ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ರೇಷ್ಮೆ ಬೆಳೆಗಾರರ ಸಮಸ್ಯೆಗೆ ಪರಿಹಾರದ ಭರವಸೆ

ಜನಪ್ರತಿನಿಧಿಗಳು, ರೈತರು, ರೀಲರ್ಸ್‌ಗಳ ಅಹವಾಲು ಆಲಿಸಿದ ರೇಷ್ಮೆ ಸಚಿವ ಕೆ. ವೆಂಕಟೇಶ್
Published : 11 ಸೆಪ್ಟೆಂಬರ್ 2024, 6:01 IST
Last Updated : 11 ಸೆಪ್ಟೆಂಬರ್ 2024, 6:01 IST
ಫಾಲೋ ಮಾಡಿ
Comments

ರಾಮನಗರ: ‘ರೇಷ್ಮೆ ಬೆಳೆಗಾರರ ಸಮಸ್ಯೆಗಳ ಕುರಿತು ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಲಾಗುವುದು. ಸಮಸ್ಯೆಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಹಂತಹಂತವಾಗಿ ಪರಿಹರಿಸಲಾಗುವುದು’ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಭರವಸೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜನಪ್ರತಿನಿಧಿಗಳು, ಅಧಿಕಾರಿಗಳು, ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್‌ಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಚಿವರಾದಾಗ ರೇಷ್ಮೆ ಖಾತೆಯನ್ನು ನಿಭಾಯಿಸಿದ್ದರು. ಅವರಿಗೆ ಈ ಕ್ಷೇತ್ರದ ಸಮಸ್ಯೆಗಳ ಅರಿವಿದ್ದು, ಬೆಳೆಗಾರರಿಗೆ ಸ್ಪಂದಿಸಲಿದ್ದಾರೆ’ ಎಂದರು.

‘ಇಲಾಖೆಯು ಆರ್ಥಿಕ ತೊಂದರೆಯಲ್ಲಿದೆ. ಅಧಿಕಾರಿಗಳು, ಸಿಬ್ಬಂದಿ ಕೊರತೆ ಸೇರಿದಂತೆ ಇಲಾಖೆಯಲ್ಲೂ ನ್ಯೂನತೆಗಳಿವೆ. ಸರ್ಕಾರ ರೇಷ್ಮೆ ಬೆಳೆಗಾರರಿಗೆ ಒದಗಿಸಿರುವ ಸವಲತ್ತುಗಳನ್ನು ಅಧಿಕಾರಿಗಳು ನಿಗದಿತ ಅವಧಿಯೊಳಗೆ ತಲುಪಿಸಬೇಕು. ಕ್ಷೇತ್ರ ಭೇಟಿ ಸಂದರ್ಭದಲ್ಲಿ ಬೆಳೆಗಾರರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಜಿಲ್ಲೆಯಲ್ಲಿ ನೂತನ ರೇಷ್ಮೆ ಮಾರುಕಟ್ಟೆಯನ್ನು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಆದರೂ, ಹಳೆ ಮಾರುಕಟ್ಟೆಯಲ್ಲಿ ವಹಿವಾಟು ಮುಂದುವರಿಸಲಾಗುವುದು. ವಿವಿಧ ಜಿಲ್ಲೆಗಳಲ್ಲಿ ಇಲಾಖೆಗೆ ಸೇರಿದ ಸಾಕಷ್ಟು ಜಮೀನಿದೆ. ಬೆಳೆಗಾರರು ಹಾಗೂ ರೀಲರ್ಸ್‌ಗಳ ಹಿತದೃಷ್ಟಿಯಿಂದ ವಿವಿಧ ರೀತಿಯ ಚಟುವಟಿಕೆಗಳನ್ನು ಅಲ್ಲಿ ಕೈಗೊಳ್ಳಲಾಗುವುದು’ ಎಂದರು.

‘ಈಗಾಗಲೇ ಹನಿ ನೀರಾವರಿ ಯೋಜನೆ ಸೌಲಭ್ಯ ಪಡೆದವರಿಗೆ ಮತ್ತೆ ಸೌಲಭ್ಯ ಪಡೆಯಲು ಇಲಾಖೆಯಲ್ಲಿ ಅವಕಾಶವಿಲ್ಲ. ಮತ್ತೆ ಕೊಡಬೇಕೆಂಬ ಒತ್ತಡವಿದ್ದು, ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಶರ್ಮಾ ಇಕ್ಬಾಲ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಉಪ ವಿಭಾಗಧಿಕಾರಿ ಬಿನೋಯ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಸವರಾಜ, ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ರವಿ, ಚಾಕಿ ಸಾಕಾಣಿಕೆ ಕೇಂದ್ರಗಳ ಮಾಲೀಕರು ಹಾಗೂ ಬೆಳೆಗಾರರು ಇದ್ದರು.

ರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತರು ಅಧಿಕಾರಿಗಳು ಹಾಗೂ ರೀಲರ್ಸ್‌ಗಳು
ರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ರೈತರು ಅಧಿಕಾರಿಗಳು ಹಾಗೂ ರೀಲರ್ಸ್‌ಗಳು

ರೈತರ ಒತ್ತಾಯಗಳು

* ಸರ್ಕಾರ ರೇಷ್ಮೆ ಬೆಳೆಗಾರರನ್ನು ರಕ್ಷಿಸಿ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು.

* ಬೆಳೆಗಾರರಿಗೆ ಇಲಾಖೆ ವತಿಯಿಂದಲೇ ಸಬ್ಸಿಡಿ ದರಲ್ಲಿ ಮಿನಿ ಟ್ರಾಕ್ಟರ್ ಒದಗಿಸಬೇಕು.

* ಬಿತ್ತನೆ ವಲಯವನ್ನು ಸಮರ್ಥವಾಗಿ ನಿರ್ವಹಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.

* ಸರ್ಕಾರಿ ಶೈತ್ಯಾಗಾರದಲ್ಲಿ ಖಾಸಗಿಯವರು ಮೊಟ್ಟೆ ಇರಿಸಲು ಉಚಿತವಾಗಿ ಅಥವಾ ದರ‌ ನಿಗದಿಪಡಿಸಿ ಅವಕಾಶ ಕಲ್ಪಿಸಬೇಕು.

* ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ನೀಗಿಸಿ. ಪಶುಗಳ ಚಿಕಿತ್ಸೆಗೆ ಸಂಚಾರ ವಾಹನಗಳನ್ನು ಒದಗಿಸಿ.

ರಾಮನಗರ ತಾಲ್ಲೂಕಿನ ಕೆ.ಪಿ. ದೊಡ್ಡಿಯಲ್ಲಿ ರೀಲರ್ಸ್ ಪಾರ್ಕ್‌ಗಾಗಿ 37 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಆ ಕುರಿತು ಈಗಾಗಲೇ ಸಲ್ಲಿಸಿರುವ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ

‘3 ತಿಂಗಳಿಗೊಮ್ಮೆ ಸಭೆ ನಡೆಸಿ’ ‘ರೇಷ್ಮೆಗೆ ಖ್ಯಾತಿಯಾಗಿರುವ ರಾಮನಗರದಲ್ಲಿ 3 ತಿಂಗಳಿಗೊಮ್ಮೆ ಬೆಳೆಗಾರರು ಹಾಗೂ ರೀಲರ್ಸ್‌ಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಆಲಿಸಬೇಕು. ನಗರದಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶೌಚಾಲಯ ಕ್ಯಾಂಟೀನ್ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ನೀಗಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ‘ಇಲಾಖೆಯ ವಿಜ್ಞಾನಿಗಳು ಹೋಬಳಿ ಅಥವಾ ಪಂಚಾಯಿತಿ ಮಟ್ಟದಲ್ಲಿ ಶಿಬಿರ ಆಯೋಜಿಸಿ ರೇಷ್ಮೆ ಕೃಷಿಯಲ್ಲಾಗುತ್ತಿರುವ ಬದಲಾವಣೆ ಕುರಿತು ರೈತರಿಗೆ ತಿಳಿವಳಿಕೆ ನೀಡಬೇಕು’ ಎಂದು ಸಲಹೆ ನೀಡಿದರು. ‘ವಿಸ್ತರಣೆಯಾಗದ ರೇಷ್ಮೆ ಕೃಷಿ’ ‘ಆಗಾಗ ಲಾಭ ಸಿಕ್ಕರೂ ರೇಷ್ಮೆ ಕೃಷಿ ವಿಸ್ತರಣೆಯಾಗುತ್ತಿಲ್ಲ. ಇತ್ತೀಚೆಗೆ ಕೃಷಿಯಿಂದ ವಿಮುಖವಾಗುವವರ ಸಂಖ್ಯೆ ಹೆಚ್ಚಾಗಿದೆ. ಬಿತ್ತನೆ ಹಂತದಲ್ಲೇ ರೈತರು ಹಿನ್ನಡೆ ಅನುಭವಿಸುತ್ತಿದ್ದಾರೆ. ಬೆಳೆಗಾರರು ರೀಲರ್ಸ್‌ಗಳು ಹಾಗೂ ವ್ಯಾಪಾರಿಗಳು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ರೋಗಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಇಲಾಖೆಯ ಸಂಶೋಧನಾ ಕೇಂದ್ರ ನಿಷ್ಕ್ರಿಯವಾಗಿದೆ. ರೀಲರ್ಸ್‌ಗಳು ಮನೆಯನ್ನೇ ಉದ್ಯಮ ಮಾಡಿಕೊಂಡು ಕುಟುಂಬದವರೇ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರಿಗೆ ವಿದ್ಯುತ್ ಸಬ್ಸಿಡಿ ಜೊತೆಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕೊಡಬೇಕು. ಹುಳುಗಳನ್ನು ವಾಸನೆರಹಿತವಾಗಿ ವಿಲೇವಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸಚಿವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಒತ್ತಾಯಿಸಿದರು. ಪ್ರೋತ್ಸಾಹಧನ ನಿಗದಿಗೆ ಸಮಿತಿ ರಚನೆ ‘ಸಿದ್ದರಾಮಯ್ಯ ಅವರು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ರೇಷ್ಮೆ ದರ ಮತ್ತು ಪ್ರೋತ್ಸಾಹಧನ ನೀಡುವುದಕ್ಕೆ ಸಂಬಂಧಿಸಿದಂತೆ ಡಾ. ಬಸವರಾಜ ಸಮಿತಿ ನೇಮಿಸಿದರು. ಸಮಿತಿ ಶಿಫಾರಸಿನ ಮೇರೆಗೆ ನಿಗದಿಯಾಗಿದ್ದ ಪ್ರೋತ್ಸಾಹಧನ ಸ್ಥಗಿತಗೊಂಡಿದೆ. ಹಾಗಾಗಿ ವರದಿಯನ್ನು ಜಾರಿಗೊಳಿಸಬೇಕು’ ಎಂದು ರೈತರೊಬ್ಬರು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಎಂ.ಬಿ. ರಾಜೇಶ್ ಗೌಡ ‘ಬಸವರಾಜ ಸಮಿತಿಗೆ ಪೂರಕವಾಗಿ ದರ ಪರಿಷ್ಕರಣೆಗೆ ಮತ್ತೊಂದು ಸಮಿತಿ ರಚಿಸಲಾಗಿದೆ. ವರದಿ ಬಂದ ಬಳಿಕ ಜಾರಿಗೊಳಿಸಲಾಗುವುದು. ಸದ್ಯ ಒಂದು ಕೆ.ಜಿ ರೇಷ್ಮೆ ಉತ್ಪಾದನೆಗೆ ₹400 ವೆಚ್ಚವಾಗುತ್ತಿದ್ದು ಸಮಿತಿಯು ಅದಕ್ಕಿಂತ ಹೆಚ್ಚಿನ ದರವನ್ನು ನಿಗದಿಪಡಿಸಲಿದೆ’ ಎಂದು ಭರವಸೆ ನೀಡಿದರು. ‘ಅಕ್ರಮವಾಗಿ ಗೂಡ ಸಂಗ್ರಹ ನಿಯಂತ್ರಿಸಿ’ ‘ರಾಮನಗರ ಮಾರುಕಟ್ಟೆಯಲ್ಲಿ ಕೆಲವರು ವಾಮಮಾರ್ಗದ ಮೂಲಕ ವ್ಯಾಪಾರ ಪರವಾನಗಿ ಪಡೆದು ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಗೂಡು ಖರೀದಿಸುತ್ತಿದ್ದಾರೆ. ಕೆಲವೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟು ಚೀನಾ ಸೇರಿದಂತೆ ವಿದೇಶಗಳಿಗೆ ಮಾರಾಟ ಮಾಡುವ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ. ಅಂತಹವರಿಗೆ ಇಲಾಖೆ ಕಡಿವಾಣ ಹಾಕಬೇಕು’ ಎಂದು ರೀಲರ್ಸ್‌ಗಳು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಸುಭದ್ರ’ ‘ರಾಜ್ಯದ ಮತದಾರರು ಕಾಂಗ್ರೆಸ್‌ನ 136 ಮಂದಿಯನ್ನು ಗೆಲ್ಲಿಸಿ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದಾರೆ. ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಸುಭದ್ರವಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೇ ಮುಂದೆಯೂ ಇರುತ್ತಾರೆ’ ಎಂದು ಸಚಿವ ಕೆ. ವೆಂಕಟೇಶ್ ಹೇಳಿದರು. ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದೀಪಾವಳಿ ಬಳಿಕ ಸರ್ಕಾರ ಉಳಿಯಲ್ಲ ಎಂಬ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆಯಲ್ಲಿ ಹುರುಳಿಲ್ಲ. ವಿರೋಧ ಪಕ್ಷದ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಅದಕ್ಕೆಲ್ಲ ಮಹತ್ವ ಕೊಡಬೇಕಾದ ಅಗತ್ಯವಿಲ್ಲ’ ಎಂದರು. ‘ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಕೆಲವರು ಹಿರಿತನದ ಮಾತನಾಡುತ್ತಿದ್ದಾರೆ. ಅವರ ಬಾಯಿ ಮುಚ್ಚಿಸಲು ಆಗಲ್ಲ. ಹಾಗಂತ ಮುಖ್ಯಮಂತ್ರಿ ಸ್ಥಾನವೂ ಖಾಲಿ ಇಲ್ಲ. ಖಾಲಿಯಾದ ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT