು, ಬೆಳಿಗ್ಗೆ ಮೇಕೆಗಳನ್ನು ತಂದು ಕಚೇರಿ ಆವರಣದೊಳಗೆ ಬಿಟ್ಟು ಹೊರಗಿನಿಂದ ಕೆಲ ಹೊತ್ತು ಬಾಗಿಲು ಹಾಕಿಕೊಂಡರು. ಪ್ರತಿಭಟನೆ ನಿಲ್ಲಿಸುವಂತೆ ಪಿಡಿಒ ಮಾಡಿದ ಮನವಿಗೂ ಬಗ್ಗಲಿಲ್ಲ. ಕಡೆಗೆ, ತಾಲ್ಲೂಕು ಪಂಚಾಯಿತಿ ಇಒ ಕರೆ ಮಾಡಿ ಮಾತನಾಡಿದ ಬಳಿಕ, ಪ್ರತಿಭಟನೆ ಕೈಬಿಟ್ಟರು.

‘ಬಿಲ್ ಬಿಡುಗಡೆಗಾಗಿ ಅಧಿಕಾರಿಗಳು ಸಬೂಬು ಹೇಳುತ್ತಲೇ ಬರುತ್ತಿದ್ದಾರೆ. ಇದರಿಂದಾಗಿ, ಬೇಸತ್ತು ಪಂಚಾಯಿತಿ ಕಚೇರಿಗೆ ಮೇಕೆಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದ್ದೇನೆ. ಇನ್ನಾದರೂ, ಕೊಟ್ಟಿಗೆ ನಿರ್ಮಾಣದ ಬಿಲ್ ಬಿಡುಗಡೆ ಮಾಡಲಿ’ ಎಂದು ರವಿ ಆಗ್ರಹಿಸಿದರು.

ನಮ್ಮಿಂದ ವಿಳಂಬವಾಗಿಲ್ಲ
‘ಬಿಲ್ ನೇರವಾಗಿ ಸರ್ಕಾರದಿಂದ ಫಲಾನುಭವಿ ಖಾತೆಗೆ ನೇರವಾಗಿ ಪಾವತಿಯಾಗುತ್ತದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಯನ್ನು ಈಗಾಗಲೇ ಕಂಪ್ಯೂಟರ್‌ನಲ್ಲಿ ಅಪ್ಡೇಟ್‌ ಮಾಡಲಾಗಿದೆ. ಬಿಲ್ ಬಿಡುಗಡೆ ವಿಳಂಬದಲ್ಲಿ ನಮ್ಮ ಪಾತ್ರವಿಲ್ಲ. ಈ ಬಗ್ಗೆ ರವಿ ಅವರಿಗೆ ತಿಳಿ ಹೇಳಿದರೂ ಕೇಳದೆ ಪಂಚಾಯಿತಿ ಕಚೇರಿಗೆ ಮೇಕೆಗಳನ್ನು ತಂದು ಕಟ್ಟಿದರು’ ಎಂದು ಪಿಡಿಒ ಶಿಭಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಭಟನೆ ನಡೆಸಿದ ರೈತ ಮತ್ತು ಪಿಡಿಒ ಜೊತೆ ಮಾತನಾಡಿದದೇನೆ. ಬಿಲ್ ಕುರಿತು ಮಾಹಿತಿ ಪಡೆದಿದ್ದೇನೆ. ಶನಿವಾರ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ’ ಎಂದು ರಾಮನಗರ ತಾ.ಪಂ. ಇಒ ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT