ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನೆಲ ಕಚ್ಚಲು ಜೆಡಿಎಸ್‌ ಕಾರಣ: ಪರಿಷತ್‌ ಸದಸ್ಯ ಲಿಂಗಪ್ಪ ಅಸಮಾಧಾನ

Last Updated 25 ಮೇ 2019, 12:58 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚಲು ಜೆಡಿಎಸ್‌ ಜೊತೆಗಿನ ಮೈತ್ರಿಯೇ ಕಾರಣ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಅಸಮಾಧಾನ ಹೊರಹಾಕಿದರು.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದವರು ಈ ಚುನಾವಣೆಯಲ್ಲಿ 12 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಕಡೆಗೆ 7 ಸ್ಥಾನ ಪಡೆದುಕೊಂಡರು. ಎರಡು ಕ್ಷೇತ್ರಗಳಲ್ಲಿ ಅವರಿಗೆ ಅಭ್ಯರ್ಥಿಯೇ ಸಿಗದೇ ನಮ್ಮವರನ್ನು ಅಭ್ಯರ್ಥಿ ಮಾಡಿದರು. ಉತ್ತರ ಕರ್ನಾಟಕದಲ್ಲಿ ನೆಲೆಯೇ ಇಲ್ಲದಿದ್ದರೂ ಅಲ್ಲೂ ಸ್ಪರ್ಧೆ ಮಾಡುವ ಇಂಗಿತ ತೋರಿದರು. ಇದೆಲ್ಲದರಿಂದಾಗಿಯೇ ಕಾಂಗ್ರೆಸ್‌ ರಾಜ್ಯದಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆಲ್ಲಲು ಸಾಧ್ಯವಾಯಿತು’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಅಕಸ್ಮಾತ್‌ ಅಧಿಕಾರ ಪಡೆದುಕೊಂಡವರಿಗೆ ದುರಹಂಕಾರ ಬಂದ ಕಾರಣ ಹೀಗಾಗಿದೆ. ಮೈತ್ರಿಯಿಂದ ಜೆಡಿಎಸ್‌ಗೆ ಮಾತ್ರ ಲಾಭ ಆಗಿದ್ದು, ಅದರಿಂದ ಬಂದ ಹಣವನ್ನು ಈ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಆದರೂ ಒಂದು ಸ್ಥಾನಕ್ಕಿಂತ ಹೆಚ್ಚು ಗೆಲ್ಲಲು ಆಗಿಲ್ಲ’ ಎಂದರು.

‘ಜೆಡಿಎಸ್‌ ನವರು ಕಾಂಗ್ರೆಸ್‌ಗೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇವೆ ಎಂದರೂ ನಾವು ಒಪ್ಪುವುದಿಲ್ಲ. ಬೇಕಿದ್ದರೆ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧ’ ಎಂದರು.

‘ನನ್ನ ಪರಿಷತ್‌ ಸದಸ್ಯತ್ವದ ಅವಧಿ ಇನ್ನೂ ನಾಲ್ಕು ವರ್ಷ ಇದೆ. ಆದರೆ ಅದನ್ನು ಪೂರೈಸುತ್ತೇನೋ ಇಲ್ಲವೋ ಗೊತ್ತಿಲ್ಲ. ರಾಜೀನಾಮೆ ಕೊಟ್ಟುಬಿಡಬೇಕು ಎಂದು ಎಷ್ಟೋ ಬಾರಿ ಯೋಚಿಸಿದ್ದೇನೆ’ ಎಂದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲಿಯೂ ಮೈತ್ರಿ ಏರ್ಪಟ್ಟಿರಲಿಲ್ಲ. ಅದೆಲ್ಲ ಕಾಂಗ್ರೆಸ್‌ನದ್ದೇ ಮತಗಳು. ಪ್ರತಿ ಸರಿ ಸರ್ಕಾರ ಉಳಿಸುವ ಪರಿಸ್ಥಿತಿ ಎದುರಾದಾಗಲೂ ಡಿ.ಕೆ. ಶಿವಕುಮಾರ್‌ ಬಂಡೆಗೆ ತಲೆ ಚಚ್ಚಿಕೊಂಡು ಅನುಭವಿಸುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಪಕ್ಷದ ಮುಖಂಡ ಕೆ. ಶೇಷಾದ್ರಿ ಮಾತನಾಡಿ ‘ಮೈತ್ರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಸಮ್ಮತಿ ಇಲ್ಲ. ಪಕ್ಷದ ವರಿಷ್ಠರು ಎಲ್ಲರ ಇಂಗಿತ ಅರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಈಗಾಗಲೇ ಪಕ್ಷದ ವರಿಷ್ಠರು ಹೇಳಿದ್ದಾರೆ. ಕಾಂಗ್ರೆಸ್‌ ಸ್ಪತಂತ್ರವಾಗಿಯೇ ಸ್ಪರ್ಧಿಸಲಿದೆ’ ಎಂದರು.

ಬಮುಲ್‌ ಚುನಾವಣೆಯಲ್ಲಿ ಮೈತ್ರಿ ಎಲ್ಲಿ?

‘ಬಮುಲ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ನರಸಿಂಹಮೂರ್ತಿ ಅವರ ಹೆಸರು ಅಂತಿಮಗೊಂಡಿತ್ತು. ಮುಖ್ಯಮಂತ್ರಿ ಕೂಡ ಇದಕ್ಕೆ ಒಪ್ಪಿದ್ದರು. ಆದರೆ ರಾತ್ರೋರಾತ್ರಿ ಹಳೆಯ ಪ್ರಕರಣ ಕೆದಕಿ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಇದರಲ್ಲಿ ಜೆಡಿಎಸ್ ಕೈಗಳೇ ಕೆಲಸ ಮಾಡಿದವು. ಇಲ್ಲಿ ಮೈತ್ರಿ ಧರ್ಮ ಎಲ್ಲಿ ಹೋಯಿತು’ ಎಂದು ಲಿಂಗಪ್ಪ ಪ್ರಶ್ನಿಸಿದರು.

ಸುಮಲತಾಗೆ ಹೊಗಳಿಕೆ

‘ಒಬ್ಬ ಹೆಣ್ಣಾಗಿ ಜೆಡಿಎಸ್‌ ಕುತಂತ್ರಗಳನ್ನು ದಿಟ್ಟವಾಗಿ ಎದುರಿಸಿ ಗೆಲುವು ಸಾಧಿಸಿದ ಮಂಡ್ಯದ ಸುಮಲತಾರನ್ನು ನಾವೆಲ್ಲರೂ ಅಭಿನಂದಿಸಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಡೀ ಚುನಾವಣೆಯಲ್ಲಿ ಅವರ ನಡೆ–ನುಡಿ ಎಲ್ಲರ ಗಮನ ಸೆಳೆಯಿತು. ಎಲ್ಲಿಯೂ ಆಕೆ ಧೃತಿಗೆಡಲಿಲ್ಲ. ಮಂಡ್ಯದಲ್ಲಿ ಬಹುಸಂಖ್ಯಾತರಾಗಿರುವ ಕಾಂಗ್ರೆಸಿಗರು ಅವರ ಬೆನ್ನಿಗೆ ನಿಂತರು. ಅಲ್ಲಿ ಸ್ವಾಭಿಮಾನದ ಅಲೆ ಪ್ರಮುಖವಾಗಿ ಕೆಲಸ ಮಾಡಿತು. ಅಂಬರೀಷ್‌ ಬಗೆಗಿನ ಅಭಿಮಾನವೂ ಹೆಚ್ಚಿನ ಮತ ಗಳಿಕೆಗೆ ಸಾಧ್ಯವಾಯಿತು’ ಎಂದು ಲಿಂಗಪ್ಪ ವಿಶ್ಲೇಷಿಸಿದರು.

*ಜೆಡಿಎಸ್‌ ಜೊತೆ ಮೈತ್ರಿ ಬೇಕೋ ಬೇಡವೋ ಎಂಬುದರ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದೊಳಗೇ ಆಂತರಿಕ ಮತದಾನ ನಡೆಸಿ ಅಭಿಪ್ರಾಯ ಪಡೆಯಬೇಕು
–ಸಿ.ಎಂ. ಲಿಂಗಪ್ಪ
ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT