ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AP ರಂಗನಾಥ್‌ಗೆ ಸೋಲೇ ಅರ್ಹತೆ, ಶಿಕ್ಷಣದ ಗಂಧ–ಗಾಳಿ ಗೊತ್ತಿಲ್ಲ: ಪುಟ್ಟಣ್ಣ

Published 10 ಫೆಬ್ರುವರಿ 2024, 7:50 IST
Last Updated 10 ಫೆಬ್ರುವರಿ 2024, 7:50 IST
ಅಕ್ಷರ ಗಾತ್ರ

ರಾಮನಗರ: ‘ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಾ ಶಿಕ್ಷಣ ಕ್ಷೇತ್ರದ ಪಿಆರ್‌ಒ ಆಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಬದುಕು ತೆರೆದ ಪುಸ್ತಕ. ಮಾಡಿದ್ದನ್ನೇ ಹೇಳಿದ್ದೇನೆ. ಹೇಳುವುದನ್ನೇ ಮಾಡುತ್ತೇನೆ’ ಎಂದು ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಹೇಳಿದರು.

‘ಹೋರಾಟಗಾರರಿಗೆ ಉಪ ಚುನಾವಣೆ ಅನಿವಾರ್ಯ. ಅಲ್ಲದವರು ಜಡತ್ವದಿಂದ ಇರುತ್ತಾರೆ. ನಾನು ಪಕ್ಷಾಂತರ ಮಾಡಿದ್ದೇನೆಯೇ ಹೊರತು, ಮಾರಾಟವಾಗಿಲ್ಲ. ಶಿಕ್ಷಕರ ವಿಷಯದಲ್ಲಿ ನನ್ನ ಬದ್ಧತೆ ಬದಲಾಗಿಲ್ಲ. ಯಾರ ಬಳಿಯಾದರೂ ಹಣ ಪಡೆದು ಹೋರಾಟ ಮಾಡಿದ್ದರೆ ಸಾಬೀತುಪಡಿಸಲಿ’ ಎಂದು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ನಾನ್ ಪ್ರಾಕ್ಟೀಸಿಂಗ್ ವಕೀಲ ಎ.ಪಿ. ರಂಗನಾಥ್ ಅವರಿಗೆ ಶಿಕ್ಷಣದ ಗಂಧ–ಗಾಳಿ ಗೊತ್ತಿಲ್ಲ. ನೈಜ ವಕೀಲರಾಗಿದ್ದರೆ ದಾಖಲೆ ಸಮೇತ ಆರೋಪ ಮಾಡುತ್ತಿದ್ದರು. ಚುನಾವಣೆಗಳಲ್ಲಿ ಸತತವಾಗಿ ಸೋತಿರುವುದೇ ಅವರಿಗಿರುವ ಅರ್ಹತೆ. ಬೆಂಗಳೂರು ವಕೀಲರ ಸಂಘದಲ್ಲೂ ಅವರ ಗೆಲುವು ಪುನರಾವರ್ತನೆಯಾಗಿಲ್ಲ. ಗೆದ್ದಾಗ ವಕೀಲರ ಪರ ಯಾವುದೇ ಕೆಲಸ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಸವಾಲು: ‘ಈ ಸಲ ಕೇವಲ 3 ತಿಂಗಳಷ್ಟೇ ಮತದಾರರ ನೋಂದಣಿಗೆ ಅವಕಾಶ ಸಿಕ್ಕಿದೆ. ಹಾಗಾಗಿ, ಮತದಾರರ ಸಂಖ್ಯೆ 19,177 ಇದೆ. ನಾನು ಬೋಗಸ್ ಮತದಾರರನ್ನು ಸೇರಿಸಿದ್ದರೆ ರಂಗನಾಥ್ ಸಾಬೀತುಪಡಿಸಲಿ. ಬೇಕಿದ್ದರೆ, ಅವರೇ ನೋಂದಣಿ ಮಾಡಿಸಲಿ. ಬಳಿಕವೇ ಚುಣಾವಣೆ ನಡೆಯಲಿ. ನಾನು ಅದಕ್ಕೂ ರೆಡಿ. ನನ್ನ ಹೋರಾಟ, ಕೆಲಸ ಹಾಗೂ ಸಾಮರ್ಥ್ಯ ನೋಡಿ ಬೆಂಬಲಿಸಿ ಎಂದು ಮತದಾರರಲ್ಲಿ ನಾನು ಕೇಳುತ್ತೇನೆ’ ಎಂದು ಸವಾಲು ಹಾಕಿದರು.

‘ನಾನು ಜೆಡಿಎಸ್ ಸೇರಿದ ಬಳಿಕ, ರಂಗನಾಥ್ ಬಿಜೆಪಿಯಿಂದ ಬಂದರು. ಇವರನ್ನು ಯಾರಿಗೆ ಪರಿಚಯಿಸಿದ್ದೆನೊ ಅವರ ಬಳಿಯೇ ನನ್ನ ವಿರುದ್ಧ ಚಾಡಿ ಹೇಳಿ, ನಮ್ಮಿಬ್ಬರ ನಡುವೆ ತಂದಿಡಲು ನೋಡಿದರು.‌ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವಾಗ ರಂಗನಾಥ್ ವಿರೋಧಿಸಿದ್ದರು. ಅವರು ಫಿಟ್ಟಿಂಗ್ ಇಡುವ ಪ್ರವೃತ್ತಿ ಬಿಡಬೇಕು’ ಎಂದು ಕಾಲೆಳೆದರು.

‘ಜೆಡಿಎಸ್–ಬಿಜೆಪಿ ಮೈತ್ರಿ ನನ್ನ ಗೆಲುವಿಗೆ ಸವಾಲಾಗುವುದಿಲ್ಲ. ಮತದಾರರು ಅಭ್ಯರ್ಥಿಯನ್ನು ನೋಡಿ ಆಯ್ಕೆ ಮಾಡುತ್ತಾರೆಯೇ ಹೊರತು, ಪಕ್ಷ ನೋಡಿ ಅಲ್ಲ. ನನಗೆ ಕಾಂಗ್ರೆಸ್ ಪಕ್ಷದ ಜೊತೆಗೆ ಪಕ್ಷಾತೀತವಾಗಿ ಶಿಕ್ಷಕರ ಬೆಂಬಲವಿದ್ದು, ಮತ್ತೆ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್ ಸಿ. ರಾಜು, ಮುಖಂಡರಾದ ವೆಂಕಟಸುಬ್ಬಯ್ಯ ಚೆಟ್ಟಿ, ಆರ್.ಕೆ. ಬೈರಲಿಂಗಯ್ಯ, ಪ್ರದೀಪ್ ಎಸ್, ದೀಪಕ್ ಹಾರೋಹಳ್ಳಿ, ಸುನೀಲ್, ನಿಂಗೇಗೌಡ, ಚನ್ನಪ್ಪ, ಪ್ರಮೋದ್, ಎ.ಬಿ. ಚೇತನ್, ಪ್ರಮೋದ್, ರಮೇಶ್ ಇದ್ದರು.

Cut-off box - ‘ರಂಗನಾಥ್‌ಗೆ ನೈತಿಕತೆ ಇದೆಯೇ?’ ‘ಬಿಜೆಪಿ ಅವಧಿಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ವೈ. ವಿಜಯೇಂದ್ರ ಅವರು ಸುಮಾರು 600 ಅಭ್ಯರ್ಥಿಗಳಿಂದ ₹25 ಲಕ್ಷದಿಂದ ₹75 ಲಕ್ಷ ಹಣ ಪಡೆದಿದು ಅಕ್ರಮ ಎಸಗಿದ್ದಾರೆಂದು ಲೋಕಾಯುಕ್ತಕ್ಕೆ ರಂಗನಾಥ್ ದೂರು ಕೊಟ್ಟಿದ್ದರು. ಈಗಲೂ ಅದಕ್ಕೆ ಬದ್ಧರಾಗಿದ್ದಾರೆಯೇ? ಪಿಎಸ್‌ಐ ನೇಮಕಾತಿ ಹಗರಣದಲ್ಲೂ ಇವರಿಬ್ಬರ ವಿರುದ್ಧ ದೂರು ಕೊಟ್ಟಿದ್ದರು. ಆ ಪ್ರಕರಣ ಮುಂದುವರಿಸುತ್ತಾರೆಯೇ? ಹಿಂದಿನ ಸಹಕಾರ ಸಚಿವ ಎಸ್‌.ಟಿ. ಸೋಮೇಶೇಖರ್ ಅವರ ಸಿ.ಡಿ ಇದ್ದು ಅದರ ತನಿಖೆಯಾಗಬೇಕು ಎಂದು ದೂರು ಕೊಟ್ಟಿದ್ದರು. ಅದು ಎಲ್ಲಿಗೆ ಬಂತು? ರಂಗನಾಥ್ ಯಾರ ವಿರುದ್ಧ ದೂರು ಕೊಟ್ಟಿದ್ದರೊ ಅವರನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಅವರಿಗೆ ನೈತಿಕತೆ ಇದೆಯೇ?’ ಎಂದು ಪುಟ್ಟಣ್ಣ ಪ್ರಶ್ನಿಸಿದರು. ‘ಒಪಿಎಸ್ ಆಶ್ವಾಸನೆ ಮೇರೆಗೆ ಕಾಂಗ್ರೆಸ್‌ ಸೇರಿದೆ’ ‘ಹಳೆ ಪಿಂಚಣಿ ವ್ಯವಸ್ಥೆಗಾಗಿ (ಒಪಿಎಸ್‌) ಹೋರಾಟ ನಡೆದಾಗ ಮೂವರು ಆತ್ಮಹತ್ಯೆ ಮಾಡಿಕೊಂಡರು. ಹಿಂದಿನ ಬಿಜೆಪಿ ಸರ್ಕಾರ ಈ ಕುರಿತು ಒಂದು ಸಭೆ ಸಹ ಮಾಡಲಿಲ್ಲ. ಬೇಸತ್ತು ಅಂದು ರಾತ್ರಿಯೇ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮನೆಗೆ ಹೋಗಿ ಒಪಿಎಸ್ ವಿಷಯ ಪ್ರಸ್ತಾಪಿಸಿದೆ. ಈ ವಿಷಯವನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಜಾರಿಗೊಳಿಸುವ ಭರವಸೆ ನೀಡಿದರು. ಬಳಿಕ ಕಾಂಗ್ರೆಸ್ ಸೇರಿದೆ. ಸರ್ಕಾರ ಒಪಿಎಸ್ ಜಾರಿಗೆ ಬದ್ಧವಾಗಿದೆ’ ಎಂದು ಪುಟ್ಟಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT