ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದ ಸುರೇಶ್‌ರನ್ನು ರಾವಣನಿಗೆ ಹೋಲಿಸಿದ ಶಾಸಕ ಮುನಿರತ್ನ

ರಾಮ–ರಾವಣ ಯಾರೆಂದು ಜನ ತೀರ್ಮಾನಿಸುತ್ತಾರೆ
Published 25 ಮಾರ್ಚ್ 2024, 12:51 IST
Last Updated 25 ಮಾರ್ಚ್ 2024, 12:51 IST
ಅಕ್ಷರ ಗಾತ್ರ

ಕನಕಪುರ: ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು, ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ರಾವಣನಿಗೆ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ರಾಮನಿಗೆ ಹೋಲಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುರೇಶ್ ಪರವಾಗಿ ಯಾರೇ ಬಂದರೂ ರಾವಣ ರಾವಣನೇ, ರಾಮ ರಾಮನೇ. ರಾಮನಿಗೆ ಹೆಚ್ಚು ಮತ ಬರುತ್ತದೊ, ರಾಮನಿಗೆ ಬರುತ್ತದೊ ಕಾದು ನೋಡೋಣ. ಯಾರೇನು ಎಂಬುದರ ತೀರ್ಮಾನವನ್ನು ಜನರಿಗೆ ಬಿಟ್ಟಿದ್ದೇವೆ’ ಎಂದು ವಾಗ್ದಾಳಿ ನಡೆಸಿದರು.

‘ಕನಕಪುರದಲ್ಲಿ ಬಿಜೆಪಿ–ಜೆಡಿಎಸ್‌ ಬೂತ್ ಏಜೆಂಟ್‌ಗಳಿಗೆ ಡಿ.ಕೆ. ಸಹೋದರರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕುತ್ತಾರೆ. ಅವರ ದೌರ್ಜನ್ಯ ತಡೆಯಲು ಕ್ಷೇತ್ರದಲ್ಲಿ ಅರೆ ಸೇನಾಪಡೆ ನಿಯೋಜಿಸಬೇಕು. ಅವರು ಬಂದರೆ ಎಲ್ಲವೂ ಸರಿ ಹೋಗಲಿದೆ. ಈ ಕುರಿತು ಎರಡೂ ಪಕ್ಷಗಳ ವರಿಷ್ಠರು ಆಯೋಗಕ್ಕೆ ಮನವಿ ಮಾಡಿದ್ದಾರೆ’ ಎಂದರು.

ಸಹೋದರರದ್ದು ರಕ್ತ ಚರಿತ್ರೆ: ‘ರಾಜಕಾರಣದಲ್ಲಿ ಡಿ.ಕೆ ಸಹೋದರರದ್ದು ರಕ್ತ ಚರಿತ್ರೆ. ದಮನಕಾರಿ ನೀತಿ ಮತ್ತು ದಬ್ಬಾಳಿಕೆ ಮಾಡಿಕೊಂಡೇ ಬಂದಿದ್ದಾರೆ. ಜನರನ್ನು ಪ್ರೀತಿಯಿಂದ ಗೆಲ್ಲುವ ಬದಲು ಪೊಲೀಸ್ ದೌರ್ಜನ್ಯದ ಮೂಲಕ ನಿಯಂತ್ರಿಸುತ್ತಿದ್ದಾರೆ. ಹಾಗಾಗಿ, ಜನರೇ ಈ ಚುನಾವಣೆಯು ರಾಮ–ರಾವಣ ಮತ್ತು ಧರ್ಮ–ಅಧರ್ಮದ ನಡುವಣ ಹೋರಾಟ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಾಮನ ಪಕ್ಷದ ಅಭ್ಯರ್ಥಿಯೇ ಇಲ್ಲಿ ಗೆಲ್ಲುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಮುನಿರತ್ನ ಹೇಳಿಕೆಗೆ ದನಿಗೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT