ಗುರುವಾರ , ಫೆಬ್ರವರಿ 25, 2021
23 °C
ಜೈವಿಕ ತ್ಯಾಜ್ಯ ನಿರ್ವಹಣೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

‘ಆಸ್ಪತ್ರೆ ಕಸದ ವೈಜ್ಞಾನಿಕ ವಿಲೇವಾರಿ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭಾಂಗಣದಲ್ಲಿ ಸಾರ್ವಜನಿಕ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್, ಲ್ಯಾಬ್ ಮತ್ತು ಪಶು ವೈದ್ಯಕೀಯ ಸಿಬ್ಬಂದಿಗಳಿಗೆ ನಡೆದ ಜೈವಿಕ ತ್ಯಾಜ್ಯ ನಿರ್ವಹಣೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಾಗೂ ಪ್ರಾಣಿಗಳ ರೋಗನಿರ್ಣಯ ಚಿಕಿತ್ಸೆ ಅಥವಾ ಪ್ರತಿರಕ್ಷಣೆ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜಿಲ್ಲಾ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರುವ ಜವಾಬ್ದಾರಿ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ತ್ಯಾಜ್ಯ ಮುಖ್ಯವಾಗಿ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್, ವೆಟರ್ನರಿ ಇನ್‌ಸ್ಟಿಟ್ಯೂಟ್‌, ಅಥವಾ ಎನಿಮಲ್ ಹೌಸ್, ರಕ್ತನಿಧಿ ಕೇಂದ್ರಗಳು, ರಕ್ತದಾನ ಶಿಬಿರಗಳು, ಆಯುಷ ಆಸ್ಪತ್ರೆಗಳು, ಆರೋಗ್ಯ ಶಿಬಿರಗಳು, ಔಷಧ ಕೇಂದ್ರಗಳಿಂದ ಬರುತ್ತಿದ್ದು, ವೈದ್ಯಕೀಯ ತ್ಯಾಜ್ಯ ಘಟಕದಲ್ಲಿ ವಿಲೇವಾರಿಯಾಗಬೇಕು ಎಂದು ಅವರು ಹೇಳಿದರು.

ದ್ರವ ಮತ್ತು ಘನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಇದಕ್ಕಾಗಿಯೇ 2016 ಮಾರ್ಚ್‌ 28 ರಂದು ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣಾ ನಿಯಮಗಳು ಜಾರಿಗೆ ಬಂದಿದೆ. ಜೈವಿಕ, ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡುವುದು, ತ್ಯಾಜ್ಯ ಉತ್ಪಾದನೆಯನ್ನು ಕಡಿಮೆಗೊಳಿಸಿ ಪರಿಸರದ ಮೇಲೆ ಪರಿಣಾಮ ಬೀರುವದನ್ನು ಕಡಿಮೆಗೊಳಿಸುವುದಾಗಿದೆ ಎಂದು ತಿಳಿಸಿದರು.

ತ್ಯಾಜ್ಯ ವಿಲೇವಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ನಗರಸಭೆಯವರು ಸಂಗ್ರಹಿಸುವ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಕೂಡಿಸುವಂತಿಲ್ಲ. ಪ್ರತ್ಯೇಕವಾಗಿ ವಿಲೇವಾರಿಯಾಗಬೇಕು. ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸುವ ವಾಹನಗಳ ಮೇಲೆ ಮಾಹಿತಿ ಇರಬೇಕು ಎಂದು ತಿಳಿಸಿದರು.

ಜಿಲ್ಲಾ ಗುಣಮಟ್ಟ ಖಾತರಿ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಆರ್.ಎನ್. ಲಕ್ಷ್ಮೀಪತಿ ಮಾತನಾಡಿ ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಆಸ್ಪತ್ರೆಯಲ್ಲಿ ನಿಗದಿತ ಬಾಕ್ಸ್‌ಗಳಲ್ಲಿ ಮಾತ್ರ ತ್ಯಾಜ್ಯಗಳನ್ನು ಹಾಕಬೇಕು. ಬಾಕ್ಸ್‌ನಲ್ಲಿ ಹಾಕುವಾಗಲೇ ಸ್ವಲ್ಪ ಯೋಚಿಸಿದರೆ ತ್ಯಾಜ್ಯ ವಿಲೇವಾರಿ ಸರಳವಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ವೈದ್ಯರು ಸೂಕ್ತ ಕ್ರಮ ವಹಿಸಬೇಕು. ತದನಂತರ ನಿಯೋಜಿತ ತ್ಯಾಜ್ಯ ವಿಲೇವಾರಿ ವಾಹನ ಬಂದಾಗ ಅದನ್ನು ನೀಡಬೇಕು ಎಂದರು.

ಸರ್ಕಾರ ಪರಿಸರ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಬೇಕಿದೆ. ಅದರಲ್ಲಿಯೂ ನಾನಾ ರಾಸಾಯನಿಕಗಳಿಂದ ಕೂಡಿದ ವೈದ್ಯಕೀಯ ಘನತ್ಯಾಜ್ಯ ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡುವ ಅಗತ್ಯವಿದೆ. ಸಾರ್ವಜನಿಕರಿಗೆ ಈ ತ್ಯಾಜ್ಯದಿಂದ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ತ್ಯಾಜ್ಯದ ಪರಿಣಾಮಕಾರಿಯಾಗಿ ವಿಲೇವಾರಿ ಕಡೆಗೆ ಗಮನ ನೀಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪರಿಸರ ಸಂರಕ್ಷಣೆಗೆ ಘನ ಹಾಗೂ ದ್ರವರೂಪದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ವಾಯು ಹಾಗೂ ವಾತಾವರಣವನ್ನು ಸ್ವಚ್ಫವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರದ ನಾನಾ ಇಲಾಖೆಗಳೊಂದಿಗೆ ಸಾರ್ವಜನಿಕರು ಸಹಕರಿಸುವುದರೊಂದಿಗೆ ಪರಿಸರ ಸ್ವಚ್ಫತೆಗೆ ಮುಂದಾಗಬೇಕು ಎಂದು ತಿಳಿಸಿದರು.

ಉಪ ಪರಿಸರ ಅಧಿಕಾರಿ ಲೋಕೇಶ್, ಜಿಲ್ಲಾ ಆಸ್ಪತ್ರೆಯ ಕ್ವಾಲಿಟಿ ಕೋ-ಆರ್ಡಿನೇಟರ್ ಡಾ. ಕಲಾ, ಜಿಲ್ಲಾ ಗುಣಮಟ್ಟ ಸಲಹೆಗಾರ್ತಿ ಸುಷ್ಮಶ್ರೀ, ಕಾರ್ಯಕ್ರಮ ಸಹಾಯಕ ಶೇಖರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು