ಸೋಮವಾರ, ಮೇ 23, 2022
24 °C

ಮಾರಮ್ಮ ದೇವಿ ಕೊಂಡೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಬರಡನಹಳ್ಳಿಯ ಶಕ್ತಿದೇವತೆ ಮಾರಮ್ಮ ದೇವಿಯ ಕೊಂಡೋತ್ಸವ ಬುಧವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಿಯ ಕೊಂಡೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಎಳವಾರ ಕಾರ್ಯಕ್ರಮ ನಡೆಯಿತು. ಎಳವಾರದ ಮೆರವಣಿಗೆ ಮುಕ್ತಾಯವಾದ ನಂತರ ಕೊಂಡದಲ್ಲಿ ಸೌದೆಯನ್ನಿಟ್ಟು ಅಗ್ನಿಪೂಜೆ ನೆರವೇರಿಸಲಾಯಿತು.

ಬೆಳಿಗ್ಗೆ ಬರಡನಹಳ್ಳಿ ಗ್ರಾಮಸ್ಥರು ಮಾರಮ್ಮ ದೇವಸ್ಥಾನದ ಅರ್ಚಕ ವೀರಭದ್ರ ಅವರೊಂದಿಗೆ ಚಿಕ್ಕಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿದರು. ನಂತರ ದೇವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಸಪ್ಪನ ದೇವಸ್ಥಾನದ ಅರ್ಚಕ ಪರಶಿವಯ್ಯ ಅವರ ಮನೆವರೆಗೂ ಜನರು ಮಾರಮ್ಮನಿಗೆ ಮಡಲಕ್ಕಿ ಕಟ್ಟಿ ಪೂಜೆ ನೆರವೇರಿಸಿದರು.

ಗ್ರಾಮದಲ್ಲಿರುವ ಪ್ರತಿ ಕುಟುಂಬದ ಹೆಣ್ಣುಮಕ್ಕಳು ತಂಬಿಟ್ಟಿನ ಆರತಿಯೊಂದಿಗೆ ದೇವರನ್ನು ಮೆರವಣಿಗೆಯಲ್ಲಿ ಅಗ್ನಿಕೊಂಡದವರೆಗೆ ಕರೆತಂದರು. ದೇವರು ಹೊತ್ತ ಅರ್ಚಕ ವೀರಭದ್ರ ಕೊಂಡದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ನಡೆಸಿ ಕೊಂಡ ಹಾಯ್ದರು.

ಸಾವಿರಾರು ಸಂಖ್ಯೆಯಲ್ಲಿ ನೂಕುನುಗ್ಗಲಿನಲ್ಲಿ ನಿಂತಿದ್ದ ಭಕ್ತರು ದೇವರು ಅಗ್ನಿಕೊಂಡು ಪ್ರವೇಶಿಸುವುದನ್ನು ನೋಡಿ ಕಣ್ತುಂಬಿಕೊಂಡರು. ನಂತರ ಅಲ್ಲೇ ಇರುವ ಮಾರಮ್ಮ ದೇವಿಯ ಚಿಕ್ಕಗುಡಿಯಲ್ಲಿ ತಂಬಿಟ್ಟಿನ ಆರತಿಯನ್ನು ದೇವಿಗೆ ಸಮರ್ಪಿಸಿ ಕುಟುಂಬಕ್ಕೆ ಒಳ್ಳೆಯದಾಗಲಿ. ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದು
ಪ್ರಾರ್ಥಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಜನರಲ್ಲಿ ಹೊಸ ಚೈತನ್ಯ ಮತ್ತು ನವೋಲ್ಲಾಸ ಮನೆ ಮಾಡಿತ್ತು. ಗ್ರಾಮದ ಯಜಮಾನರು (ಊರಗೌಡರು) ಹಬ್ಬದ ನೇತೃತ್ವವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು