ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಹಳ್ಳಿ ಡೇರಿಯಿಂದ ಬಾಂಗ್ಲಾದೇಶಕ್ಕೆ ಹಾಲಿನ ಪೌಡರ್‌

Last Updated 16 ಜೂನ್ 2021, 5:46 IST
ಅಕ್ಷರ ಗಾತ್ರ

ಕನಕಪುರ: ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಮೆಗಾ ಡೇರಿಯಿಂದ ಬಾಂಗ್ಲಾದೇಶಕ್ಕೆ ಹಾಲಿನ ಪೌಡರ್‌ ತುಂಬಿಕೊಂಡು ಹೊರಟ ವಾಹನಗಳಿಗೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಸಹಕಾರಿ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

ಶಿವನಹಳ್ಳಿ ಬಳಿಯ ಬಮೂಲ್‌ ಮೆಗಾ ಡೇರಿಯಲ್ಲಿ ಮಂಗಳವಾರ ಹಾಲಿನ ಪೌಡರ್‌ ತುಂಬಿಕೊಂಡ ನಾಲ್ಕು ಟ್ರಕ್‌ಗಳು ಪ್ರಯಾಣ ಬೆಳೆಸಿದವು.

ಬಿ.ಸಿ.ಸತೀಶ್‌ ಮಾತನಾಡಿ, ‘ಬೆಂಗಳೂರು ಸಹಕಾರಿ ಹಾಲು ಒಕ್ಕೂಟಕ್ಕೆ ಇಂದು ಸಂತಸದ ದಿನವಾಗಿದೆ. ಬಾಂಗ್ಲಾದೇಶಕ್ಕೆ 500 ಮೆಟ್ರಿಕ್‌ ಟನ್‌ ಹಾಲಿನ ಪೌಡರ್‌ ಪೂರೈಕೆ ಮಾಡುವ ಸುವರ್ಣ ಅವಕಾಶ ಬಮೂಲ್‌ಗೆ ದೊರೆತಿದೆ’ ಎಂದು ತಿಳಿಸಿದರು.

ರಾಜ್ಯದ ಕೆಎಂಎಫ್‌ನಲ್ಲಿ 14 ಒಕ್ಕೂಟಗಳಿದ್ದು ಅದರಲ್ಲಿ ಬಮೂಲ್‌ ಮೊದಲ ಸ್ಥಾನದಲ್ಲಿದ್ದು ದಿನವೊಂದಕ್ಕೆ 19 ಲಕ್ಷ ಲೀಟರ್‌ ಹಾಲು ಉತ್ಪತ್ತಿಯಾಗುತ್ತಿದೆ. ಇದರಲ್ಲಿ 9 ಲಕ್ಷ ಹಾಲು ಪ್ರತಿ ದಿನ ಉಳಿಯುತ್ತಿದ್ದು ಅದನ್ನು ಪೌಡರ್‌ ಆಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದರು.

ದೇಶದಲ್ಲಿ ಕೊರೊನಾ ಸೋಂಕು ಮತ್ತು ಲಾಕ್‌ ಡೌನ್‌ ಇರುವುದರಿಂದ ನಂದಿನಿ ಉತ್ಪನ್ನಗಳು ಮತ್ತು ಹಾಲಿನ ಪೌಡರ್‌ ಸ್ಟಾಕ್‌ ಉಳಿದಿದ್ದು ಒಕ್ಕೂಟವು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾ ದೇಶವು ಪೌಡರ್‌ ಖರೀದಿಗೆ ಮುಂದಾಗಿರುವುದು ಬಮೂಲ್‌ಗೆ ಆಶಾದಾಯಕ ಬೆಳವಣಿಗೆ ಆಗಿದೆ. ಏಪ್ರಿಲ್‌ ತಿಂಗಳಲ್ಲೇ ಬಾಂಗ್ಲಾದೇಶಕ್ಕೆ ಪೌಡರ್‌ ಕಳಿಸಬೇಕಿತ್ತು. ಲಾಕ್‌ಡೌನ್‌ ಇದ್ದುದರಿಂದ ಒಂದೂವರೆ ತಿಂಗಳು ತಡವಾಗಿದೆ ಎಂದು ಹೇಳಿದರು.

ಕನಕಪುರದಲ್ಲಿ ಬಮೂಲ್‌ನ ಮೆಗಾ ಡೇರಿ ಪ್ರಾರಂಭ ಮಾಡಿರುವುದು ಉತ್ತಮವಾಗಿದೆ. ಇಲ್ಲವಾದಲ್ಲಿ ಒಕ್ಕೂಟವು ಇನ್ನಷ್ಟು ನಷ್ಟವನ್ನು ಅನುಭವಿಸಬೇಕಿತ್ತು. ಇಲ್ಲಿ ವಿಶಾಲವಾದ ಜಾಗವಿದ್ದು, 60 ಟನ್‌ ಪೌಡರ್‌ ಉತ್ಪತ್ತಿ ಮಾಡುವಂತ ಮತ್ತೊಂದು ಪ್ಲಾಂಟ್‌ನ್ನು ಇನ್ನು ಒಂದೂವರೆ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.

ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ‘ನಮ್ಮ ಒಕ್ಕೂಟವು ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಉತ್ಪತ್ತಿಯಾಗುವ ಒಕ್ಕೂಟವಾಗಿದೆ. ಕೊರೊನಾ ಮತ್ತು ಲಾಕ್‌ಡೌನ್‌ ಕಾರಣದಿಂದ ಬೇರೆ ಒಕ್ಕೂಟಗಳು ರೈತರಿಂದ ಹಾಲು ಖರೀದಿ ಮಾಡುವುದನ್ನು ನಿಲ್ಲಿಸಿ ವಾರದಲ್ಲಿ 2 ದಿನ ರಜೆ ಮಾಡಬೇಕೆಂದಿದ್ದವು. ಆದರೆ ರೈತರ ಹಿತದೃಷ್ಟಿಯಿಂದ ನಾವು ರಜೆ ಮಾಡದೆ ಹಾಲನ್ನು ಖರೀದಿಸಿದ್ದೇವೆ’ ಎಂದು ತಿಳಿಸಿದರು.

ಬಮೂಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸ್ವಾಮಿ, ಕೆಎಂಎಫ್‌ ನಿರ್ದೇಶಕರಾದ ಕಾಪು ದಿವಾಕರ್‌ಶೆಟ್ಟಿ, ಶೈಲೇಂದ್ರಗೌಡ ಪಾಟೀಲ್‌, ವೀರಭದ್ರಬಾಬು, ಬಮೂಲ್‌ ನಿರ್ದೇಶಕರಾದ ಎಚ್‌.ಬಿ.ರಾಜಕುಮಾರ್‌, ಎಚ್‌.ಎಸ್‌. ಹರೀಶ್‌ಕುಮಾರ್‌, ಮಂಜುನಾಥ್‌‌, ಕೆಎಂಎಫ್‌ ನಿರ್ದೇಶಕರಾದ ಎಂ.ಕೆ.ಕುಲಕರ್ಣಿ, ಎನ್‌.ಮುನಿರೆಡ್ಡಿ, ಸತೀಶ್‌, ಬಮೂಲ್‌ ಅಧಿಕಾರಿಗಳಾದ ಡಾ. ಮಂಜುನಾಥ್, ಗೋಪಾಲ್‌ಮೂರ್ತಿ, ಎಚ್‌.ಕೆ.ಮಂಜುನಾಥ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT